ರಾಜ್ಯ ಸುದ್ದಿಗಳು
ನಂದಿನಿ ಹಾಲಿನ ದರ 3 ರೂ. ಏರಿಕೆ
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಲೀಟರ್ಗೆ ಹಾಲಿಗೆ 5 ರೂ. ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅಂತಿಮವಾಗಿ 3 ರೂಪಾಯಿ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ನೀಡಿದ್ದಾರೆ.
ಕೆಆರ್ಎಸ್ ಡ್ಯಾಂನಿಂದ ಇಂದು ಕಾವೇರಿ ನದಿ ಹಾಗೂ ನಾಲೆಗಳಿಗೆ ನೀರು ಬಿಡುಗಡೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದಿಂದ ನದಿ ಹಾಗೂ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಿದ್ದು, ಇಂದು ಬೆಳಗ್ಗೆ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮದಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ನಾಲೆ ಹಾಗೂ ನದಿಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ನದಿ ಹಾಗೂ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹಣೆ ಶೇ 32.10 ರಷ್ಟು ಇದೆ. ಹೊಸದಾಗಿ ಯಾವುದೇ ಬೆಳೆಗಳನ್ನು ಹಾಕದಂತೆ ರೈತರಿಗೆ ಮನವಿ ಮಾಡಲಾಗಿದೆ.
ಮಣಿಪುರ ಹಿಂಸಾಚಾರ ಖಂಡಿಸಿ ಸಮಾನ ಮನಸ್ಕ ನಾಗರಿಕರ ಪ್ರತಿಭಟನೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮತ್ತು ಮಹಿಳೆಯರಿಗೆ ಘನತೆಯ ಬದುಕನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿ ‘ಸಮಾನ ಮನಸ್ಕ ನಾಗರಿಕರು’ ಶುಕ್ರವಾರ ಮಂಗಳೂರಿನ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ವಿಮುಕ್ತಿ ಟ್ರಸ್ಟ್ನ ಫಾ.ವಿನೋದ್ ‘ಮಣಿಪುರದಲ್ಲಿ ನಡೆಯುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಕೃತ್ಯವಾಗಿದೆ. ಇಲ್ಲಿನ ಪೈಶಾಚಿಕ ಕೃತ್ಯದಿಂದ ಮಣಿಪುರ ಸರಕಾರದ್ದು ಮಾತ್ರವಲ್ಲ ದೇಶದ ಮರ್ಯಾದೆಯೇ ಹೋಗಿದೆ, ಎಂದರು.
ಅಲ್ಲಿ ಆಡಳಿತ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬ ಸಂಶಯ ವ್ಯಕ್ತವಾಗುತ್ತಿದೆ’ ಎಂದು ಗುಡುಗಿದರು.
ಕ್ರೈಮ್ ಸುದ್ದಿಗಳು
ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಗರದ ಪಣಂಬೂರು ಸಮೀಪದ ಕಸಬಾ ಬೇಂಗ್ರೆಯ ನಿವಾಸಿ ಮಹಮ್ಮದ್ ಆಸಿಫ್ (27) ಎಂದು ಗುರುತಿಸಲಾಗಿದೆ.
ಆರೋಪಿ ಆಸಿಫ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದು, ಕದ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ವಿರುದ್ಧ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ ಉಳ್ಳಾಲ, ಪೊಲೀಸ್ ಠಾಣೆ ಉಪ್ಪಿನಂಗಡಿ, ಪಣಂಬೂರು, ಚಿಕ್ಕಮಂಗಳೂರು ನಗರ ಹಾಗೂ ಇತರ ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಬಿಜೈ ಕಾಪಿಕಾಡ್ ಬಳಿ ನೈತಿಕ ಪೊಲೀಸ್ಗಿರಿ ಪ್ರಕರಣ
ಮಂಗಳೂರಿನ ಬಿಜೈ ಕಾಪಿಕಾಡ್ ಬಳಿ ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.
ಅಳಪೆ ನಿವಾಸಿ ದೀಕ್ಷಿತ್ (32) ಹಾಗೂ ಲಾಯ್ಡ್ ಪಿಂಟೋ (32) ಬಂಧಿತರು. ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಬೀಚ್ ಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ತಂಡ ಹಲ್ಲೆ ನಡೆಸಿತ್ತು.
ಗಾಯಗೊಂಡ ವಿದ್ಯಾರ್ಥಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ರಾಷ್ಟ್ರೀಯ ಸುದ್ದಿ
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಜಿಲ್ಲೆಯ ಇರ್ಶಲವಾಡಿ ಕುಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಪರಿಣಾಮ ಈವರೆಗೆ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಮಣ್ಣಿನಡಿ ಸಿಲುಕಿರುವವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಎನ್ಡಿಆರ್ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶುಕ್ರವಾರ ಆರು ಜನರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇನ್ನೂ ಕೂಡ 83 ಮಂದಿಯ ಪತ್ತೆಯೇ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತರಾಷ್ಟ್ರೀಯ ಸುದ್ದಿ
ಅಮೆರಿಕದಲ್ಲಿ ಅನ್ನಕ್ಕಾಗಿ ಭಾರತೀಯರ ಪರದಾಟ
ಅಮೆರಿಕದಲ್ಲಿರುವ ಅನಿವಾಸಿ ಭಾರತೀಯಜರಿಗೆ ತಿನ್ನಲು ಅಕ್ಕಿಯ ಕೊರತೆ ಎದುರಾಗಿದೆ. ಇದಕ್ಕಾಗಿ ಅನಿವಾಸಿ ಭಾರತೀಯರು ಅಲ್ಲಿದ್ದ ದಾಸ್ತಾನು ಅಂಗಡಿಗಳಿಗೆ ಅಕ್ಕಿಗಳನ್ನು ಖರೀದಿಸಲು ಧಾವಿಸಿದ್ದಾರೆ. ಅಂಗಡಿ ಮುಂದೆ ಅನಿವಾಸಿ ಭಾರತೀಯರು ಸರತಿ ಸಾಲಿನಲ್ಲಿ ನಿಂತು ಅಕ್ಕಿ ಗೋಣಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ.
ಕೇಂದ್ರ ಸರ್ಕಾರ ಗುರುವಾರ ಬಾಸ್ಮತಿ ಅಕ್ಕಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಕ್ಕಿಯ ರಫ್ತು ಮೇಲೆ ನಿಷೇಧ ಹೇರಿರುವುದು ಗೊತ್ತೇ ಇದೆ. ಈ ನಿಷೇಧವು ಬಾಸ್ಮತಿ ಬಿಟ್ಟು ಮತ್ತೆಲ್ಲಾ ರೀತಿಯ ಅಕ್ಕಿಗಳಿಗೂ ಅನ್ವಯಿಸುತ್ತದೆ. ಸದ್ಯ ಅನಿವಾಸಿ ಭಾರತೀಯರು ಅಕ್ಕಿಗಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.