ತಾಪಮಾನ ಏರಿಕೆಯ ಪ್ರಭಾವ ಕಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯು ಎಂದಿಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಈ ದಿನವನ್ನು ಆಚರಿಸುತ್ತವೆ.
ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಪರಿಸರ ದಿನ 2023 ಥೀಮ್
ಈ ವರ್ಷದ ವಿಶ್ವ ಪರಿಸರ ದಿನವನ್ನು ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂಬ ಥೀಮ್ನೊಂದಿಗೆ ಆಚರಸಲಾಗುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ, ಮಾನವರು ವರ್ಷಕ್ಕೆ 430 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತಾರೆ. ಅದರಲ್ಲಿ 46% ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂಳಲಾಗುತ್ತದೆ, ಮತ್ತು 22% ಅಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದೆ.
ವಿಶ್ವ ಪರಿಸರ ದಿನದ ಇತಿಹಾಸ:
ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ವಿಶ್ವಸಂಸ್ಥೆಯು ಮಾನವ ಪರಿಸರದ ಸ್ಟಾಕ್ಹೋಮ್ ಸಮ್ಮೇಳನದಲ್ಲಿಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಚರ್ಚೆ ನಡೆಸಿ, 1974 ಜೂನ್ 5 ರಂದು ಮೊದಲ ಬಾರಿಗೆ ಅಮೆರಿಕಾದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ವಿಶ್ವ ಪರಿಸರ ದಿನದ ಮಹತ್ವ
ಜಲ ಮಾಲಿನ್ಯ, ಜನಸಂಖ್ಯಾ ಸ್ಪೋಟ, ಜಾಗತಿಕ ತಾಪಮಾನ ಏರಿಕೆ, ವನ್ಯಜೀವಿ ನಾಶಗಳಂತಹ ಪರಿಸರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಮುಖ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ, ಮನುಷ್ಯ ಆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ, ಅನಗ್ಯತವಾಗಿ ಪರಿಸರವನ್ನು ಹಾಳು ಮಾಡದಿದ್ದರೆ ಸಾಕು.
ಪರಿಸರ ದಿನದ ಉದ್ದೇಶಗಳು:
*ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು.
*ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
*ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು.
*ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು.
*ಪರಿಸರವನ್ನು ನಾಶ ಮಾಡದಂತೆ ಜಾಗೃತಿ ಮೂಡಿಸುವುದು.
*ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು