ಬುಲ್ದಾನ: ಮಹಾರಾಷ್ಟ್ರದ ಯವತ್ಮಾಲ್ನಿಂದ ಪುಣೆಗೆ ತೆರಳುತ್ತಿದ್ದ ಬಸ್ಗೆ ಸಮೃದ್ಧಿ ಮಹಾಮಾರ್ಗ್ ಎಕ್ಸ್ಪ್ರೆಸ್ವೇಯಲ್ಲಿ ಬೆಂಕಿ ಕಾಣಿಸಿಕೊಂಡು 25 ಜನರು ಸಾವನ್ನಪ್ಪಿದ್ದಾರೆ. ಶನಿವಾರ ನಸುಕಿನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಚ್ಚುವರಿಯಾಗಿ, ಅವರು ಪ್ರಯಾಣಿಸುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡಾಗ ಎಂಟು ಜನರಿಗೆ ಗಾಯಗಳಾಗಿವೆ.
ಬಸ್ನಲ್ಲಿ ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್ನಿಂದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ವಿದರ್ಭ ಟ್ರಾವೆಲ್ಸ್ಗೆ ಸೇರಿದ್ದಾಗಿದೆ. ಸಿಂಧಖೇಡರಾಜ ಸಮೀಪದ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ನಂತರ ಕೇವಲ ಎಂಟು ಪ್ರಯಾಣಿಕರು ಮಾತ್ರ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದೆ. 25 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಪ್ರಕಾರ, ಒಟ್ಟು 33 ಪ್ರಯಾಣಿಕರನ್ನು ಹೊತ್ತೊಯ್ದು ಪುಣೆಗೆ ತೆರಳುತ್ತಿದ್ದ ಬಸ್ ಎಕ್ಸ್ಪ್ರೆಸ್ವೇಯಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಬದುಕುಳಿದಿರುವ ಚಾಲಕ, ಅಪಘಾತಕ್ಕೆ ಟೈರ್ ಸ್ಫೋಟವೇ ಕಾರಣ ಎಂದು ಹೇಳಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಹಾಗೂ ಸ್ಥಳದಲ್ಲಿದ್ದವರ ಪ್ರಕಾರ ಬಸ್ ಮೊದಲು ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಬಳಿಕ ಬದುಕುಳಿದ ಪ್ರಯಾಣಿಕರು ಬಸ್ಸಿನ ಬಾಗಿಲು ಒದ್ದು ಮತ್ತು ಗಾಜುಗಳನ್ನು ಒಡೆದು ಹೊರಬಂದಿದ್ದಾರೆ. ಅಪಘಾತದ ನಂತರ ಬಸ್ಸಿನಿಂದ ಹೆಚ್ಚಿನ ಪ್ರಮಾಣದ ಡೀಸೆಲ್ ರಸ್ತೆಯ ಮೇಲೆ ಸೋರಿಕೆಯಾಗಿದೆ. ಈ ವೇಳೆ ಬಸ್ನ ಇಂಜಿನ್ನಲ್ಲಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಸ್ನಿಂದ 25 ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬಸ್ಸಿನಿಂದ ಹೊರತೆಗೆದ ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿಯಿಂದಾಗಿ 25 ಮಂದಿ ಸಾವನ್ನಪ್ಪಿದ್ದು, ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬುಲ್ಧಾನದ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕಡಸಾನೆ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಂತ್ರಸ್ತರನ್ನು ಗುರುತಿಸಲು ಮತ್ತು ಅವರ ಕುಟುಂಬಗಳಿಗೆ ಶವಗಳನ್ನು ಒಪ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.