ಭಾರತವು ಅನಂತ ವಿಸ್ಮಯಗಳ ದೇಶ, ಆದರೆ ಅದು ನಮ್ಮ ಅರಿವಿಗೆ ಬರಬೇಕಾದರೆ ನಮ್ಮಲ್ಲಿ ಭಾರತದ ಬಗ್ಗೆ ಪ್ರೀತಿ ಮತ್ತು ಜಿಜ್ಞಾಸೆ ಇರಬೇಕು. ನಮ್ಮ ಬಾಲ್ಯ ಮತ್ತು ಯೌವನದಲ್ಲಿ ಗಮನಕ್ಕೆ ಬರದ ಹಲವು ಸಂಗತಿಗಳು ಈಗ ಧನಾತ್ಮಕ ಪರಿವರ್ತನೆ ಮತ್ತು ಜಿಜ್ಞಾಸೆಯಿಂದಲೇ ಅರಿವಿಗೆ ಬರಲಾರಂಭಿಸಿವೆ. ಭಾರತವನ್ನು ನೋಡಲು, ಭಾರತವನ್ನು ತಿಳಿಯಲು ನಮಗೆ ಉನ್ನತ ಮಟ್ಟದ ತಿಳುವಳಿಕೆಯಿದ್ದರೆ ಮಾತ್ರ ನಮ್ಮ ಸುತ್ತಮುತ್ತಲಿನ ಅನೇಕ ಸಂಗತಿಗಳಲ್ಲಿ ನಮಗೆ ವಿಶೇಷತೆ ಕಾಣಸಿಗುತ್ತದೆ. ಅಂಥ ವಿಚಾರಮಂಥನದಿಂದಾಗಿ ಇಂದು ನನಗೆ ನಮ್ಮ ದೇವರು ಮತ್ತು ಆರೋಗ್ಯಕ್ಕೆ ನೇರ ಸಂಬಂಧವಿದೆ ಎನಿಸುತ್ತಿದೆ.
ಹಿಂದೂ ಧರ್ಮದಲ್ಲಿ ಪ್ರಕೃತಿ ಮನುಷ್ಯನ ಆರೋಗ್ಯದ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದೆ. ಆಯುರ್ವೇದವಂತು ಮನುಷ್ಯನ ಆರೋಗ್ಯಕ್ಕೆ ಬೇಕಾದ ಉತ್ತಮಾಂಶಗಳನ್ನು ಕ್ರೋಡಿಕರಿಸಿ ಕೊಡುತ್ತದೆ. ಅದರೊಂದಿಗೆ ನಮ್ಮ ಆಚರಣೆಗಳು ನಮ್ಮ ಆರೋಗ್ಯವನ್ನು ಸಹ ಸುಧಾರಿಸುತ್ತವೆ ಎಂದರೆ ನಂಬಲೇ ಬೇಕು. ಅದರಲ್ಲಿನ ಕೆಲವೊಂದು ಉದಾರಣೆಯನ್ನು ಇಲ್ಲಿ ಕಾಣ ಬಹುದಾಗಿದೆ.
ತಮಿಳುನಾಡಿನ ತಿರುವಣ್ಣಾಮಲೈ ಒಂದು ಪ್ರಸಿದ್ಧವಾದ ಯಾತ್ರಾಸ್ಥಳ ಅರುಣಾಚಲಂ ಬೆಟ್ಟವಿದೆ ಅಲ್ಲಿ, ಭಕ್ತರು ಪ್ರತಿ ಪೌರ್ಣಿಮೆಯ ದಿನದಂದು ಅದಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಹೀಗೆ ಪ್ರದಕ್ಷಿಣೆ ಹಾಕುತ್ತಾರಂತೆ. ಬರೋಬ್ಬರಿ ಹದಿನಾಲ್ಕು ಕಿಲೋಮಿಟರ್ ದೂರವನ್ನು ಕ್ರಮಿಸಿ ಲಕ್ಷಾನುಗಟ್ಟಲೆ ಮಧ್ಯೆ ಬೇರೆ ಬೇರೆ ಜನ ಬೆಟ್ಟಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಾರ್ಗ ಶಿವನ ಮಂದಿರಗಳೂ ಇವೆ, ಕೆಲವರು ಈ ಮಂದಿರಗಳಿಗೂ ಹೋಗಿ ನಮಸ್ಕರಿಸಿ ಮುಂದುವರೆಯುತ್ತಾರೆ. ಆದರೆ ಹೆಚ್ಚಿನ ಭಕ್ತರ ಮುಖ್ಯ ಲಕ್ಷ್ಯ ಗಿರಿಯ ಪದಕ್ಷಿಣೆ, ಬೆಳಂಬೆಳಿಗ್ಗೆ ಐದು ಗಂಟೆಗೆ ನಡೆಯಲು ಪ್ರಾರಂಭಿಸಿದರೆ ಬಿಸಿಲು ಏರುವುದರೊಳಗೆ ಅವರ ಪ್ರದಕ್ಷಿಣೆ ಮುಗಿಯುತ್ತದೆ. ಮೂರು ಗಂಟೆಗಳಿಂದ ಆರು ಗಂಟೆಗಳ ಸಮಯ ತಗಲುತ್ತದಂತೆ, ಅದು ಅವರವರ ವಯಸ್ಸು, ಅಭ್ಯಾಸಬಲ, ಆರೋಗ್ಯ ಇವುಗಳನ್ನು ಅವಲಂಬಿಸಿ ಇರುತ್ತದೆ. ತಮಿಳುನಾಡು ಸರಕಾರವೂ ಒಳ್ಳೆಯ ರಸ್ತೆಯನ್ನು ನಿರ್ಮಿಸಿದ್ದು, ಅಂಥ ದಿನಗಳಲ್ಲಿ ಭಕ್ತರ ಅನುಕೂಲದ ದೃಷ್ಟಿಯಿಂದ ವಾಹನ ಸಂಚಾರವನ್ನು ಪ್ರತಿಬಂಧಿಸಿರುತ್ತದೆ. ಏಡಿಯೋಗಳನ್ನು ನೋಡಿದರೆ ನಿಮಗೆ ಅದೆಷ್ಟು ಜನ ಈ ಪ್ರದಕ್ಷಿಣೆಯನ್ನು ಹಾಕುತ್ತಾರೆ ಎನ್ನುವ ಅಂದಾಜು ಸಿಗುತ್ತದೆ. ಆಹಾ! ಎಂಥ ರೋಚಕವಾದ ಅನುಭವ ಎಂದೆಲ್ಲ ಅನೇಕರು ಬರೆದುಕೊಂಡಿದ್ದಾರೆ. ನಿಜಕ್ಕೂ ಎಂಥವರಿಗೂ ಆಸೆ ಹುಟ್ಟಿಸುವ, ಕೈಬೀಸಿ ಕರೆಯುವ ಆಕರ್ಷಣೆ ಇದು. ಹದಿನಾಲ್ಕು ಕಿಲೋಮಿಟರ್ ನಡೆಯಲು ಸಾಧ್ಯವಾಗಲೆಂದು ನಾನೂ ಪ್ರಾಕ್ಟಿಸ್ ಶುರುವಿಟ್ಟುಕೊಂಡಿದ್ದೇನೆ. ಮಹಾದೇವನು ಕರೆಸಿಕೊಂಡ
ಪಕ್ಷದಲ್ಲಿ ಕಾಲುಗಳಿಗೆ ಕಸುವಿರಬೇಕಲ್ಲ ಅಂತ, ನಂತರ ನನಗೆ ನಮ್ಮ ದೇಶದ ಇಂಥ ಅನೇಕ ನಡಿಗೆಗಳು ಒಂದೊಂದಾಗಿ ನೆನಪಿಗೆ ಬರತೊಡಗಿದವು. ಮಹಾರಾಷ್ಟ್ರದಪಂಡರಾಪುರಕ್ಕೆ ಕಾರ್ತಿಕ ಮತ್ತು ಆಷಾಢ ಏಕಾದಶಿಗಳಂದು ಲಕ್ಷಲಕ್ಷ ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಬೇರೆ ಬೇರೆ ಭಾಗಗಳಿಂದ ಬರುತ್ತಾರೆ. ಅವರನ್ನು ವಾರಕರಿ ಎನ್ನುತ್ತಾರೆ ಮತ್ತು ಇಂಥ ವಾರಕರಿಗಳ ಗುಂಪನ್ನು ದಿಂಡಿ ಎನ್ನುತ್ತಾರೆ. ಪ್ರತಿ ವರ್ಷ ಅವರು ಸಾಗುವ ಮಾರ್ಗ ಪೂರ್ವನಿಶ್ಚಿತವಾಗಿರುತ್ತದೆ. ಅನೇಕ ಹಳ್ಳಿ-ಪಟ್ಟಣಗಳನ್ನು ಅವರು ಸಾಗಿಹೋಗುವಾಗ ಆಯಾ ಊರಿನ ಜನ ವಾರಕರಿಗಳಿಗೆ ಊಟ-ತಿಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರಂತೆ, ವಾರಕರಿಗಳು ಗುಂಪುಗುಂಪಾಗಿ ಸಾಗುತ್ತಾರೆ. ರಾತ್ರಿ ಎಲ್ಲೆಲ್ಲಿ ತಂಗಬೇಕೆಂಬುದೂ
ಗೊತ್ತಿರುತ್ತದೆ. ಅವರ ಜೊತೆಗೆ ಆಹಾರ, ಧಾನ್ಯ, ಬಟ್ಟೆಗಳು ಜೊತೆಗೆ ಚಿಕ್ಕ ಮಕ್ಕಳ ಎಲ್ಲವನ್ನೂ ತುಂಬಿಕೊಂಡು ಹೋಗಲು ಎತ್ತಿನ ಗಾಡಿಗಳೂ ಇರುತ್ತವೆ.
ನಮ್ಮ ಆರೋಗ್ಯಕ್ಕಾಗಿ ಹದಿನೈದು ದಿನಗಳಿಗೆ ಒಮ್ಮೆಯಾದರೂ ಉಪವಾಸ ಮಾಡಬೇಕೆಂದು ಈಗೀಗ ವೈದ್ಯರೂ ಹೇಳುತ್ತಿದ್ದಾರೆ. ದೇವರ ಹೆಸರಿನಲ್ಲಿ ಮೊದಲಿನಿಂದಲೂ ಮಾಡುತ್ತ ಬಂದವರಿಗೆ ಅದೆಲ್ಲ ಚಿಂತೆಯಿರಲಿಲ್ಲ. ಆದರೂ ತಿಳಿದೋ ತಿಳಿಯದೆಯೋ ಅವರ ಆರೋಗ್ಯಕ್ಕೆ ಅದೊಂದು ಸಹಾಯ ಆಗಿಯೇ ಆಗುತ್ತಿತ್ತು. ಈಗೀಗ ಆರೋಗ್ಯದ ತಿಳುವಳಿಕೆಯೂ ಜಾಸ್ತಿಯಾಗಿದೆ. ಅಂತೂ ಹೀಗೆ ದೇವರು ಮತ್ತು ಆರೋಗ್ಯ ಒಂದರಜೊತೆಗೊಂದು ಕೂಡಿವೆ. ಸುಮ್ಮನೇ ನಡೆಯುವುದಕ್ಕಿಂತ, ಕೇವಲ ಆರೋಗ್ಯಕ್ಕಾಗಿ ಉಪವಾಸ ಮಾಡುವುದಕ್ಕಿಂತ, ಅದಕ್ಕೊಂದು ಭಕ್ತಿಯ ಲೇಪನವಿದ್ದರೆ ಒಳ್ಳೆಯದು ಎನ್ನುವುದಂತೂ ಸುಳ್ಳಲ್ಲವೇ ಅಲ್ಲ.
ಮುಗಿಯಿತು