ಹುಲಿವೇಷ ಹಾಕುವುದು ಸಾಮಾನ್ಯವಾಗಿ ಕರ್ನಾಟಕ ತುಂಬೆಲ್ಲ ಕಂಡುಬರುವ ಒಂದು ಜನಪದ ಕಲೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ವೇಷ ಹೆಚ್ಚಾಗಿ ಹಾಕುತ್ತಾರೆ. ಉರುಸು ಜಾತ್ರೆ ಹಬ್ಬಗಳಲ್ಲಿಯೂ ಹುಲಿವೇಷ ಧರಿಸುತ್ತಾರೆ. ಬಿಸಿಲು ಮಳೆ ಚಳಿಯಲ್ಲಿ ಬರಿಮೈಯಲ್ಲಿ ನಿಂತು ಸಹಿಸಿಕೊಂಡು ಕುಣಿದು ಕುಪ್ಪಳಿಸುವ ಶಕ್ತಿಯುಳ್ಳ ಕುಣಿತ. ಯಾವ ಜನಾಂಗದ ವ್ಯಕ್ತಿಯಾದರೂ ಹುಲಿವೇಷ ಹಾಕಬಹುದು. ಹುಲಿವೇಷ ಹಾಕುವವರು ಸಾಮಾನ್ಯವಾಗಿ ವಯಸ್ಸ್ಕರಾಗಿರುತ್ತಾರೆ. ಕೆಲವರು ಹರಕೆ ಹೊತ್ತವರೂ ವೇಷ ಧರಿಸುತ್ತಾರೆ. ಮನರಂಜನೆಗಾಗಿ ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ಕಲಾವಿದರೂ ಇದ್ದಾರೆ.
ಹುಲಿವೇಷದಲ್ಲಿ ಪ್ರಮುಖವಾದದ್ದು ಬಣ್ಣಗಾರಿಕೆ. ಹುಲಿವೇಷಗಾರರು ಒಳ್ಳೆಯ ಕಲಾವಿದನ ಹತ್ತಿರ ಹೋಗಿ ಬಣ್ಣ ಬರೆಯಿಸಿಕೊಂಡು ಬರುತ್ತಾರೆ. ಮುಖಕ್ಕೆ ಹುಲಿಯ ಮುಖವಾಡವನ್ನು ಧರಿಸುತ್ತಾರೆ. ಮೈಗೆ ಹುಲಿಯ ಚರ್ಮವನ್ನು ಹೋಲುವಂತಹ ಹಳದಿ ಕಪ್ಪು ಪಟ್ಟೆಗಳನ್ನು ಬಳಿದುಕೊಂಡಿರುತ್ತಾರೆ. ಹಲಗೆ ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಹುಲಿ ವೇಷದಾರಿಗಳು ಕುಣಿಯುತ್ತಾರೆ. ಮರಿ ಹುಲಿ ಜೊತೆಗಿದ್ದರೆ ಕುಣಿತಕ್ಕೆ ಹೆಚ್ಚಿನ ಕಳೆ ಬರುತ್ತದೆ. ಮೇಲಿಂದ ಮೇಲೆ ಗಿರಿಕಿ ಹೊಡೆಯುತ್ತಾ, ಹುಲಿಯಂತೆ ನಟನೆ ಮಾಡುತ್ತಾ, ಕೆಲವರ ಮೇಲೆರಿ ಹೋಗುವಂತೆ ಮಾಡಿ ಅಂಜಿಸುತ್ತ ಜನರನ್ನು ರಂಜಿಸುತ್ತಾರೆ. ವಾದ್ಯಗಳ ಬಡಿತ ತೀವ್ರವಾದಂತೆ ಕುಣಿತ ತೀವ್ರವಾಗುತ್ತದೆ.
ನವರಾತ್ರಿ ಬಂತೆಂದರೆ ಕರಾವಳಿಯಲ್ಲಿ ಹುಲಿ ವೇಷ ಕುಣಿತ ಗಮನ ಸೆಳೆಯುತ್ತದೆ. 9 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿ ಹುಲಿ ವೇಷದ ನರ್ತನಗಳು ಹಬ್ಬಕ್ಕೆ ಮೆರುಗು ನೀಡುತ್ತದೆ. ಆದರೆ ಇಲ್ಲಿನ ದೇವಿ ದೇವಸ್ಥಾನಗಳೇ ಹುಲಿವೇಷದ ಮೂಲ ಮತ್ತು ಆರಾಧನೆಯೇ ಇದರ ಮೂಲ ಉದ್ದೇಶ ಎಂಬುದು ಬಲ್ಲವರ ಅಭಿಪ್ರಾಯ. ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೂರಾರು ದೇವಿ ದೇವಸ್ಥಾನಗಳನ್ನು ಕಾಣಬಹುದು. ಅದರಲ್ಲೂ ದುರ್ಗಾ ಪರಮೇಶ್ವರಿ ದೇವಸ್ಥಾನಗಳದ್ದೇ ಸಿಂಹಪಾಲು. ಕಟೀಲು, ಬಪ್ಪನಾಡು, ಮಲ್ಲ, ಪೊಳಲಿ, ಮಂಗಳಾದೇವಿ, ಕೊಲ್ಲೂರು, ಅಂಬಲಪಾಡಿ ಇಲ್ಲಿನ ಪ್ರಸಿದ್ಧ ಶಕ್ತಿಕೇಂದ್ರಗಳು. ಅಂದುಕೊಂಡದ್ದು ನಡೆದರೆ ನವರಾತ್ರಿ ವೇಳೆ ಹುಲಿ ವೇಷ ಹಾಕಿ ದೇವರ ಮುಂದೆ ನರ್ತಿಸುತ್ತೇನೆ ಎಂದು ಇಲ್ಲಿ ದೇವಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ಇದೆ.
ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರೆ, ಮತ್ತೆ ಕೆಲವರು ಪ್ರತಿವರ್ಷವೂ ದೇವಿಯ ಸೇವೆ ಮಾಡುವುದಾಗಿ ಸಂಕಲ್ಪಿಸಿ ಹುಲಿ ವೇಷ ಹಾಕುತ್ತಾರೆ. ಇನ್ನು ನವರಾತ್ರಿ ಹುಲಿವೇಷವೇ ಹಾಕಲು ಒಂದು ಪ್ರಬಲವಾದ ಕಾರಣವಿದೆ. ಒಂದು ನಂಬಿಕೆಯ ಪ್ರಕಾರ ದುರ್ಗಾಪರಮೇಶ್ವರಿಯ ವಾಹನ ಹುಲಿ. ಹುಲಿಯ ವೇಷ ಹಾಕಿ ಕುಣಿಯಬೇಕಾದರೆ ದೇವಿಯನ್ನೇ ಹೊತ್ತು ನರ್ತಿಸಿದ ಹಾಗೆ. ಇದರಿಂದ ದೇವಿ ಸಂಪ್ರೀತಳಾಗುತ್ತಾಳೆ. ನಮ್ಮನ್ನು ಕೆಟ್ಟದ್ದರಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆ ಇಲ್ಲಿ ಬಲವಾಗಿದೆ.
ಹಿಂದೆಲ್ಲ ಹುಲಿವೇಷ ಎಂದರೆ ಕರಾವಳಿ ಭಾಗ ಹೊರತುಪಡಿಸಿದರೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಯಾವಾಗ ಉಳಿದವರು ಕಂಡಂತೆ, ಗರುಡಗಮನ ವೃಷಭವಾಹನ ಮೊದಲಾದ ಸಿನೆಮಾಗಳಲ್ಲಿ ಹುಲಿವೇಷವನ್ನು ಧಾರಾಳವಾಗಿ ತೋರಿಸಿದರೋ ಆಗ ಉಡುಪಿ ಕೃಷ್ಣ ಜನ್ಮಾಷ್ಟಮಿ, ಮಂಗಳೂರು ದಸರಾಗಳಲ್ಲಿ ಪ್ರಸಿದ್ಧವಾಗಿದ್ದ ‘ಪಿಲಿನಲಿಕೆ’ ರಾಜ್ಯದುದ್ದಗಲಕ್ಕೂ ಚಿರಪರಿಚಿತವಾಯಿತು. ಹುಲಿನರ್ತನ ಬೀಟ್, ಸ್ಟೆಪ್ ಗಳೆಲ್ಲ ಎಲ್ಲರಿಗೂ ಕರಗತವಾಯಿತು. ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂತಾದ ಇತರ ಜನಪ್ರಿಯ ಹಬ್ಬಗಳಲ್ಲಿಯೂ ಹುಲಿ ವೇಷವನ್ನು ಕೆಲವೆಡೆ ನೋಡಬಹುದು.
ಮಂಗಳೂರು ದಸರಾ ಸಮಯದಲ್ಲಿ ಹುಲಿವೇಷವನ್ನು ಹಾಕಿ ಯುವಕರು ಊರಿನಲ್ಲಿ, ಪಟ್ಟಣಗಳಲ್ಲಿ ಮನೆ ಮನೆಗೆ ಹೋಗಿ ನೃತ್ಯದ ಮೂಲಕ ತಮ್ಮ ನೃತ್ಯ ಪ್ರದರ್ಶನವನ್ನು ಮಾಡುತ್ತಾರೆ. ಈಗಂತೂ ಮಂಗಳೂರು, ಉಡುಪಿ, ಪುತ್ತೂರು ಮೊದಲಾದ ನಗರಗಳಲ್ಲಿ ಹುಲಿ ಕುಣಿತದ ಸ್ಪರ್ಧೆಯನ್ನೂ ಏರ್ಪಡಿಸುತ್ತಿರುವುದು ಹೊಸದಾದ ಆಶಾದಾಯಕ ಬೆಳವಣಿಗೆಯಾಗಿದೆ.