ನಿಂಬೆ ಹಣ್ಣು ಸೌಂದರ್ಯ ವರ್ದಕವಾಗಿ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಚರ್ಮಕ್ಕೆ ಹೊಳಪು ನೀಡಲು ನಿಂಬೆ ಸಹಕಾರಿ. ಆದ್ರೆ ನಿಂಬೆ ಹಣ್ಣನ್ನು ಚರ್ಮಕ್ಕೆ ಅನ್ವಯಿಸಿಕೊಳ್ಳೋಕೂ ಅದರದ್ದೆ ಆದ ವಿಧಾನವಿದೆ.
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನೀಡುವಷ್ಟು ಮಹತ್ವವನ್ನು ನಾವು ಬೇರೆ ಕೆಲಸಕ್ಕೆ ನೀಡುವುದಿಲ್ಲ. ಮುಖ ಸುಂದರವಾಗಿರಬೇಕು, ಹೊಳೆಯುತ್ತಿರಬೇಕು, ಎಲ್ಲರನ್ನು ಆಕರ್ಷಿಸಬೇಕು ಎಂಬುದು ಬಹುತೇಕ ಎಲ್ಲರ ಆಸೆ. ಕನ್ನಡಿ ಮುಂದೆ ಕುಳಿತು ಗಂಟೆಗಟ್ಟಲೆ ಮುಖಕ್ಕೆ ಆರೈಕೆ ಮಾಡಿಕೊಳ್ಳುವವರಿದ್ದಾರೆ. ವಾರಕ್ಕೆ ನಾಲ್ಕು ಬಾರಿ ಬ್ಯೂಟಿಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡೋರಿದ್ದಾರೆ. ಮನೆ ಮದ್ದು ಎಂದಾಗ ನಮಗೆ ಮೊದಲು ನೆನಪಾಗೋದು ನಿಂಬೆ ಹಣ್ಣಾಗಿದೆ.
ಅನೇಕ ಖಾಯಿಲೆಗಳಿಗೆ ಮಾತ್ರವಲ್ಲದೆ ಸೌಂದರ್ಯ ವರ್ದಕವಾಗಿ ನಿಂಬೆ ಹಣ್ಣು ಉತ್ತಮ ಕೆಲಸ ಮಾಡುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಆಲ್ಫಾ ಹೈಡ್ರಾಕ್ಸಿ ಆಮ್ಲ ಹೇರಳವಾಗಿರುತ್ತದೆ. ನೀವು ಚರ್ಮಕ್ಕೆ ಹೊಳಪು ನೀಡಬೇಕು, ಚರ್ಮವನ್ನು ಶುದ್ಧೀಕರಿಸಬೇಕು ಎಂದಾದ್ರೆ ನಿಂಬೆ ಹಣ್ಣನ್ನು ಬಳಸಬೇಕಾಗುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ನಮ್ಮ ವಯಸ್ಸನ್ನು ಮುಚ್ಚಿಡುವ ಕೆಲಸ ಕೂಡ ಮಾಡುತ್ತದೆ. ಕಣ್ಣ ಕೆಳಗಿನ ಕಪ್ಪು ಕಲೆ ಹೋಗಲಾಡಿಸಲು ನಿಂಬೆ ರಸ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುತ್ತದೆ.
ನಮ್ಮ ಚರ್ಮದಲ್ಲಿ ಹೆಚ್ಚುವರಿ ಎಣ್ಣೆ ಉತ್ಪಾದನೆ ಆಗದಂತೆ ಅದು ನೋಡಿಕೊಳ್ಳುತ್ತದೆ. ನಿಂಬೆ ಹಣ್ಣು ಚರ್ಮಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ನಿಂಬೆ ಹಣ್ಣನ್ನು ಕತ್ತರಿಸಿ ರಸ ತೆಗೆದು ಇಲ್ಲವೆ ಪೀಸ್ ಮಾಡಿ ಅದನ್ನು ನೇರವಾಗಿ ಚರ್ಮದ ಮೇಲೆ ಉಜ್ಜುತ್ತಾರೆ.
ನಿಂಬೆ ಹಣ್ಣನ್ನು ಚರ್ಮಕ್ಕೆ ನೇರವಾಗಿ ಮಸಾಜ್ ಮಾಡಬಾರದು. ಈ ಮೊದಲೇ ಹೇಳಿದಂತೆ ನಿಂಬೆ ಹಣ್ಣಿನ ರಸದಿಂದ ಸಾಕಷ್ಟು ಪ್ರಯೋಜನವಿದೆ. ಹಾಗಂತ ನೀವು ನೇರವಾಗಿ ನಿಂಬೆ ರಸ ಅಥವಾ ಕತ್ತರಿಸಿದ ತುಂಡನ್ನು ಚರ್ಮದ ಮೇಲೆ ಉಜ್ಜಿದ್ರೆ ಅದರಿಂದ ಆಗುವ ಲಾಭಕ್ಕಿಂತ ನಷ್ಟವುಂಟಾಗುವುದೆ ಹೆಚ್ಚು.
ನಿಂಬೆ ರಸವು 2 pH ಮಟ್ಟಕ್ಕಿಂತ ಹೆಚ್ಚು ಆಮ್ಲೀಯವಾಗಿರುತ್ತದೆ. ಇದರಿಂದಾಗಿ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯಾಗುತ್ತದೆ.
ನೀವು ನಿಂಬೆ ಹಣ್ಣಿನ ರಸವನ್ನು ನೇರವಾಗಿ ಚರ್ಮಕ್ಕೆ ಹಾಕಿ ಉಜ್ಜಿದಾಗ ಹೈಪರ್ಪಿಗ್ಮೆಂಟೇಶನ್ ಮತ್ತು ಚರ್ಮ ಕೆಂಪು ಬಣ್ಣಕ್ಕೆ ತಿರುಗುವ ಅಪಾಯವಿರುತ್ತದೆ. ಚರ್ಮದ ಕಿರಿಕಿರಿ ಉಂಟಾಗುತ್ತದೆ. ಸೂರ್ಯನ ಕಿರಣಕ್ಕೆ ಇದನ್ನು ಹಿಡಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ನಿಂಬೆ ಹಣ್ಣನ್ನು ನೇರವಾಗಿ ಮುಖಕ್ಕೆ ಹಚ್ಚಿ ಹಾನಿಮಾಡಿಕೊಳ್ಳುವ ಬದಲು ಅದನ್ನು ಬೇರೆ ವಸ್ತುಗಳ ಜೊತೆ ಸೇರಿಸಿ ಬಳಸಬೇಕು.
ನಿಂಬೆ ರಸವನ್ನು ಹೀಗೆ ಬಳಸಿದರೆ ಉತ್ತಮ : ನೀವು ನಿಂಬೆ ಹಣ್ಣಿನ ರಸವನ್ನು ಜೇನು ತುಪ್ಪದ ಜೊತೆ ಬೆರೆಸಿ ಅದನ್ನು ಮುಖಕ್ಕೆ ಅಥವಾ ದೇಹದ ಇತರ ಭಾಗಕ್ಕೆ ಹಚ್ಚಿಕೊಳ್ಳಬಹುದು. ಜೇನುತುಪ್ಪ ಬೇಡ ಎನ್ನುವವರು ಮುಲ್ತಾನಿ ಮಿಟ್ಟಿಯನ್ನು ಬಳಕೆ ಮಾಡಬಹುದು. ಇಷ್ಟೇ ಅಲ್ಲ ರೋಸ್ ವಾಟರ್ ಜೊತೆ ನಿಂಬೆ ಹಣ್ಣಿನ ರಸಬೆರೆಸಿ ಹಚ್ಚಿಕೊಂಡರೆ ಪರಿಣಾಮ ಹೆಚ್ಚು. ತಜ್ಞರ ಪ್ರಕಾರ, ಹರಳೆಣ್ಣೆಯೊಟ್ಟಿಗೆ ಲಿಂಬುರಸವನ್ನು ಸೇರಿಸಿ ಕೂಡ ನೀವು ಬಳಕೆ ಮಾಡುವುದರಿಂದ ಮುಖಕ್ಕೆ ಉತ್ತಮ ಕಾಂತಿ ಬರಬಹುದು.