ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿಯುವ ಹೊಸದೊಂದು ವಿಡಿಯೋವನ್ನು ಇಸ್ರೋ ಇದೀಗ ರಿಲೀಸ್ ಮಾಡಿದೆ. ಇದರ ಜೊತೆಗೆ ಪ್ರಗ್ಯಾನ್ ರೋವರ್ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿರುವುದು ನೋಡಬಹುದಾಗಿದೆ.
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಆಗಸ್ಟ್ 23 ರಂದು ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಮೇಲಿಳಿದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ತನ್ನ ಕೆಲಸ ಶುರುಮಾಡಿಕೊಂಡಿತ್ತು. ಈ ಸಂಬಂಧ ಇಸ್ರೋ ಹೊಸ ವಿಡಿಯೋ ರಿಲೀಸ್ ಮಾಡಿದೆ. ಇದರಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಇಳಿಯುವ ದೃಶ್ಯ ಸೆರೆಯಾಗಿದ್ದು, ಪ್ರಗ್ಯಾನ್ ರೋವರ್ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಗುರುತು ಕೂಡ ಕಂಡುಬಂದಿದೆ. ಹೀಗಾಗಿ ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಯಶಸ್ವಿಯಾಗಿ ಇಳಿಯುವುದರೊಂದಿಗೆ, ಚಂದ್ರನ ನೆಲದ ಮೇಲೆ ಸಾವಿರಾರು ವರ್ಷಗಳ ಕಾಲ ಅಳಿಯದ ರೀತಿಯಲ್ಲಿ ಇಸ್ರೋದ ಚಿಹ್ನೆ ಮತ್ತು ಭಾರತದ ರಾಷ್ಟ್ರ ಲಾಂಛನದ ಚಿತ್ರಣ ಮೂಡಿದೆ. ಚಂದ್ರನಲ್ಲಿ ಯಾವುದೇ ವಾತಾವರಣ ಇಲ್ಲದ ಕಾರಣ ಈ ಎರಡೂ ಚಿಹ್ನೆಗಳು ಅಲ್ಲಿ ಸಾವಿರಾರು ವರ್ಷ ಹಾಗೆಯೇ ಇರಲಿದೆ ಎಂದು ಅಭಿಪ್ರಾಯ ಪಡಲಾಗಿದೆ.
ಈಗಾಗಲೇ ಈ ರೋವರ್ ಚಂದ್ರ ಮೇಲೆ ತನ್ನ ಅಧ್ಯಯನ ಆರಂಭಿಸಿದೆ. ಈ ವಿಡಿಯೋ ಆಗಸ್ಟ್ 23ರದ್ದಾಗಿದ್ದು, ಆಗಸ್ಟ್ 25ರ ಇಂದು ಇಸ್ರೋ ಟ್ವೀಟ್ ಮಾಡಿದ್ದು, ಇದಕ್ಕೂ ಮುನ್ನ ಅಂದರೆ ಆಗಸ್ಟ್ 24ರಂದು ಸಂಜೆ ಟ್ವೀಟ್ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಲ್ಯಾಂಡರ್ ಮಾಡ್ಯೂಲ್ನ 3 ಪೇಲೋಡ್ಗಳನ್ನು ಆನ್ ಮಾಡಲಾಗಿದೆ. ಇಸ್ಲಾ, ರಂಭಾ ಹಾಗೂ ಚೇಸ್ಟ್ ಪೇಲೋಡ್ಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಮಾಹಿತಿ ನೀಡಿದೆ.
ಇದೇ ಸಮಯದಲ್ಲಿ ರೋವರ್ ಸಂಚಾರ (ಮೊಬಿಲಿಟಿ) ಕೂಡ ಆರಂಭವಾಗಿದೆ ಎಂದು ಅದು ಹೇಳಿತ್ತು. ಇನ್ನು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ರವಾನಿಸಿರುವ ಪ್ರೊಪಲ್ಷನ್ ಮಾಡ್ಯೂಲ್ನ ಶೇಪ್ ಪೇಲೋಡ್ ಅನ್ನು ಭಾನುವಾರ ಆನ್ ಮಾಡಲಾಗುತ್ತದೆ ಎಂದು ಟ್ವೀಟ್ನಲ್ಲಿ ಇಸ್ರೋ ಮಾಹಿತಿ ನೀಡಿದೆ. ಬುಧವಾರ ರಾತ್ರಿಯೇ, ಚಂದ್ರನ ಮೇಲೆ ಲ್ಯಾಂಡ್ ಅದ ಸುಮಾರು ಮೂರೂವರೆ ತಾಸಿನ ಬಳಿಕ ಲ್ಯಾಂಡರ್ನಿಂದ ಪ್ರಗ್ಯಾನ್ ರೋವರ್ ಸುಲಲಿತವಾಗಿ ಹೊರಬಂದಿತ್ತು ಹಾಗೂ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು. ಇಂದು ಅದರ ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿದೆ.
ಭೂಮಿಯ 14 ದಿನಗಳು 1 ಚಂದ್ರನ ದಿನಕ್ಕೆ ಸಮ. ಹೀಗಾಗಿ ಬುಧವಾರದಿಂದ 14 ದಿನ ಕಾಲ ಚಂದ್ರನ ಮೇಲೆ ಅಧ್ಯಯನ ನಡೆಸುವ ಶಕ್ತಿಯು ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ಗೆ ಇದೆ ಎಂದು ಹೇಳಲಾಗುತ್ತಿದ್ದು, ನಂತರ ಭೂಮಿಯ 14 ದಿನಗಳ ಕಾಲ ಚಂದ್ರನಲ್ಲಿ ರಾತ್ರಿ ಸಂಭವಿಸಲಿದ್ದು, ಆಗ ಕೊರೆಯುವ ಚಳಿ ಕಾರಣ ರೋವರ್ ಹಾಗೂ ಲ್ಯಾಂಡರ್ಗಳು ನಿಷ್ಕ್ರೀಯಗೊಳ್ಳಬಹುದು ಎಂದು ಆರಂಭದಲ್ಲಿ ವಿಶ್ಲೇಷಿಸಲಾಗಿದೆ.
ಆದರೆ ಚಂದ್ರನಲ್ಲಿ ಸಂಭವಿಸುವ 14 ದಿನಗಳ ರಾತ್ರಿ ಬಳಿಕವೂ ರೋವರ್ ಹಾಗೂ ಲ್ಯಾಂಡರ್ ಸುಸ್ಥಿತಿಯಲ್ಲಿ ಇರುವ ನಿರೀಕ್ಷೆಯಿದೆ. ಹೀಗಾಗಿ ಆ ರಾತ್ರಿ ಕಳೆದ ಬಳಿಕ ಮತ್ತೆ 14 ದಿನ ಕಾಲ ರೋವರ್ ಹಾಗೂ ಲ್ಯಾಂಡರ್ಗಳು ಚಂದ್ರನ ಮೇಲೆ ಕಾರ್ಯಾಚರಣೆ ನಡೆಸುವ ವಿಶ್ವಾಸವಿದೆ ಎಂದು ಇಸ್ರೋ ಅಧಿಕಾರಿಗಳು ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.