ನಾನು ಸಾಧಾರಣ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಾಲೆಗೆ ಯಾರಾದರೂ ಅತಿಥಿಗಳು ಬಂದಾಗ ಅವರು ಕೇಳುವ ಪ್ರಶ್ನೆಗೆ ಉತ್ತರಿಸಲು ನನ್ನ ಟೀಚರ್ ನನ್ನನ್ನು ಮತ್ತು ಸ್ನೇಹಿತರನ್ನು ಹುರಿದುಂಬಿಸುತ್ತಿದ್ದರು. ಆದರೆ ಅವಾಗೆಲ್ಲ ನಾವು ಮಾತಾಡುವುದು ಎಲ್ಲಿ ತಪ್ಪಾಗುತ್ತದೆಯೋ, ಅಥವಾ ನಮ್ಮ ಇಂಗ್ಲಿಷ್ (ಕನ್ನಡ ಮೀಡಿಯಂ ಆದ್ರಿಂದ) ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ, ಸರಿ ಉತ್ತರ ಗೊತ್ತಿದ್ದರೂ ಮಾತನಾಡದೆ, ಬಂದ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆವು.
ನಾವು ಸಣ್ಣ ವಯಸ್ಸಿನ್ನಿಂದ ಹಿಡಿದು ವಯಸ್ಕರಾಗಿ ಇರುವಾಗಲೂ ಒಂದಿಲ್ಲೊಂದು ಕಾರಣಕ್ಕೆ ನಮ್ಮ ಬಗ್ಗೆ ಕೀಳರಿಮೆ ಹೊಂದಿರುತ್ತೀವೆ. ನಮ್ಮ ಶಕ್ತಿ, ಸಾಮರ್ಥ್ಯದ ಬಗ್ಗೆ ನಮ್ಮಲ್ಲಿ ಧನಾತ್ಮಕ ಭಾವನೆ ಅಷ್ಟಾಗಿ ಇರುವುದಿಲ್ಲ.ಅನೇಕರಿಗೆ ತಮ್ಮ ಬಗ್ಗೆ ಗೌರವ, ಅಭಿಮಾನವಿರುವುದಿಲ್ಲ. ಇತರರೊಡನೆ ತಮ್ಮನ್ನು ಹೋಲಿಸಿಕೊಂಡು, ಕೀಳರಿಮೆಯನ್ನಿಟ್ಟು ಕೊಂಡಿರುತ್ತಾರೆ. ತಲೆ ತಗ್ಗಿಸಿಕೊಂಡಿರುತ್ತಾರೆ. ಸ್ಪರ್ಧಿಸಲು ಹಿಂಜರಿಯುತ್ತಾರೆ.
ಇದಕ್ಕೆ ಕಾರಣಗಳು ಹಲವಾರು.
*ನನ್ನ ಮೈಬಣ್ಣ ಕಪ್ಪು ನೋಡಲು ನಾನು ಅಂದವಾಗಿಲ್ಲ.
*ನಾನು ಸಣ್ಣಗಿದ್ದೇನೆ. ನರಪೇತಲ. ನಾನು ದಪ್ಪಗಿದ್ದೇನೆ.
*ನನ್ನ ದೈಹಿಕಶಕ್ತಿ- ಸ್ನಾಯುಗಳು ಬಲುಕಡಿಮೆ.
*ನಾನು ಕೆಳವರ್ಗ – ಜಾತಿಗೆ ಸೇರಿದವನು.
*ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದವನು.
*ನನ್ನ ತಂದೆತಾಯಿಗಳು ಬಡವರು.
*ನಾನು ಒಳ್ಳೆಯ ಉದ್ಯೋಗದಲ್ಲಿಲ್ಲ.
*ನನಗೆ ಎಲ್ಲರೂ ಮೆಚ್ಚುವ ಹಾಗೆ ಅಲಂಕಾರ ಮಾಡಿಕೊಳ್ಳಲು ಬರುವುದಿಲ್ಲ .
*ನನ್ನ ಧ್ವನಿ, ಮಾತಾಡುವ ರೀತಿ ಚೆನ್ನಾಗಿಲ್ಲ.
*ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುವುದಿಲ್ಲ.
*ನನಗೆ ವ್ಯವಹಾರ ಜ್ಞಾನ ಕಡಿಮೆ. ಬೇರೆಯವರಿಂದ ಸುಲಭವಾಗಿ ಮೋಸ ಹೋಗುತ್ತೇನೆ.
ಧೈರ್ಯವಿಲ್ಲ. ನಾನೊಬ್ಬ ಅಂಜುಬುರುಕ. ಒಬ್ಬನೇ ಪ್ರಯಾಣ ಮಾಡಲಾರೆ, ದೂರದ ಊರಿಗೆ ಹೋಗಿ ಬರಲಾರೆ.
*ಯಾವ ಸಂದರ್ಭದಲ್ಲಿ, ಯಾರೊಡನೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯುವುದಿಲ್ಲ, ಇತ್ಯಾದಿ
ಇಂತಹ ಯೋಚನೆಗಳು ನಮ್ಮನ್ನು ಇನ್ನಷ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ.ಹಾಗೂ ಇಂತಹ ಯೋಚನೆಗಳಿಂದ ನಾವು ಅನೇಕ ಸಂದರ್ಭದಲ್ಲಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ.
ಹಾಗಾದರೆ ಈ ಕೀಳರಿಮೆಗೆ ಕಾರಣ ಏನಿರಬಹುದು?
ಕೀಳರಿಮೆಗೆ ಇಂತಹದ್ದೇ ಕಾರಣಗಳು ಎಂದೇನಿಲ್ಲ. ಮನೆಯಲ್ಲಿ ತಂದೆ ತಾಯಿ ಸಣ್ಣ ವಯಸ್ಸಿನಲ್ಲೆ ಅವರ ಮಕ್ಕಳನ್ನು ಅಣ್ಣ ತಮ್ಮಂದಿರೊಂದಿಗೆ ಅಥವಾ ಬೇರೆಯವರೊಂದಿಗೆ ಹೋಲಿಕೆ ಮಾಡುವುದು, ಮಕ್ಕಳ ಸಾಮರ್ಥ್ಯದ ಬಗ್ಗೆ ಅರಿವಿಲ್ಲದೆ, ಅವರಿಗೆ ಆಸಕ್ತಿ ಇಲ್ಲದ ಕೆಲಸದಲ್ಲಿ ಒತ್ತಡ ಹೇರುವುದು, ಮಕ್ಕಳ ಬಣ್ಣ, ದೇಹದ ಗಾತ್ರದ ಬಗ್ಗೆ ಲಘುವಾಗಿ ಮಾತಾಡುವುದು, ಇವೆಲ್ಲ ಒಟ್ಟಾಗಿ ಅವರ ಬಗ್ಗೆ ಅವರಿಗೆ ಒಲವಿಲ್ಲದಂತೆ ಮಾಡುತ್ತದೆ. ಇದೆ ಮುಂದೆ ವಯಸ್ಕರಾಗುವಾಗಲೂ ಮುಂದುವರೆಯುತ್ತದೆ.
ಹಾಗಾದರೆ ಕೀಳರಿಮೆ ಹೋಗಲಾಡಿಸುವುದು ಹೇಗೆ?
ನಾವೆಲ್ಲ ಪ್ರಕೃತಿಯ ಸೃಷ್ಟಿ. ಯಾವ ತಂದೆ ತಾಯಿ ನಮ್ಮ ಜನ್ಮಕ್ಕೆ ಕಾರಣರಾಗುತ್ತಾರೆ, ನಾವು ಎಲ್ಲಿ ಯಾವ ಕುಲದಲ್ಲಿ ಹುಟ್ಟುತ್ತೇವೆ, ನಮ್ಮ ಬಣ್ಣ ಹೇಗಿರುತ್ತದೆ, ನಮ್ಮ ಶರೀರದ ರೂಪುರೇಖೆ ಹೇಗಿರುತ್ತದೆ ಎಂಬುದರ ಮೇಲೆ ನಮ್ಮ ಹತೋಟಿ ಇಲ್ಲ. ಪ್ರಕೃತಿ ಇತ್ತ ನಮ್ಮ ಶರೀರ, ಹಿನ್ನೆಲೆಯನ್ನು ಗೌರವದಿಂದ ಒಪ್ಪಿಕೊಳ್ಳೋಣ. ನಮ್ಮ ಪ್ರತಿ ಜೀವಕೋಶದಲ್ಲಿರುವ 23 ವರ್ಣತಂತುಗಳ ಮೇಲಿರುವ 20000 ವಂಶವಾಹಿನಿಗಳು ನಮ್ಮ ದೈಹಿಕ – ಮಾನಸಿಕ ಗುಣಲಕ್ಷಣಗಳಿಗೆ ಕಾರಣವಾಗುತ್ತವೆ. ನಾವು ಬೆಳೆದ ಪರಿಸರ ಪ್ರಭಾವ ಬೀರುತ್ತದೆ. ಅಂದರೆ ನಮ್ಮ ಮೈಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ, ನಮ್ಮ ತಂದೆತಾಯಿ, ನಾವು ಹುಟ್ಟಿದ ಪರಿಸರವನ್ನು ದೂರ ಮಾಡಲಾಗುವುದಿಲ್ಲ, ಇತರರೊಡನೆ ಹೋಲಿಸಿಕೊಳ್ಳಲೇಬಾರದು, ನಾವು ನಾವೇ. ಇತರರು ಇತರರೇ. ಅವರಂತೆ ನಾವಾಗಬೇಕಿಲ್ಲ, ನಮ್ಮಂತೆ ಅವರಾಗಬೇಕಿಲ್ಲ, ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದು, ನಮ್ಮ ತಿಳುವಳಿಕೆಯನ್ನು, ಕೌಶಲಗಳನ್ನು , ಉತ್ತಮಪಡಿಸಿಕೊಳ್ಳಬಹುದು, ನಮ್ಮನಡೆ-ನುಡಿಗಳನ್ನು ಬದಲಿಸಬಹುದು, ಯಾವುದಾದರೂಂದು ವಿಷಯದಲ್ಲಿ ನಾವು ಸಾಧಕರಾಗಬಹುದು.