ಮಂಗಳೂರು: ಕೋಮುಗಲಭೆ, ಗೋ ಸಾಗಾಟಕ್ಕೆ ಸಂಬಂಧಿಸಿದಂತೆ ಹಲ್ಲೆ ಪ್ರಕರಣ, ನೈತಿಕ ಪೊಲೀಸ್ಗಿರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐವರು ಬಜರಂಗದಳ ಕಾರ್ಯಕರ್ತರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಅವರನ್ನು ಬೇರೆ ಜಿಲ್ಲೆಗಳಿಗೆ ಏಕೆ ಗಡೀಪಾರು ಮಾಡಬಾರದು ಎಂದು ನೋಟಿಸ್ ನಲ್ಲಿ ಕೇಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ದಿನೇಶ್, ಪ್ರಜ್ವಲ್, ಲತೇಶ್ ಗುಂಡ್ಯ, ನಿಶಾಂತ್ ಮತ್ತು ಪ್ರದೀಪ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಲತೇಶ್ ಗುಂಡ್ಯ ಪುತ್ತೂರು ಜಿಲ್ಲೆಯ ಬಜರಂಗದಳದ ಸಹಸಂಯೋಜಕರಾಗಿದ್ದಾರೆ.
ಪ್ರಜ್ವಲ್ ಮತ್ತು ದಿನೇಶ್ ಬಜರಂಗದಳದಲ್ಲಿ ತಾಲ್ಲೂಕು ಮಟ್ಟದ ಜವಾಬ್ದಾರಿಗಳನ್ನು ಹೊಂದಿದ್ದರೆ, ಇತರ ಇಬ್ಬರು ಬಲಪಂಥೀಯ ಸಂಘಟನೆಯ ಸ್ವಯಂಸೇವಕರು. ಅವರನ್ನು ಏಕೆ ಹೊರಗಿಡಬಾರದು ಎಂದು ನೋಟಿಸ್ ನಲ್ಲಿ ಪ್ರಶ್ನಿಸಲಾಗಿದ್ದು, ನವೆಂಬರ್ 22 ರಂದು ಪುತ್ತೂರಿನಲ್ಲಿ ಸಹಾಯಕ ಆಯುಕ್ತರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ 1953ರ ಸೆಕ್ಷನ್ 55ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅವರು ಪ್ರಾಧಿಕಾರದ ಮುಂದೆ ಹಾಜರಾದ ನಂತರ, ಅವರ ಮೇಲೆ ಒಂದು ವರ್ಷದ ಗಡಿಪಾರು ಆದೇಶವನ್ನು ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಜುಲೈನಲ್ಲಿ ಮೂವರು ಬಜರಂಗದಳ ಕಾರ್ಯಕರ್ತರನ್ನು ಮಂಗಳೂರು ನಗರದಿಂದ ಗಡಿಪಾರು ಮಾಡಲಾಗಿತ್ತು. ಆದರೆ ಸಂಘಟನೆಯು ಸರ್ಕಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆದಿತ್ತು.