ಮಂಗಳೂರು: ಹೈದಾರ್ಬಾದ್ ಮೂಲದ ನವಯುಗ ಸಂಸ್ಥೆಯ ಸುಪರ್ದಿಯಲ್ಲಿದ್ದ ಮಂಗಳೂರು-ಉಡುಪಿ-ಕುಂದಾಪುರ ಟೋಲ್ ರಸ್ತೆಯನ್ನು ಅಮೆರಿಕಾ ಮೂಲದ ಖಾಸಗಿ ಸಂಸ್ಥೆ ಈಕ್ವಿಟಿ ಸಂಸ್ಥೆ ಕೋಲ್ಬರ್ಗ್ ಕ್ರಾವಿಸ್ ರಾಬರ್ಟ್ (ಕೆಕೆಆರ್) ಅಂದಾಜು 924 ಕೋಟಿ ರೂ ಗಳಿಗೆ ಖರೀದಿಯನ್ನು ಮಾಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಟೋಲ್ ರೋಡ್ ನಿರ್ವಾಹಣೆಯ ಖರೀದಿಗಾಗಿ ಕೆಕೆಆರ್ ಕೆಲವು ದಿನಗಳ ಹಿಂದೆ ನವಯುಗದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ 2025 ರವರೆಗೆ ಉಡುಪಿ ಮಂಗಳೂರು ಕುಂದಾಪುರ ಟೋಲ್ ರಸ್ತೆಯನ್ನು ಕೆಕೆಆರ್ ಸಂಸ್ಥೆ ನಿರ್ವಹಿಸಲಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆದುಕೊಂಡು ಕೆಕೆಅರ್ ನಿರ್ವಹಣೆಯ ಕಾರ್ಯವನ್ನು ಪ್ರಾರಂಭಿಸಲಿದೆ.
ನವಯುಗ ಸಂಸ್ಥೆಯು ಕರ್ನಾಟಕದ ಉಡುಪಿ ಟೋಲ್ವೇ ವಿಭಾಗದಲ್ಲಿ 90 ಕಿಮೀ ರಸ್ತೆ ಯೋಜನೆಯನ್ನು ಹೊಂದಿದೆ ಮತ್ತು ನಿರ್ವಹಿಸುತ್ತದೆ. ಮುಂಬೈನಿಂದ ಕನ್ಯಾಕುಮಾರಿಯನ್ನು ಸಂಪರ್ಕಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ-ಸುರತ್ಕಲ್ ವಿಭಾಗದಲ್ಲಿ 74.8 ಕಿಮೀ ಮತ್ತು ಮಂಗಳೂರು-ಕೇರಳ ಗಡಿ ವಿಭಾಗ 15.3 ಕಿಮೀ ರಸ್ತೆಯನ್ನು ನವಯುವ ಸಂಸ್ಥೆ ನಿರ್ವಹಿಸುತ್ತಿದೆ.
2010ರಿಂದ ನವಯುಗ ಸಂಸ್ಥೆಯು ಟೋಲ್ ರಸ್ತೆಯನ್ನು25 ವರ್ಷಗಳ ವರೆಗೆ ನಿರ್ವಹಣೆಯ ಟೆಂಡರನ್ನು ಹೊಂದಿದೆ. 2017 ರಿಂದ 90 ಕಿ.ಮೀ ರಸ್ತೆಯಲ್ಲಿ ಪ್ರತಿ ವರ್ಷವು 80 ಕೋಟಿ ರೂ. ಟೋಲ್ಅನ್ನು ಸಂಗ್ರಹಿಸಲಾಗುತ್ತಿದೆ.
ಕೆಕೆಆರ್ ಸಂಸ್ಥೆ ಭಾರತದಲ್ಲಿ ಈಗಾಗಲೇ ಏಳು ರಾಜ್ಯಗಳಲ್ಲಿ ಟೋಲ್ ನಿರ್ವಹಣ ಟೆಂಡರನ್ನು ಪಡೆದುಕೊಂಡಿದೆ. ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ. ಐದು ಟೋಲ್ ರಸ್ತೆಗಳು ಮತ್ತು ಎರಡು ವಾರ್ಷಿಕವಾಗಿ ಒಪ್ಪಂದ ವಿಸ್ತಾರವಾಗುವ ರಸ್ತೆಗಳನ್ನು ಹೊಂದಿದೆ.
ಪ್ರಸ್ತುತ ಕೆಕೆಆರ್ ಸಂಸ್ಥೆಯು ಜೋಧ್ಪುರ ಪಾಲಿ ಎಕ್ಸ್ಪ್ರೆಸ್ವೇ, ಗೋದ್ರಾ ಎಕ್ಸ್ಪ್ರೆಸ್ವೇಗಳು, ದೇವಾಸ್ ಭೋಪಾಲ್ ಕಾರಿಡಾರ್, ಉಲುಂದೂರ್ಪೇಟ್ ಎಕ್ಸ್ಪ್ರೆಸ್ವೇಗಳು, ಸಾಮಾನ್ಯ ಬಿಒಟಿ ಮತ್ತು ಶಿಲ್ಲಾಂಗ್ ಎಕ್ಸ್ಪ್ರೆಸ್ವೇ ಯನ್ನು ನಿರ್ವಹಿಸುತ್ತಿದೆ.