ಮಂಗಳೂರು: ರಾಜ್ಯ ಸರ್ಕಾರದ ‘ನನ್ನ ಮೈತ್ರಿ’ ಮುಟ್ಟಿನ ಕಪ್ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು, ಯೋಜನೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ರಾಯಭಾರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತಡಿದ ಸಪ್ತಮಿ ಗೌಡ ಅವರು, ‘ನಾನು ಸ್ವಿಮ್ಮಿಂಗ್ ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದಿದ್ದು ಮಂಗಳೂರಿನಲ್ಲಿ, ಸಿನಿಮಾದಲ್ಲಿ ಹೆಸರು ಬಂದಿದ್ದು ಮಂಗಳೂರಿನಿಂದಲೇ. ಅದೇ ರೀತಿ ಮೈತ್ರಿ ಯೋಜನೆಗೆ ಮಂಗಳೂರಿನಿಂದಲೇ ರಾಯಭಾರಿಯಾಗಿ ಆಗಿರುವುದಕ್ಕೆ ಹೆಮ್ಮೆಯಿದೆ ಎಂದರು.
ಮೈತ್ರಿ ಯೋಜನೆಗೆ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್ ಸಹಕಾರಿ. ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಇನ್ನು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಪ್ರತಿಯೊಬ್ಬ ವಿದ್ಯಾರ್ಥಿನಿಯರು ಮೈತ್ರಿ ಯೋಜನೆಯ ರಾಯಭಾರಿಗಳಾಗಿ, ಮುಟ್ಟಿನ ಕಪ್ ಹೆಚ್ಚು ಹೆಚ್ಚು ಬಳಕೆಗೆ ಪ್ರೇರಕರಾಗಬೇಕು ಎಂದರು.
ಮೈತ್ರಿ ಯೋಜನೆ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಇದನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲಿದ್ದೇವೆ. ಇಂದು ಮಂಗಳೂರಿನಲ್ಲಿ11 ಸಾವಿರ ಹಾಗೂ ಚಾಮರಾಜನಗರದಲ್ಲಿ 4 ಸಾವಿರ ಮೈತ್ರಿ ಯೋಜನೆಯ ಮುಟ್ಟಿನ ಕಪ್ ಸೇರಿ ಒಟ್ಟು 15 ಸಾವಿರ ಶಾಲಾ – ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಗಿ ಎಂದು ಆರೋಗ್ಯ ಸಚಿವರು ಹೇಳಿದರು.