ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಅಪರಾಧಿ ಚಟುವಟಿಕೆಗಳೂ ಹೊಸ ರೂಪ ಪಡೆದುಕೊಳ್ಳಲು ಆರಂಭಿಸಿದ್ದು ಹಳೆಯ ವಿಷಯ. ಇದರಿಂದ ಕಷ್ಟ ಅನುಭವಿಸಿದವರು, ಹಣ ಕಳೆದುಕೊಂಡು ಕಣ್ಣೀರಿಟ್ಟವರು, ಮರ್ಯಾದೆಗಂಜಿ ಬದುಕನ್ನೇ ಕೊನೆಯಾಗಿಸಿದವರು ಅನೇಕ ಮಂದಿ. ಆದರೆ, ಸೈಬರ್ ಕ್ರಿಮಿನಲ್ಗಳು ಹೊಸ ಹೊಸ ಮಾರ್ಗವನ್ನು ಕಂಡು ಹಿಡಿದು ಅಮಾಯಕ ಜನರನ್ನು ವಂಚಿಸುತ್ತಲೇ ಇದ್ದಾರೆ.
ಸೈಬರ್ ಕ್ರಿಮಿನಲ್ಗಳು ನಿಮ್ಮ ಡಿವೈಸ್ನ ದುರ್ಬಲತೆಯ ಲಾಭವನ್ನು ಪಡೆದುಕೊಂಡು ಅಥವಾ ಭದ್ರತಾ ಲೋಪದೋಷಗಳನ್ನು ಗುರುತಿಸಿ ಆ ಮೂಲಕ ನಿಮ್ಮನ್ನು ವಂಚಿಸಲು ಬಲೆ ಹೆಣೆಯುತ್ತಿದ್ದಾರೆ. ಹೀಗಾಗಿ, ಮಾಲ್ವೇರ್ ವೈರಸ್ ದಾಳಿ, ಲೈಂಗಿಕ ಸಂಗತಿಯನ್ನು ಬಳಸಿ ಸುಲಿಗೆ ಮತ್ತು ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವಿಸ್ (ಡಿಡಿಒಎಸ್)ನಂತಹ ದಾಳಿಗಳು ಹೆಚ್ಚಾಗುತ್ತಿವೆ. ಈ ಡಿಜಿಟಲ್ ಸುಲಿಗೆಯ ರೂಪಗಳಿಂದ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯ.
ಇಂತಹ ಜಾಲದಲ್ಲಿ ಸಿಲುಕಿ ಬೀಳದಂತೆ ಎಲ್ಲರೂ ಜಾಗರೂಕರಾಗಿರಬೇಕು. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಜೀವನವೇ ನರಕವಾಗಬಹುದು. ಹೀಗಾಗಿ ನಿಮ್ಮ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸೈಬರ್ ಕ್ರೈಂ ಅಪರಾಧಿಗಳು ಬೀಸುವ ಇಂತಹ ಬಲೆಯಲ್ಲಿ ಸಿಕ್ಕಿಬೀಳುವುದನ್ನು ತಡೆಯುವುದಕ್ಕೆ ಇಂಟರ್ಪೋಲ್ ಕೆಲ ಪ್ರಮುಖ ಸಲಹೆಗಳನ್ನು ಪಟ್ಟಿ ಮಾಡಿದೆ. ಆ ಉಪಯುಕ್ತ ಸಲಹೆಗಳು ಇಲ್ಲಿವೆ.
ಮಾಲ್ವೇರ್ಗೆ ಬಲಿಯಾಗಬೇಡಿ
ರಾಂಸೋಮ್ ವೇರ್ ಒಂದು ಮಾಲ್ವೇರ್. ಇದು ನಿಮ್ಮ ಸಿಸ್ಟಂ ಮತ್ತು ಅದರ ಡೇಟಾಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಪೂರ್ಣ ಡಿವೈಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ. ಹೀಗಾಗಿ ಈ ದಾಳಿಗೆ ಬಲಿಯಾಗುವುದನ್ನು ತಪ್ಪಿಸಲು ಇಲ್ಲಿವೆ ಕೆಲ ಟಿಪ್ಸ್.
*ಪ್ರಮುಖ ಡೇಟಾಗಳ ನಿಯಮಿತ ಬ್ಯಾಕಪ್ಗಳನ್ನು ಮಾಡಿಕೊಳ್ಳಿ
*ಅಧಿಕೃತ ಅಪ್ಲಿಕೇಶನ್ ಸ್ಟೋರ್ಗಳಿಂದ ಮಾತ್ರ ಆ್ಯಪ್ ಡೌನ್ಲೋಡ್ ಮಾಡಿ
*ನಿಮ್ಮ ಆ್ಯಂಟಿವೈರಸ್ ಅನ್ನು ಅಪ್ಡೇಟ್ ಮಾಡಿಟ್ಟಿರಿ
*ಕೆಲ ಅಟ್ಯಾಚ್ಮೆಂಚ್ಗಳ ಮೂಲಕವೂ ನೀವು ಮೋಸ ಹೋಗಬಹುದು. ಹೀಗಾಗಿ, ವಿಶ್ವಾಸಾರ್ಹ ಅಟ್ಯಾಚ್ಮೆಂಟ್ಗಳನ್ನು ಮಾತ್ರ ತೆರೆಯಿರಿ
ಲೈಂಗಿಕ ಸಂಗತಿಗಳನ್ನು ಇಟ್ಟುಕೊಂಡು ಸುಲಿಗೆ ಮಾಡುವುದು
(Sextortion) ಈಗ ವ್ಯಾಪಕವಾಗುತ್ತಿದೆ. ಇದು ಡಿಜಿಟಲ್ ಸುಲಿಗೆಯ ಇನ್ನೊಂದು ರೂಪ. ಅಪರಾಧಿಗಳು ಅಮಾಯಕರನ್ನು ಮೋಸ ಮಾಡಿ ಅವರ ನಗ್ನ ಚಿತ್ರ ಅಥವಾ ವಿಡಿಯೋಗಳನ್ನು ಪಡೆದು ಬಳಿಕ ಇದನ್ನೇ ಬ್ಲ್ಯಾಕ್ಮೇಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇಂತಹ ದೌರ್ಜನ್ಯದ ಬಲಿಪಶುಗಳು ಮಾನಕ್ಕಂಜಿ ಅಪರಾಧಿಗಳು ಕೇಳಿದಷ್ಟು ಹಣ ಕೊಟ್ಟು ಕಣ್ಣೀರಿಡುತ್ತಾರೆ. ಹೀಗಾಗಿ ಇಂತಹ ಮೋಸದ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಅಗತ್ಯ.
*ಆನ್ಲೈನ್ನಲ್ಲಿ ಯಾರೂ ಇಂತಹ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬೇಡಿ. ಜತೆಗೆ ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ಸಂಭವಿಸದಂತೆ ತಡೆಯಲು ನೀವು ಹೀಗೆ ಮಾಡಬಹುದು.
*ಒಂದೊಮ್ಮೆ ಇಂತಹ ಸಂಕಷ್ಟದಲ್ಲಿ ಸಿಲುಕಿದರೆ ವಂಚಕರೊಂದಿಗಿನ ಎಲ್ಲಾ ಸಂವಹನವನ್ನು ನಿಲ್ಲಿಸಿ
*ಬ್ಲ್ಯಾಕ್ಮೇಲರ್ಗಳ ಬೆದರಿಕೆಗೆ ಹೆದರಬೇಡಿ ಮತ್ತು ಅವರ ಬೇಡಿಕೆಗಳಿಗೆ ಒಪ್ಪಿಕೊಳ್ಳಬೇಡಿ
*ಅವರ ಬೆದರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ. ಸ್ಕ್ರೀನ್ ಕ್ಯಾಪ್ಚರ್ ಮಾಡಿಕೊಳ್ಳಿ. ದಿನಾಂಕ, ಸಮಯವನ್ನು ಬರೆದಿಟ್ಟುಕೊಳ್ಳಿ ಮತ್ತು URL ಗಮನಿಸಿ
ಯಾವುದೇ ಅಂಜಿಕೆ ಇಲ್ಲದೆ ಎಲ್ಲಾ ದಾಖಲೆಗಳೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿ
ಡಿಡಿಒಎಸ್ ದಾಳಿ
ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವಿಸ್ (ಡಿಡಿಒಎಸ್ ) ದಾಳಿ ಎಂದರೆ ಸೇವಾ ನಿರಾಕರಣವೆಂಬ ಸೈಬರ್ ಆಕ್ರಮಣವಿದು. ಅಂದರೆ ಕಂಪನಿಯ ನೆಟ್ವರ್ಕ್ ಅನ್ನು ಓವರ್ಲೋಡ್ ಮಾಡುವುದು ಮತ್ತು ಸರ್ವರ್ರನ್ನು ಸಂಪೂರ್ಣ ಡೌನ್ ಮಾಡುವುದು, ವೆಬ್ಸೈಟ್ ಕ್ರ್ಯಾಶ್ ಮಾಡುವುದು ಅಥವಾ ವೆಬ್ಸೈಟ್ ಸೇವೆ ಸಿಗದಂತೆ ಮಾಡುವ ಆಕ್ರಮಣದ ರೂಪವಿದು.
ಡಿಡಿಒಎಸ್ ದಾಳಿ ತಡೆಯಲು ಕೆಲ ಟಿಪ್ಸ್
*ನಿಮ್ಮ ವೆಬ್ಸೈಟ್ನ ಟ್ರಾಫಿಕ್ ಮತ್ತು ನೆಟ್ವರ್ಕ್ನ ಕಾರ್ಯಕ್ಷಮತೆಯ ಮೇಲೆ ನಿಗಾ ಇಡುವುದು
*ನೆಟ್ವರ್ಕ್ ಭದ್ರತೆ ಮತ್ತು ಅಪ್ಡೇಟ್ ವ್ಯವಸ್ಥೆಯನ್ನು ಹೆಚ್ಚಿಸುವುದು
*ಉತ್ತಮ ಸೈಬರ್ ಭದ್ರತೆಯ ವ್ಯವಸ್ಥೆ ಮಾಡಿಕೊಳ್ಳುವುದು
ಆಕ್ರಮಣದ ಸಂಕೇತಗಳನ್ನು ಗುರುತಿಸುವುದು. ಈ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವುದು ಉತ್ತಮ
ದಾಳಿಯ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಐಟಿ ತಂಡಗಳನ್ನು ಸಜ್ಜುಗೊಳಿಸುವುದು