ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್ 1 ರಂದು ಹಾಗೂ ಗೃಹ ಲಕ್ಷ್ಮೀ ಯೋಜನೆಗೆ ಆಗಸ್ಟ್ 17 ಅಥವಾ 18 ರಂದು ಚಾಲನೆ ನೀಡಲಾಗುವುದು. ಯೋಜನೆಯ ಜಾರಿಗೆ ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಜಾರಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಯನ್ನು ನೀಡಿದ್ದಾರೆ.
ಯಾವೆಲ್ಲ ಸೂಚನೆ ಅಧಿಕಾರಿಗೆ ಸಿಎಂ ನೀಡಿದ್ದಾರೆ:
ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್ ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಜಾರಿ:
ಗೃಹ ಲಕ್ಷ್ಮೀ ಯೋಜನೆಯನ್ನು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಕುರಿತು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದೆ. ಈ ಯೋಜನೆಗೆ ಆನ್ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತೆಯೇ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಪ್ರತ್ಯೇಕ ಕೌಂಟರುಗಳನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು.
ಮಕ್ಕಳು ತೆರಿಗೆದಾರರಾಗಿದ್ದರೆ ಗೃಹಲಕ್ಷ್ಮೀ ಯೋಜನೆ ಲಾಭ ಇಲ್ಲ:
ಗಂಡ ತೆರಿಗೆ ಅಥವಾ ಜಿಎಸ್ ಟಿ ರಿಟರ್ನ್ಸ್ ಪಾವತಿದಾರರಾಗಿದ್ದರೆ ಅವರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ನೀಡಲಾಗುವ ಮಾಸಿಕ 2 ಸಾವಿರ ರೂ. ನೀಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರವು ಈ ಹಿಂದೆಯೇ ಷರತ್ತನ್ನು ವಿಧಿಸಿತ್ತು. ಆದರೆ ಈಗ ಯಾವುದೇ ಗೃಹಿಣಿಯ ಮಕ್ಕಳು (ಮಗ ಅಥವಾ ಮಗಳು) ತೆರಿಗೆದಾರರಾಗಿದ್ದರೆ ಅಥವಾ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದರೆ ಅಂಥ ತಾಯಂದಿರಿಗೆ ಮಾಸಿಕವಾಗಿ 2 ಸಾವಿರ ರೂ. ಯೋಜನೆ ಅನ್ವಯ ಮಾಡದಿರಲು ನಿರ್ಧರಿಸಲಾಗಿದೆ. ಅಲ್ಲದೆ, ಇತ್ತೀಚೆಗೆ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡುಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ಸದ್ಯಕ್ಕೆ ಯೋಜನೆಯ ಲಾಭ ದೊರೆಯುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆ ಜಾರಿ:
ಗೃಹ ಜ್ಯೋತಿ ಯೋಜನೆಗೆ ಆಗಸ್ಟ್ 1 ರಂದು ಕಲಬುರಗಿಯಲ್ಲಿ ಚಾಲನೆ ನೀಡುವ ಕುರಿತು ತೀರ್ಮಾನಿಸಲಾಗಿದೆ. ಗೃಹ ಜ್ಯೋತಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಲು ಅವಕಾಶವಿದೆ. ಇದಲ್ಲದೆ, ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು. ಜೂನ್ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳ ಮೂಲಕ ಹಾಗೂ ಮನೆಯಲ್ಲಿಯೇ ಕಂಪ್ಯೂಟರ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಬಾಡಿಗೆದಾರರಿಗೂ ಸಿಗಲಿದೆ ಗೃಹಜ್ಯೋತಿ ಯೋಜನೆ:
ಹೊಸ ಮನೆ, ಹೊಸ ಬಾಡಿಗೆದಾರರಿಗೆ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಒಂದು ವರ್ಷದ ಸರಾಸರಿ ಲಭ್ಯವಾದ ನಂತರ, ಈ ದತ್ತಾಂಶವನ್ನು ಆಧರಿಸಿ, ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು