ಮುಂಬಯಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡಲಿರುವ ಜನಪ್ರಿಯ ’ಕೌನ್ ಬನೇಗ ಕರೋಡ್ ಪತಿ’ ತನ್ನ 15ನೆಯ ಸೀಸನ್ ಮೂಲಕ ಮರಳಿ ಬರಲಿದೆ. ಶೋನ ತಯಾರಕರು ಏಪ್ರಿಲ್ 29ರಿಂದ ರಿಜಿಸ್ಟ್ರೇಷನ್ ಪ್ರಾರಂಭಿಸುವುದಾಗಿ ಘೋಷಿಸುವ ಪ್ರೋಮೊವೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಪ್ರೋಮೊದಲ್ಲಿ ನಿರೂಪಕರ ಕುರ್ಚಿಯಲ್ಲಿ ಅಮಿತಾಬ್ ಬಚ್ಚನ್ ಕೂತಿದ್ದು, ಹಾಟ್ ಸೀಟ್ ತಲುಪಲು ಮಹಿಳೆಯೋರ್ವರು ಮ್ಯಾಪ್ ನೋಡುತ್ತಿರುವುದನ್ನು ತೋರಿಸಲಾಗಿದೆ. ಅಂತಿಮವಾಗಿ ಆಕೆ ನೆಲವನ್ನು ಅಗೆಯುವ ಮೂಲಕ ಹಾಟ್ ಸೀಟ್ ತಲುಪುತ್ತಾರೆ. ಆಕೆ ಬಿಗ್ ಬಿ ಯ ಬಳಿ ಆಟ ಶುರು ಮಾಡಲು ಹೇಳಿದಾಗ ಬಿಗ್ ಬಿ ’ಹಾಟ್ ಸೀಟ್ ತಲುಪುವುದಕ್ಕಾಗಿ ಅಡ್ಡದಾರಿ ಹಿಡಿಯಬೇಡಿ’ ಎಂದು ಹೇಳುತ್ತಾರೆ. ಮತ್ತು ಫೋನ್ ತೆಗೆದುಕೊಂಡು ಏಪ್ರಿಲ್ 29 ರ ರಾತ್ರಿ 9 ಗಂಟೆಯ ಬಳಿಕ ನೋಂದಣಿ ಮಾಡುವುದೊಂದೇ ದಾರಿ ಎಂದು ತಿಳಿಸುತ್ತಾರೆ. ’ನನ್ನ ಪ್ರಶ್ನೆಗೆ ಉತ್ತರಿಸಿ ಮತ್ತು ನಿಮ್ಮ ನೋಂದಣಿ ಶುರುವಾಗುತ್ತದೆ’ ಎಂದು ನಿರೂಪಕರು ಹೇಳುತ್ತಾರೆ.
ಕೆಬಿಸಿಯ 14ನೇ ಆವೃತ್ತಿಯು 2022ರ ಆಗಸ್ಟ್ 7 ರಂದು, ಆಝಾದಿ ಕಾ ಅಮೃತ್ ಮಹೋತ್ಸವ್ ಸಂಭ್ರಮಾಚರಣೆಯ ಸಂದರ್ಭದಂದು ಪ್ರಾರಂಭವಾಗಿತ್ತು. ಇದರಲ್ಲಿ ಅಮೀರ್ ಖಾನ್ ಅಲ್ಲದೇ ಮೇರಿಕೋಮ್, ಸುನಿಲ ಚೆಟ್ರಿಯಂತಹ ಕ್ರೀಡಾ ತಾರೆಗಳು, ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳಾ ಆಫಿಸರ್ ಮಿಥಾಲಿ ಮಧುಮಿತಾ, ದೇಶದ ಮೊದಲ ಬ್ಲೇಡ್ ಓಟಗಾರ ಮೇಜರ್ ಡಿ ಪಿ ಸಿಂಗ್ ಮತ್ತಿತರರು ಭಾಗವಹಿಸಿದ್ದರು.
ಈ ಆವೃತ್ತಿಯು 2022ರ ಡಿಸೆಂಬರ್ 30 ರಂದು ಮುಕ್ತಾಯಗೊಂಡಿತ್ತು. ಅಕ್ಷಯ್ ಕುಮಾರ್, ಪದ್ಮಶ್ರೀ ಡಿ ಜಿ ಪ್ರಕಾಶ್ ಸಿಂಗ್, ವಿಕ್ಕಿ ಕೌಶಾಲ್, ಕಿಯಾರ ಅಡ್ವಾಣಿ, ಶಿಲ್ಪಾ ರಾವ್ ಮತ್ತು ಅನೇಕರು ಇದರಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮವು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾಗುತ್ತದೆ.