ಬೆಂಗಳೂರು: ಹೊಸ ವಿನ್ಯಾಸದ ವಂದೇ ಭಾರತ್ ಸ್ಲೀಪಿಂಗ್ ಕೋಚ್ (ಕಾನ್ಸೆಪ್ಟ್ ಟ್ರೈನ್) ಮುಂದಿನ ವರ್ಷ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್ ನಲ್ಲಿ ಫೋಟೊ ಶೇರ್ ಮಾಡಿದ್ದಾರೆ.
2024ರ ಆರಂಭದಲ್ಲಿ ಹೊಸ ಸ್ಲೀಪರ್ ಕೋಚ್ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ಭಾರತೀಯ ರೈಲ್ವೆಯ ಈ ನವೀನ ಬೋಗಿಗಳನ್ನು ರಾತ್ರಿ ದೂರದ ಪ್ರಯಾಣಕ್ಕೆ ಒದಗಿಸುವ ಗುರಿ ಹೊಂದಿದೆ. ವಂದೇ ಭಾರತ್ ಎಕ್ಸ್ಪ್ರೆಸ್ನ ಸ್ಲೀಪರ್ ಕೋಚ್ಗಳು ವಿಶಾಲವಾದ ಬರ್ಥ್ಗಳನ್ನು ಹೊಂದಿದ್ದು, ಉತ್ತಮ ಬೆಳಕಿರುವ ಒಳಾಂಗಣ, ವಿಶಾಲ ವಿಶ್ರಾಂತಿ ಕೊಠಡಿಗಳು, ಕಾಂಪ್ಯಾಕ್ಟ್ ಪ್ಯಾಂಟ್ರಿ ಒಳಗೊಂಡಿರಲಿವೆ.
ವಂದೇ ಭಾರತ್ ಸ್ಲೀಪರ್ ರೈಲುಗಳು ಎರಡು ಮತ್ತು ಮೂರು ಹಂತದ ಆಯ್ಕೆಗಳನ್ನು ಹೊಂದಿರುತ್ತವೆ. ಇದರ ಬರ್ಥ್ ವಿನ್ಯಾಸವು ರಾಜಧಾನಿ ಮತ್ತು ಇತರ ಪ್ರೀಮಿಯಂ ರೈಲುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿವೆ.
ಹೊಸ ಸ್ಲೀಪರ್ ವಂದೇ ಭಾರತ್ ರೈಲು ಮುಂದಿನ ವರ್ಷ ಯಾವಾಗ ಜನರಿಗೆ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವರು ಸ್ಪಷ್ಟಪಡಿಸಿಲ್ಲ. 2024ರ ಫೆಬ್ರವರಿಯಲ್ಲಿ ಪ್ರಾರಂಭಿಸಬಹುದು ಎಂಬ ನಿರೀಕ್ಷೆಯಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ(ಇಸಿಎಫ್) ತಯಾರಿಸಲಾಗುತ್ತಿದೆ. ಇದನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಭಾರತದಲ್ಲಿ ತಯಾರಿಸಿದ ರೈಲು ಎಂದು ಬಿಂಬಿಸಲಾಗುತ್ತಿದೆ.