ಸಿಹಿ ಕಹಿ ಚಂದ್ರು ಅವರು ನಡೆಸಿಕೊಡುವ ‘ಬೊಂಬಾಟ್ ಭೋಜನ 3’ ಕಾರ್ಯಕ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ ಹಾಗೂ ‘ರಾಧಾ ಕಲ್ಯಾಣ’ , ‘ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ’ ಧಾರಾವಾಹಿ ನಟಿ ರಾಧಿಕಾ ರಾವ್ ಅವರು ಭಾಗಿಯಾಗಿದ್ದಾರೆ. ಸಿಹಿ ಕಹಿ ಚಂದ್ರು ಅವರು ಇವರಿಬ್ಬರಿಗೂ ಇವರಿಷ್ಟದ ಅಡುಗೆಯನ್ನು ಮಾಡಿಕೊಟ್ಟಿದ್ದಾರೆ.
ಸಿಹಿ ಕಹಿ ಚಂದ್ರು ಅವರ ‘ಬೊಂಬಾಟ್ ಭೋಜನ’ ಶೋನಲ್ಲಿ ನಿತ್ಯ ಓರ್ವ ಅತಿಥಿ ಇದ್ದೇ ಇರುತ್ತಾರೆ. ಈ ಬಾರಿ ಕಿಲಾಡಿಗಳು’ ಖ್ಯಾತಿಯ ನಯನಾ ಅವರು ‘ಬೊಂಬಾಟ್ ಭೋಜನ 3’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಹಿ ಕಹಿ ಚಂದ್ರು ಅವರು ರಾಧಿಕಾ ಹಾಗೂ ನಯನಾ ಅವರಿಗೆ ಅವರಿಷ್ಟದ ಅಡುಗೆಯನ್ನು ಮಾಡಿ ಕೊಟ್ಟಿದ್ದಾರೆ.
ರಾಧಿಕಾ ರಾವ್ಗೆ ಖೀರ್ ಕಮಲ್
ರಾಧಿಕಾ ರಾವ್ ಅವರಿಗೆ ಸಿಹಿ ಕಹಿ ಚಂದ್ರು ಅವರು ಕಮಲದಂತಹ ಮಗುವಿಗಾಗಿ ಆರೋಗ್ಯಕರ ಕಮಲದ ಬೀಜದ ಪಾಯಸ ( ಖೀರ್ ಕಮಲ್ ) ಮಾಡಿಕೊಟ್ಟಿದ್ದಾರೆ. ರಾಧಿಕಾ ಅವರು ಪಾಯಸವನ್ನು ತುಂಬ ಇಷ್ಟಪಟ್ಟು ತಿಂದಿದ್ದಾರೆ.
ನಯನಾಗೆ ಪಾನಿಪೂರಿ ಬಯಕೆ
ನಯನಾ ಅವರಿಗೆ ಸಿಹಿ ಕಹಿ ಚಂದ್ರು ಅವರು ಪಾನಿಪೂರಿ ಮಾಡಿಕೊಟ್ಟಿದ್ದಾರೆ.
ಸಿಹಿ ಬಯಕೆ ಜಾಸ್ತಿ ಎಂದ ರಾಧಿಕಾ ರಾವ್
“ನನಗೆ ಮೊದಲಿನಿಂದಲೂ ಸಿಹಿ ಅಂದರೆ ಆಗುತ್ತಿರಲಿಲ್ಲ. ಗರ್ಭಿಣಿಯಾದಮೇಲೆ ನಾನು ಸಿಕ್ಕಾಪಟ್ಟೆ ಸಿಹಿ ತಿಂದಿದ್ದೇನೆ. ಎಷ್ಟು ಸಿಹಿ ಬಯಕೆ ಅಂದರೆ ಸಕ್ಕರೆ ಕೊಟ್ಟರೂ ತಿನ್ನುತ್ತಿರುತ್ತೇನೆ” ಎಂದು ರಾಧಿಕಾ ರಾವ್ ಅವರು ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ರಾಧಿಕಾ ರಾವ್ ದೂರು ಏನು?
“ನನ್ನ ಪತಿ ಆಕರ್ಷ್ ಭಟ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಿದ್ದೀರಿ? ನನ್ನನ್ನು ಯಾಕೆ ಮೂರು ವರ್ಷವಾದ್ರೂ ಕರೆದಿಲ್ಲ? ಈ ವಿಚಾರವಾಗಿ ನಿಮ್ಮ ಮೇಲೆ ನನಗೆ ಕೋಪ ಇದೆ” ಎಂದು ರಾಧಿಕಾ ರಾವ್ ಅವರು ಹೇಳಿದಾಗ ಸಿಹಿ ಕಹಿ ಚಂದ್ರು ಅವರು, “ನೀವು ಗರ್ಭಿಣಿ ಆಗಲಿ, ಆಮೇಲೆ ಕರೆಯೋಣ ಅಂತ ಅಂದುಕೊಂಡಿದ್ದೆವು” ಎಂದು ಹೇಳಿದ್ದಾರೆ.
‘ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ’ ಧಾರಾವಾಹಿಯಲ್ಲಿ ನಟಿಸಿದ್ದ ಮಂಗಳೂರಿನ ರಾಧಿಕಾ ರಾವ್ ಅವರು 2020 ಮಾರ್ಚ್ 11ರಂದು ಆಕರ್ಷ್ ಭಟ್ ಎನ್ನುವವರ ಜೊತೆ ಮೂಡಬಿದಿರೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆಕರ್ಷ್ ಭಟ್ ಅವರು ಇಂಟರ್ನ್ಯಾಷನಲ್ ಮ್ಯಾಜಿಷಿಯನ್, ಮೈಂಡ್ ರೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ರಾಧಿಕಾ ರಾವ್ ವಿಧ ವಿಧವಾದ ಉಡುಗೆಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
ನಯನಾ ಹಾಗೂ ಶರತ್ ಮದುವೆ
‘ಕಾಮಿಡಿ ಕಿಲಾಡಿಗಳು’ ನಯನಾ ಎಂದೇ ಹೆಸರು ಪಡೆದಿರುವ ಈ ನಟಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2018ರಲ್ಲಿ ಶರತ್ ಎನ್ನುವವರ ಜೊತೆ ನಯನಾ ಅವರು ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು. ಶರತ್ ಅವರು ಉದ್ಯಮಿಯಾಗಿದ್ದು, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಯನಾ ಅವರು ಆ ನಂತರ ಕೆಲ ಕಾಮಿಡಿ ಶೋಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಒಂದಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಈಗ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನೇಕರು ನಯನಾ ಹಾಗೂ ಶರತ್ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.