ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವ ನಿಟ್ಟಿನಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ಒಕ್ಕಲಿಗ ಮತಗಳನ್ನು ಸೆಳೆಯುವ ಸಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ತಮ್ಮದೇ ಆದ ರಣತಂತ್ರಗಳನ್ನು ಈ ನಿಟ್ಟಿನಲ್ಲಿ ರೂಪಿಸುತ್ತಿದ್ದಾರೆ.
ಒಕ್ಕಲಿಗರ ಅಸ್ಮಿತೆ ಎಂಬಂತೆ ಜೆಡಿಎಸ್ ಆ ಸಮುದಾಯದ ಮತ ಬ್ಯಾಂಕ್ನಲ್ಲಿ ತಮ್ಮಲ್ಲಿ ಭದ್ರಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಆದರೆ ಅದಕ್ಕೆ ತಡೆಯಾಗಿದ್ದು, ಡಿಕೆ ಶಿವಕುಮಾರ್ ಎಂಟ್ರಿ. ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿದ್ದ ಡಿಕೆಶಿ ಒಕ್ಕಲಿಗರನ್ನು ಕಾಂಗ್ರೆಸ್ ನತ್ತ ಸೆಳೆಯಲು ತಮ್ಮದೇ ಆದ ರೀತಿಯಲ್ಲಿ ತಂತ್ರಗಾರಿಕೆಯನ್ನು ಮಾಡಿದ್ದರು. ವೇದಿಕೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಮತ್ತೊಮ್ಮೆ ಸಿಗಲಿದೆ ಎಂದು ಪದೇ ಪದೇ ಹೇಳುತ್ತಿದ್ದರು.
ಸರ್ಕಾರದ ಬಂದ ಬಳಿಕ ಸಿಎಂ ಸ್ಥಾನ ಸಿಗದೇ ಇದ್ದರೂ ಡಿಸಿಎಂ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಇದೀಗ ಲೋಕಸಭೆ ಚುನಾವಣೆಯ ಬಳಿಕ ಮತ್ತೆ ಸಿಎಂ ಸ್ಥಾನದತ್ತ ಬೇಡಿಕೆ ಇಡುವ ಸಾಧ್ಯತೆಗಳು ದಟ್ಟವಾಗಿದೆ. ತಮ್ಮ ಸ್ಥಾನಮಾನಗಳನ್ನು ಮುಂದಿಟ್ಟುಕೊಂಡು ಒಕ್ಕಲಿಗ ಸಮುದಾಯದ ಮತಗಳನ್ನು ಕಾಂಗ್ರೆಸ್ನತ್ತ ಸೆಳೆಯುವುದು ಡಿಕೆಶಿ ತಂತ್ರಗಾರಿಕೆಯಾಗಿದೆ. ಸಹಜವಾಗಿ ತಮ್ಮ ಸಮುದಾಯದ ವ್ಯಕ್ತಿ ರಾಜ್ಯದ ಪ್ರಭಾವಿ ಸ್ಥಾನಕ್ಕೇರುತ್ತಾರೆ ಎಂದಾಗ ಒಂದಿಷ್ಟು ಪ್ರಮಾಣದ ಮತಗಳು ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಡಿಕೆಶಿ ತಂತ್ರಗಾರಿಕೆ ತಮಗೆ ದುಬಾರಿಯಾಗಬಹುದು ಎಂದು ಅರಿವಾದದ್ದೇ ತಡ, ವಿಧಾನಸೌಧದಲ್ಲಿ ಕೈಕೈ ಹಿಡಿದುಕೊಂಡಿದ್ದ ಡಿಕೆಶಿ ಎಚ್ಡಿಕೆ ಪರಸ್ಪರ ವಿರುದ್ಧ ದಿಕ್ಕಿಗೆ ಸಾಗಿದ್ದಾರೆ. ಡಿಕೆಶಿ ವಿರುದ್ಧ ಎಚ್ಡಿಕೆ ಬಾಣದ ಮೇಲೆ ಬಾಣಗಳನ್ನು ಪ್ರಯೋಗ ಮಾಡ್ತಿದ್ದಾರೆ. ಕೇವಲ ಎಚ್ಡಿಕೆ ಮಾತ್ರವಲ್ಲ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಕೂಡಾ ಡಿಕೆ ಶಿವಕುಮಾರ್ ವಿರುದ್ಧ ಗುಟುರು ಹಾಕಿದ್ದಾರೆ. ಕಾಂಗ್ರೆಸ್ ವಿರುದ್ಧದ ದಳಪತಿಗಳ ಟೀಕೆಗಳ ಪೈಕಿ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗಿಂತ ಡಿಕೆ ಶಿವಕುಮಾರ್ ಅವರೇ ಟಾರ್ಗೆಟ್ ಆಗ್ತಿದ್ದಾರೆ.
ಒಕ್ಕಲಿಗ ಸಮುದಾಯದ ಮತಗಳನ್ನು ತಮ್ಮತ್ತ ಉಳಿಸಿಕೊಳ್ಳುವುದೇ ಕುಮಾರಸ್ವಾಮಿ ಮೊದಲ ಟಾರ್ಗೆಟ್. ಈ ನಿಟ್ಟಿನಲ್ಲಿ ಅವರು ಈ ಓಟ್ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ಸಿಗುವುದಿಲ್ಲ, ಅವರಿಗೆ ಸಿಎಂ ಆಗುವ ಅವಕಾಶಗಳು ಆ ಪಕ್ಷದಲ್ಲಿ ಕಡಿಮೆ ಎಂಬ ಪ್ರಚಾರವನ್ನು ಮುನ್ನಲೆಗೆ ತರಲಾಗುತ್ತಿದೆ.
ಅಷ್ಟೇ ಅಲ್ಲದೆ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆಗಳನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಒಕ್ಕಲಿಗರ ವಿರೋಧಿ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡಾ ಪ್ರತಿತಂತ್ರ ಹೂಡುತ್ತಿದೆ. ಒಕ್ಕಲಿಗರ ಸಮುದಾಯದ ಇತರ ನಾಯಕರುಗಳು ಜೆಡಿಎಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಚೆಲುವರಾಯಸ್ವಾಮಿ ಸೇರಿದಂತೆ ಇತರ ನಾಯಕರು ಕುಮಾರಸ್ವಾಮಿ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಇಬ್ಬರು ಪ್ರಭಾವಿ ನಾಯಕರು ತಮ್ಮದೇ ಆದ ತಂತ್ರಗಾರಿಕೆಗಳನ್ನು ಪ್ರಯೋಗ ಮಾಡುವ ಮೂಲಕ ಒಕ್ಕಲಿಗರ ಮತಗಳನ್ನು ಭದ್ರಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುವುದು ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟಗೊಳ್ಳಲಿದೆ.