ಹಿಂದೂ ಧರ್ಮದಲ್ಲಿ ಮಾತ್ರ ಅಮಾವಾಸ್ಯೆ ಹುಣ್ಣಿಮೆಯ ದಿನಗಳ ಬಗ್ಗೆ ಯೋಚನೆ ಮಾಡಲಾಗುತ್ತದೆ. ನಮ್ಮಲ್ಲಿ ಯಾವ ದಿನ ಒಳ್ಳೆಯದು, ಕೆಟ್ಟದು ಎಂಬುದೇ ಇಲ್ಲ, ಅಮಾವಾಸ್ಯೆ, ಹುಣ್ಣಿಮೆ ಪ್ರತಿಯೊಂದು ತಿಥಿಯೂ ಭಗವಂತನ ಒಂದು ಸೃಷ್ಟಿ, ಈ ಜಗತ್ತಿನಲ್ಲಿ ಯಾವುದೂ ತಿರಸ್ಕಾರವಾಗಿದಲ್ಲ. ಅದೆಲ್ಲ ಮನುಷ್ಯನ ಮನಸ್ಸಿನ ಭ್ರಮೆ. ಯಾವತ್ತೂ ಆ ಬೇಧ ಇಟ್ಟುಕೊಳ್ಳಬಾರದು. ಎಲ್ಲವೂ ಪೂಜ್ಯವೇ, ಯಾವ ದಿನ ಯಾವುದಕ್ಕೆ ಸರಿ ಎಂಬುದನ್ನು ನಾವು ನಿಶ್ಚಯ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಯಾ ದಿನದಲ್ಲಿ ಮಾಡುವ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತೇವೆ.
ಸಾಮಾನ್ಯವಾಗಿ ಮದುವೆ, ಮುಂಜಿ, ಗೃಹ ಪ್ರವೇಶ, ಹೊಸ ಕೆಲಸಕ್ಕೆ ಅಣಿಯಾಗುವಾಗ ಇಂತಹ ವಿಚಾರಗಳಲ್ಲಿ ಸಾಮಾನ್ಯವಾಗಿ ತಿಥಿ, ವಾರ, ನಕ್ಷತ್ರಗಳನ್ನು ನಮ್ಮ ಹಿಂದಿನ ಹಿರಿಯರು ನೋಡುತ್ತಿದ್ದರು ಆದರೆ ಇಂದು ಅದು ಅಷ್ಟಾಗಿ ಕಾಣುವುದಿಲ್ಲ. ಯಾವುದೆ ವೃದ್ಧಿ ಕಾರ್ಯಗಳನ್ನು ಅಮಾವಾಸ್ಯೆ ದಿನ ಮಾಡುವುದಿಲ್ಲ.
ಒರಿಸ್ಸಾ, ಪಶ್ಚಿಮ ಬಂಗಾಳ ಕಡೆಗಳಲ್ಲಿ ಅವರಿಗೆ ಅಮಾವಾಸ್ಯೆ ತುಂಬಾ ಶ್ರೇಷ್ಟ. ತಮಿಳುನಾಡಿನಲ್ಲಿ ಎಲ್ಲ ಮಾಸದಲ್ಲಿ ಮದುವೆಗಳನ್ನು ಮಾಡುತ್ತಾರೆ. ಯಾವ ಕೆಲಸಕ್ಕಾಗಿ, ಯಾವ ಕರ್ಮಕ್ಕಾಗಿ ಎಂದು ದಿನ ನೋಡುವುದಿದೆಯೇ ಹೊರತು ದಿನಗಳಲ್ಲಿ ಶುಭದಿನ, ಅಶುಭ ದಿನ ಎಂದಿಲ್ಲ ಎಂದು ಹೇಳುತ್ತಾರೆ.
ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಕೂಡ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪತಿಯ ಆಯುರಾರೋಗ್ಯಕ್ಕಾಗಿ ಪೂಜೆ ಮಾಡುತ್ತಾರೆ. ಇನ್ನು ಮಹಾಲಯ ಅಮಾವಾಸ್ಯೆಯ ಪಿತೃಗಳ ಕಾರ್ಯ ಮಾಡಲು, ಪಿತೃಗಳನ್ನು ನೆನೆಯುವ ದಿನ. ದೀಪಾವಳಿ ಅಮಾವಾಸ್ಯೆ ದಿನ ಧನ ಲಕ್ಷ್ಮೀ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಹಣವನ್ನೂ, ಚಿನ್ನವನ್ನು, ಕಲಶವನ್ನಿಟ್ಟು ಲಕ್ಷ್ಮಿಯನ್ನು ಇನ್ನಷ್ಟು ಸಂಪತ್ತು, ಐಶ್ವರ್ಯ ಕರುಣಿಸುವಂತೆ ಬೇಡುತ್ತಾರೆ. ಹೀಗೆ ಅಮಾವಾಸ್ಯೆ ಮತ್ತೆ ಹುಣ್ಣಿಮೆ ಅನ್ನೋದು ಒಂದು ತಿಥಿ ಮಾತ್ರ ಅದನ್ನು ಯಾವುದೇ ರೀತಿಯ ಕೆಟ್ಟ ರೀತಿಯಲ್ಲಿ ವಿಚಾರವನ್ನು ಮಾಡಬಾರದು