ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದ ಬಗ್ಗೆ ಪ್ರಧಾನಿ ಮೋದಿ ಆಸಕ್ತಿ ವ್ಯಕ್ತಪಡಿಸಿದ ನಂತರ ದೇಶದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಏಕರೂಪ ಸಂಹಿತೆಯು ನಾಗರಿಕರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ, ಇದು ಸಂವಿಧಾನದಲ್ಲೇ ನಮೂದಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ. ಜುಲೈ ಮೂರನೇ ವಾರ ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಯುಸಿಸಿಯನ್ನು ಮಂಡಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಸ್ತುತ ದೇಶದಲ್ಲಿ ಬೇರೆ ಬೇರೆ ಧರ್ಮಗಳಿಗೆ ಸಂಬಂಧಿಸಿದಂತೆ ವಿವಿಧ ವೈಯಕ್ತಿಕ ಕಾನೂನುಗಳು ಜಾರಿಯಲ್ಲಿದೆ. ಆದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇವುಗಳ ಸ್ವರೂಪ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ವೈಯಕ್ತಿಕ ಕಾನೂನುಗಳು:
ಹಿಂದೂ ವಿವಾಹ ಕಾಯ್ದೆ:
ಇದು ಎಲ್ಲ ಹಿಂದೂಗಳಿಗೂ ಅನ್ವಯವಾಗುವ ಕಾಯ್ದೆ. ಹಾಗೆಯೇ ಸಿಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಈ ಕಾಯ್ದೆಯು ವಿವಾಹವು ಒಂದು ಪವಿತ್ರ ಸಂಬಂಧ ಎಂದು ಪರಿಗಣಿಸುತ್ತದೆ. ವೈವಾಹಿಕ ಸಂಬಂಧ, ವೈವಾಹಿಕ ಸಂಬಂಧದಲ್ಲಿನ ಜವಾಬ್ದಾರಿಗಳು, ವಿಚ್ಛೇ ದನಕ್ಕೆ ಕಾರಣಗಳು, ವಿಚ್ಛೇ ದನದ ಪ್ರಕ್ರಿಯೆಗಳು, ವಿಚ್ಛೇ ದನದ ನಂತರದ ಪರಿಹಾರಗಳು, ಎರಡನೇ ಮದುವೆ ಮೊದಲಾದ ಅಂಶಗಳನ್ನು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ. ಈ ಕಾಯ್ದೆಯನ್ನು ಹಲವು ಬಾರಿ ತಿದ್ದುಪಡಿಯನ್ನು ಮಾಡಲಾಗಿತ್ತು.
ಕ್ರೈ ಸ್ತ ವಿವಾಹ ಕಾಯ್ದೆ:
ಭಾರತದಲ್ಲಿರುವ ಕ್ರೈಸ್ತ ಧರ್ಮೀಯರ ವಿವಾಹ ಮತ್ತು ವಿಚ್ಛೇ ದನವನ್ನು ಈ ಕಾಯ್ದೆ ವಿವರಿಸುತ್ತದೆ. ವಿವಾಹದ ರೂಪುರೇ ಷೆಗಳು, ಉತ್ತರಾಧಿಕಾರದ ಹಕ್ಕುಗಳು, ವಿಚ್ಛೇದನಕ್ಕೆ ಕಾರಣಗಳು, ವಿಚ್ಛೇದನದ ಪ್ರಕ್ರಿಯೆಗಳು, ಪರಿಹಾರಗಳನ್ನು ಈ ಕಾಯ್ದೆ ವಿವರಿಸುತ್ತದೆ. ಭಾರತೀಯ ಕ್ರೈಸ್ತರಿಗೆ ಇದು ಅನ್ವಯವಾಗುತ್ತದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಇತರ ಭಾರತೀಯರಿಗೂ ಈ ಕಾಯ್ದೆಯ ನಿಯಮಗಳು ಅನ್ವಯವಾಗುತ್ತವೆ.
ಪಾರ್ಸಿ ವಿವಾಹ ಕಾಯ್ದೆ:
ಪಾರ್ಸಿ ಧರ್ಮದವರ ವೈವಾಹಿಕ ಸಂಬಂಧ ಮತ್ತು ವಿಚ್ಛೇದನವನ್ನು ನಿರ್ದೇಶಿಸಲು ಪ್ರತ್ಯೇಕ ಕಾನೂನು ರಚಿಸಲಾಗಿದೆ. ಭಾರತದಲ್ಲಿನ ಯಹೂದಿಗಳಿಗೂ ಇದು ಅನ್ವಯವಾಗುತ್ತದೆ. ಈಶಾನ್ಯ ಭಾರತದ ರಾಜ್ಯಗಳ ಗುಡ್ಡಗಾಡು ಪ್ರದೇ ಶ ನಿವಾಸಿಗಳಿಗೆ 371–ಎ, 371–ಬಿ ಮತ್ತು 371–ಐ ವಿಧಿಗಳ ಅಡಿಯಲ್ಲಿ ಸ್ವಾಯತ್ತ ಜಿಲ್ಲೆಗಳ ಅಧಿಕಾರ ನೀಡಲಾಗಿದೆ. ಈ ಜನರು ವಿವಾಹ, ಆಸ್ತಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಕಾನೂನುಗಳನ್ನು ರಚಿಸಿಕೊಳ್ಳಲು ಮತ್ತು ಅವನ್ನು ಪಾಲಿಸಲು ಅವಕಾಶವಿದೆ. ನಂಬೂದಿರಿ ಸಮುದಾಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ನಂಬೂದಿರಿ ಕಾಯ್ದೆ, ಮದ್ರಾಸ್ ಕಾಯ್ದೆ, ಕೊಚ್ಚಿ ನಂಬೂದಿರಿ ಕಾಯ್ದೆಗಳು ಜಾರಿಯಲ್ಲಿವೆ.
ಮುಸ್ಲಿಂ ವಿವಾಹ ಕಾಯ್ದೆ:
ಇದು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲೇ ಅತ್ಯಂ ತ ಮಹತ್ವದ ಕಾಯ್ದೆಯಾಗಿದ್ದು, ಸ್ವಾತಂತ್ರ್ಯಾ ಪೂರ್ವದಲ್ಲೇ ಈ ಕಾನೂನು ಜಾರಿಯಲ್ಲಿತ್ತು. ಆನಂತರ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ವಿವಾಹವು ಒಂದು ಗಂಡು ಮತ್ತು ಹೆಣ್ಣಿನ ನಡುವಣ ಒಪ್ಪಂದ ಎಂದು ಈ ಕಾನೂನು ಪರಿಗಣಿಸುತ್ತದೆ. ಇಬ್ಬರೂ ಒಪ್ಪಿದರೆ ಮಾತ್ರ ಆ ವಿವಾಹ ಏರ್ಡುತ್ತದೆ ಮತ್ತು ಇದಕ್ಕೆ ಇಬ್ಬರು ಸಾಕ್ಷಿಗಳು ಇರಲೇ ಬೇಕು.
ವೈವಾಹಿಕ ಸಂಬಂಧದ ಜವಾಬ್ದಾರಿಗಳು, ವೈವಾಹಿಕ ಒಪ್ಪಂದದ ಹೊಣೆಗಾರಿಕೆಗಳನ್ನು ಈ ಕಾಯ್ದೆ ವಿವರಿಸುತ್ತದೆ. ವೈವಾಹಿಕ ಸಂಬಂಧದ ಒಪ್ಪಂದವನ್ನು ಯಾರೇ ಮುರಿದರೂ, ಸಂಬಂಧ ಮುಂದುವರಿಸುವುದು ಅಸಾಧ್ಯ ಎನಿಸಿದಾಗ ವಿಚ್ಛೇದನ ಪಡೆಯುವ ಹಕ್ಕನ್ನು ಗಂಡ ಹೆಂಡತಿ ಇಬ್ಬರಿಗೂ ಈ ಕಾಯ್ದೆ ನೀಡುತ್ತದೆ. ತ್ರಿವಳಿ ತಲಾಕ್ ಅಡಿಯಲ್ಲಿ ವಿಚ್ಛೇದನ ಪಡೆಯುವ ಪದ್ಧತಿ ಇತ್ತು ಆದರೆ ಇದನ್ನು ಇತ್ತೀಚೆಗೆ ರದ್ದುಪಡಿಸಲಾಯಿತು.
ಹಿಂದೂ ಉತ್ತರಾಧಿಕಾರ ಕಾಯ್ದೆ:
ಇದು ದೇಶದ ಬಹುತೇಕ ಹಿಂದೂಗಳಿಗೆ, ಸಿಖ್, ಜೈ ನ ಮತ್ತು ಬೌದ್ಧ ಧರ್ಮದವರಿಗೆ ಅನ್ವಯಾಗುತ್ತದೆ. ಈ ಧರ್ಮದ ಜನರಲ್ಲಿ ವಿವಾಹ ಮತ್ತು ಕೌಟುಂಬಿಕ ಸಂಬಂಧದಲ್ಲಿ ಆಸ್ತಿಯ ಹಕ್ಕು ಯಾರಿಗೆಲ್ಲಾ ದೊರೆಯುತ್ತದೆ ಎಂಬುದನ್ನು ಈ ಕಾಯ್ದೆಯು ವಿವರಿಸುತ್ತದೆ. ಯಾವ ಸ್ವರೂಪದ ಆಸ್ತಿಗಳ ಮೇಲೆ ಈ ಕಾಯ್ದೆಯ ಅನ್ವಯ ಹಕ್ಕು ಸಾಧಿಸಬಹುದು ಅಥವಾ ವಾರಸುದಾರಿಕೆ ಸಾಧಿಸಬಹುದು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.
ಇದು ಹಿಂದೂ, ಸಿಖ್, ಜೈ ನ, ಬೌದ್ಧ ಧರ್ಮೀ ಯರಿಗೆ ಇದು ಅತ್ಯಂತ ಮಹತ್ವದ ವೈಯಕ್ತಿಕ ಕಾನೂನಾಗಿದ್ದು, ಕುಟುಂಬದಲ್ಲಿನ ವ್ಯಕ್ತಿಗಳ ಸಂಬಂಧದ ಸ್ವರೂಪ, ಆ ಸಂಬಂಧದ ಆಧಾರದ ಮೇಲೆ ಅವರಿಗೆ ದೊರೆಯುವ ಆಸ್ತಿ ಮತ್ತು ಉತ್ತರಾಧಿಕಾರದ ಹಕ್ಕುಗಳು ಎಂಥವು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.
ಹಿಂದೂ ಅಪ್ರಾಪ್ತ ವಯಸ್ಕರು ಮತ್ತು ಪಾಲಕತ್ವ ಕಾಯ್ದೆ:
ಹಿಂದೂ ಕುಟುಂಬದಲ್ಲಿನ ಅಪ್ರಾಪ್ತ ವಯಸ್ಕರ ಹೊಣೆಗಾರಿಕೆಯನ್ನು ವಿವರಿಸುವ ಕಾಯ್ದೆ ಇದಾಗಿದೆ. ಇದು ಜೈ ನ, ಬೌದ್ಧ ಮತ್ತು ಸಿಖ್ ಧರ್ಮದವರಿಗೂ ಅನ್ವಯವಾಗುತ್ತದೆ. ಒಂದು ಕುಟುಂಬದಲ್ಲಿನ ಅಪ್ರಾಪ್ತ ವಯಸ್ಕರ ಹೊಣೆಗಾರಿಕೆ ಯಾರದ್ದು, ಅವರಿಗೆ 18 ವರ್ಷ ತುಂಬುವವರೆಗೆ ಅವರ ಆಸ್ತಿಯ ಹೊಣೆಗಾರಿಕೆ ಯಾರದು ಎಂಬುದನ್ನು ಈ ಕಾಯ್ದೆ ವಿವರಿಸುತ್ತದೆ. ಇದನ್ನೂ ಒಂದು ವೈಯಕ್ತಿಕ ಕಾನೂನು ಎಂದು ಪರಿಗಣಿಸಲಾಗಿದೆ.