ಮಂಗಳೂರು: ಸಮುದ್ರದಲೆಯನ್ನು ಲೆಕ್ಕಿಸದೆ ಮೀನುಗಾರಿಕೆ ನಡೆಸುವವರು ಮೊಗವೀರರು. ಆದ್ದರಿಂದ ಇವರು ಸಾಹಸಿಗಳೇ ಸರಿ. ಆದರೆ ಮಂಗಳೂರಿನಲ್ಲೊಬ್ಬ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಮಳೆಗಾಲಕ್ಕೂ ಕಡಲಾಚೆಗೆ ಹೋಗಿ ರಾಣಿಬಲೆ ಮೀನುಗಾರಿಕೆ ನಡೆಸುತ್ತಾಳೆಂದರೆ ಈಕೆಯ ಧೈರ್ಯ, ಸಾಹಸಕ್ಕೆ ಎಂಥವರಾದರೂ ತಲೆದೂಗಲೇಬೇಕು.
ಹೌದು… ಬೆಂಗ್ರೆಯ ಮತ್ಯೋದ್ಯಮಿ ಜಯಪ್ರಕಾಶ್ ಮೆಂಡನ್ ಹಾಗೂ ಕಲಾವತಿ ಜೆ. ದಂಪತಿಯ ಪುತ್ರಿ ಪ್ರಾಪ್ತಿಯೇ ಗಟ್ಟಿಗಿತ್ತಿ. ಈಕೆ ಮಂಗಳೂರಿನ ಫಿಶರೀಸ್ ಕಾಲೇಜಿನಲ್ಲಿ ಫಿಶರೀಶ್ ಪದವಿ ಪಡೆದಿದ್ದು ಸದ್ಯ ಇದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಕಾಲೇಜು ನಡುವೆಯೇ ಆಕೆ ತನ್ನ ತಂದೆಯ ಮಾಲಕತ್ವದ ಜೈ ವಿಕ್ರಾಂತ್ ಬೆಂಗ್ರೆ ರಾಣಿಬಲೆ ತಂಡದೊಂದಿಗೆ ಮೀನುಗಾರಿಕೆಯನ್ನೂ ನಡೆಸುತ್ತಾಳೆ.
ಕಳೆದ 10ವರ್ಷಗಳಿಂದ ಈಕೆ ತಂದೆಯೊಂದಿಗೆ ಕಡಲಾಚೆಗೆ ಹೋಗಿ ಮೀನುಗಾರಿಕೆ ಮಾಡುತ್ತಿದ್ದಾಳೆ. ತನ್ನ 14ರ ವಯಸ್ಸಿನಿಂದಲೇ ಬೋಟ್ ಏರಿ ಮೀನುಗಾರಿಕೆಯನ್ನು ಮಾಡುತ್ತಿದ್ದಾಳೆ. ಸದ್ಯ ಮಳೆಗಾಲದಲ್ಲೂ ಮೀನುಗಾರಿಕೆ ತಂಡದೊಂದಿಗೆ ಹಳಗಿ ರಾಣಿಬಲೆ ಮೀನುಗಾರಿಕೆ ಮಾಡುತ್ತಿದ್ದಾಳೆ. ಮೀನುಗಾರಿಕೆ ಕಾಲೇಜಿನಲ್ಲಿ ಪ್ರಾಧ್ಯಾಪಕರೂ ಆಕೆಯ ತಂದೆ ಜಯಪ್ರಕಾಶ್ ಮೆಂಡನ್ ಅವರ ಪ್ರೋತ್ಸಾಹವೇ ಈ ಸಾಹಸಕ್ಕೆ ಪ್ರೇರಣೆಯಂತೆ. ಒಟ್ಟಿನಲ್ಲಿ ಈಕೆಯ ಸಾಹಸ ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.