ದೇಶದ ಬೇಹುಗಾರಿಕಾ ಸಂಸ್ಥೆ ರಾ ಮುಖ್ಯಸ್ಥರಾಗಿ ಛತ್ತೀಸ್ಗಢ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.
ಹಾಲಿ ರಾ ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ ಜೂನ್ 30 ರಂದು ಪೂರ್ಣಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯಾಗಿ ರವಿ ಸಿನ್ಹಾ ನೇಮಕಗೊಂಡಿದ್ದಾರೆ. ಸಿನ್ಹಾ ಅವರು ಜೂನ್ 30 ರಂದು ಅಧಿಕಾರ ಸ್ವೀಕರಿಸಲಿದ್ದು, ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.
ರವಿ ಸಿನ್ಹಾ ಅವರು 1988ರ ಬ್ಯಾಚಿನ ಐಪಿಎಸ್ ಆಫೀಸರ್ ಅಗಿದ್ದು, ಪ್ರಸ್ತುತ ಕ್ಯಾಬಿನೆಟ್ ಸೆಕ್ರಟೇರಿಯಟ್ನಲ್ಲಿ ಸ್ಪೆಷಲ್ ಸೆಕ್ರೆಟರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿನ್ಹಾ ಅವರ ನೇಮಕಾತಿಯನ್ನು ಸಚಿವ ಸಂಪುಟದ ನೇಮಕ ಸಮಿತಿ ಅನುಮೋದಿಸಿದೆ. ಇದು ಎರಡು ವರ್ಷ ಕಾಲಾವಧಿಯದ್ದು ಎಂದು ಸಚಿವಾಲಯದ ಆದೇಶ ತಿಳಿಸಿದೆ.
ರವಿ ಸಿನ್ಹಾ ಯಾರು?
ರವಿ ಸಿನ್ಹಾ ಬಿಹಾರದ ಭೋಜ್ಪುರ ಜಿಲ್ಲೆಯವರು. ಸಿನ್ಹಾ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1988 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿ ಮಧ್ಯಪ್ರದೇಶ ಕೇಡರ್ ಸೇವೆಯನ್ನು ಪ್ರಾರಂಭಿಸಿದರು . ನಂತರ 2000 ರಲ್ಲಿ, ಆಗಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳನ್ನು ವಿಭಜಿಸಿ ಛತ್ತೀಸ್ಗಢ ರಾಜ್ಯವನ್ನು ರಚಿಸಿದಾಗ, ಸಿನ್ಹಾ ತಾಂತ್ರಿಕವಾಗಿ ಛತ್ತೀಸ್ಗಢ ಕೇಡರ್ಗೆ ತೆರಳಿದ್ದರು.
ಪ್ರಸ್ತುತ ಕ್ಯಾಬಿನೆಟ್ ಸೆಕ್ರಟೇರಿಯಟ್ನಲ್ಲಿ ಸ್ಪೆಷಲ್ ಸೆಕ್ರೆಟರಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿನ್ಹಾ ಅವರು ಎರಡು ದಶಕಗಳಿಂದ ಗುಪ್ತಚರ ಸಂಸ್ಥೆಯಲ್ಲಿದ್ದಾರೆ. ಅವರು ರಾ ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು. ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ, ಮತ್ತು ಇತರ ದೇಶಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.