ಬೇಸಿಗೆ ರಜೆ ಈಗಾಗಲೇ ಪ್ರಾರಂಭವಾಗಿದ್ದು, ಮಕ್ಕಳು ತಮ್ಮದೇ ಆದ ರೀತಿಯಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಯಾವ ರೀತಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಜೆಯನ್ನು ಸದುಪಯೋಗ ಪಡಿಸಲು ಪೋಷಕರಿಗೆ ಕೆಲವೊಂದು ಕಿವಿ ಮಾತನ್ನು ಹೇಳಲಾಗಿದೆ.
ಹೊಸ ಬಗೆಯ ಕಲಿಕೆ :
ಬೇಸಿಗೆ ರಜೆಯಲ್ಲಿ ಪೋಷಕರು ಮಕ್ಕಳನ್ನು ಶಿಬಿರಗಳಿಗೆ ಸೇರಿಸಿ ಸುಮ್ಮನಾಗಿರುತ್ತಾರೆ. 15 ದಿನಗಳ ಕಾಲ ಅಲ್ಲಿ ಏನೇನು ಕಲಿತು ಬಂದ ಮಕ್ಕಳು ಮನೆಗೆ ಬಂದವರೇ ಅದನ್ನೆಲ್ಲ ಮರೆತು ಮೊದಲಿನ ಹಾಗೆ ಮೊಬೈಲ್ ಮತ್ತು ಟಿವಿಯ ಲೋಕದಲ್ಲಿ ಮಗ್ನರಾಗಿರುತ್ತಾರೆ. ಆದರೆ ಪೋಷಕರಾದ ನಾವು ಅವರನ್ನು ಆ ರೀತಿ ಬೆಳೆಯಲು ಬಿಡಿದೆ ವಿವಿಧ ರೀತಿಯ ಡ್ರಾಯಿಂಗ್, ಕ್ರಾಫ್ಟ್, ನೃತ್ಯ, ಯೋಗ, ಈಜು ಹೀಗೆ ಅವರಿಗೆ ಇಷ್ಟವಾದ ಯಾವುದಾದರೂ ಒಂದು ಹೊಸ ವಿದ್ಯೆಯನ್ನು ಅವರಿಗೆ ಕಲಿಯುವಂತೆ ಪ್ರೋತ್ಸಾಹ ನೀಡಬೇಕು. ನಮಗೆ ತಿಳಿದಷ್ಟು ವಿದ್ಯೆಯನ್ನು ಹೇಳಿಕೊಡುತ್ತ ನಮಗೆ ಗೊತ್ತಿಲ್ಲದನ್ನು ಆನ್ ಲೈನ್ ಗುರುವಿನ ಸಹಾಯ ಪಡೆದು ಮಕ್ಕಳಿಗೆ ಹೊಸ ಬಗೆಯ ಕಲಿಕೆಯತ್ತ ಅವರನ್ನು ತೊಡಗಿಸಬೇಕು.
ವ್ಯಾಯಾಮ :
ಪೋಷಕರು ರಜಾ ಸಮಯದಲ್ಲಿ ಮಕ್ಕಳಿಗೆ ರುಚಿರುಚಿಯಾದ ಎಣ್ಣೆ ಕಜ್ಜಾಯ ಅಥವಾ ಹೊರಗಡೆ ಕರೆದುಕೊಂಡು ಹೋಗಿ ಹೋಟೆಲ್ ಫುಡ್ ಗಳನ್ನು ಕೊಡಿಸುತ್ತಿರುತ್ತಾರೆ. ಅದನ್ನು ತಿಂದು ಮಕ್ಕಳಿಗೆ ಬೊಜ್ಜು ಬರಲು ಶುರುವಾಗುತ್ತದೆ. ಇದರಿಂದ ಮುಂದೆ ಸಮಸ್ಯೆಗೆ ಸಿಲುಕಿ ಕೊಳ್ಳಬಾರದು ಎಂಬ ಯೋಚನೆ ಇದ್ದರೆ ಮಕ್ಕಳಿಗೆ ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಲು ಹೇಳಿಕೊಡಬೇಕು. ಬೆಳಿಗ್ಗೆ ತಡವಾಗಿ ಏಳಲು ಬಿಡದೆ ಬೇಗ ಎಬ್ಬಿಸಿ, ಅವರಿಗೆ ಲಘು ವ್ಯಾಯಾಮಗಳನ್ನು ಮಾಡಿಸುವುದು ಅತ್ಯಗತ್ಯ. ಎಳೆ ಬಿಸಿಲಿನಲ್ಲಿ ಸೂರ್ಯ ನಮಸ್ಕಾರ ಮಾಡಿದರೆ ದೇಹಕ್ಕೆ ವಿಟಮಿನ್ ಡಿ ಕೂಡ ಲಭಿಸುತ್ತದೆ. ಸಂಜೆಯ ವೇಳೆಗೆ ಅರ್ಧ ಗಂಟೆ ವಾಕಿಂಗ್ ಅಥವಾ ಸೈಕ್ಲಿಂಗ್ ಮಾಡಿಸಿ ಮಕ್ಕಳ ಸಾಕಷ್ಟು ಕ್ಯಾಲೋರಿಗಳನ್ನು ದಹಿಸಬಹುದು.
ಪರಿಸರ ಪ್ರೇಮ :
ಮನೆಯ ಮುಂದೆ ಜಾಗವಿದ್ದರೆ ಸಣ್ಣಪುಟ್ಟ ಗಿಡಗಳನ್ನು ನೆಡೆಸಿ ಮಕ್ಕಳ ಹತ್ತಿರವೇ ಅದರ ಆರೈಕೆ ಮಾಡಲು ತಿಳಿಸಿಕೊಡುವುದು ಅದಕ್ಕೆ ದಿನಾಲು ನೀರು ಹಾಕಲು ಹೇಳಿ ಮಕ್ಕಳಲ್ಲಿ ಪೋಷಕರು ಪರಿಸರ ಪ್ರೇಮ ಬೆಳೆಸಬೇಕು.
ಓದು ಬರಹ:
ಬಿಡುವಿನ ಸಮಯದಲ್ಲಿ ಹೊಸ ವಿಷಯಗಳ ಬಗ್ಗೆ ಸ್ವಲ್ಪ ಓದಿಸಿ ಬರೆಯುವುದನ್ನು ಹೇಳಿಕೊಡಬೇಕು. ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ತಂದು ಕೊಟ್ಟು ಓದಲು ಪೋಷಕರು ಪ್ರೇರೇಪಿಸಬೇಕು.
ಮನೆ ಕೆಲಸದಲ್ಲಿ ಸಹಾಯ:
ಮಕ್ಕಳಿಂದ ಚಿಕ್ಕ ಪುಟ್ಟ ಚಿಕ್ಕ ಕೆಲಸಗಳನ್ನು ಮಾಡಿಸುತ್ತಿರಬೇಕು. ದೇವರಿಗೆ ಹೂವು ಕೊಯ್ಯುವುದು, ಮನೆಯ ಮುಂದೆ ಗುಡಿಸಿ ರಂಗೋಲಿ ಹಾಕುವುದು, ಮನೆಯನ್ನು ಶುಚಿಗೊಳಿಸುವುದು, ಒಗೆದಿಟ್ಟ ಬಟ್ಟೆಗಳನ್ನು ಮಡಚಿಡಲು ಹೇಳುವುದು ಹೀಗೆ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ಹೇಳಿ ಅವರು ಮುಂದೆ ಸ್ವಾವಲಂಬಿ ಜೀವನ ಸಾಗಿಸಲು ಪೋಷಕರು ಇಂದು ಬುನಾದಿ ಹಾಕಿ ಕೊಡುವುದು ಒಳ್ಳೆಯದು.