ಅಂದು ಅಂಬೇಡ್ಕರ್ ರನ್ನು ಜಾತಿಯ ಆಧಾರದ ಮೇಲೆ ಶಾಲೆಯಿಂದ ಹೊರ ಹಾಕಿದಾಗ ಆ ಪುಟ್ಟ ಮನಸ್ಸಿನ ವೇದನೆ ಹೇಗಿರಬಹುದು ಎಂದು ಊಹಿಸಿದರೆನೇ ಘಾಸಿಯಾಗುತ್ತದೆ. ಶಾಲೆಯೇ ದೇಗುಲ ಎಂದು ನಂಬುವ ಜನ, ಶಿಕ್ಷಕರನ್ನು ದೇವರ ಸಮಾನರಾಗಿ ಕಾಣುತ್ತಾರೆ. ಆದರೆ ದೇವರಂತೆ ಕರುಣಾಮಯಿ ಅಲ್ಲದ ಮಾನವ, ಶಾಲೆ ಎಂಬ ದೇಗುಲದಲ್ಲಿ ಮುಗ್ಧ ಮನಸ್ಸುಗಳಲ್ಲಿ ಜಾತಿ-ಧರ್ಮದ ಬೀಜ ಬಿತ್ತಿ, ಅಸಹನೆಯನ್ನು ಬೆಳೆಸಿದರೆ ಮುಂದಿನ ಸಮಾಜದ ವಾತಾವರಣವನ್ನು ಊಹಿಸಿವುದು ಕಷ್ಟಕರವಾಗುತ್ತದೆ.
ನಾವು ಕಂಡ ಶಿಕ್ಷಕರು ನ್ಯಾಯ, ನೀತಿ ಮತ್ತು ಸಹನೆಯ ವಿಚಾರದಲ್ಲಿ ಅತ್ಯಂತ ವಿವೇಕದಿಂದ ಹೆಜ್ಜೆ ಇಡುತ್ತಿದ್ದರು. ತನ್ನದೇ ಸ್ವಂತ ಮಗ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದರಂತೂ ಎಲ್ಲರಿಗಿಂತ ಹೆಚ್ಚು ಬೈಗುಳ ಅವನಿಗೇ ದೊರೆಯುತಿತ್ತು. ತರಗತಿಯಲ್ಲಿರುವ ಬೇರೆ ಮಕ್ಕಳು ತಮ್ಮ ಶಿಕ್ಷಕಿಯನ್ನು ತಾರತಮ್ಯ ಮಾಡುವವರು ಎಂದು ಭಾವಿಸುವುದು ಬೇಡ ಎಂಬ ಮನೋಸ್ಥಿತಿಯ ಶಿಕ್ಷಕರನ್ನು ಹೊಂದಿದ್ದ, ನಾವು ವಿದ್ಯಾರ್ಥಿಗಳು ಅದೃಷ್ಟವಂತರೆ ಸರಿ.
ನಿನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ತನ್ನ ಸಹಪಾಟಿಯ ಕೆನ್ನೆಗೆ ಬಾರಿಸಲು ಸೂಚನೆ ನೀಡಿದ್ದರು. ತರಗತಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿ ಬಂದು ಮುಂದೆ ನಿಂತಿದ್ದ ತಮ್ಮ ಗೆಳೆಯನ ಕೆನ್ನೆಗೆ ಬಾರಿಸಬೇಕಿತ್ತು. ವಿದ್ಯಾರ್ಥಿ ಪಾಲಿಸುವ ಧರ್ಮ ಶಿಕ್ಷಕಿಯ ಈ ನೀಚ ಕ್ರಿಯೆಗೆ ಕಾರಣ ಎಂದು ವಿಡಿಯೋ ತುಣುಕು ತಿಳಿಸುತ್ತದೆ.
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಒಬ್ಬ ಶಿಕ್ಷಕರ ಪಾತ್ರ ಅತೀ ಮುಖ್ಯವಾದದ್ದು. ಪುಟ್ಟ ಮನಸ್ಸಿಗೆ ಬಿತ್ತುವ ಬೀಜ ಆ ವ್ಯಕ್ತಿತ್ವದ ಜೀವನ ಪರ್ಯಂತ ಮುಂದುವರಿಯುತ್ತದೆ. ಉತ್ತರ ಪ್ರದೇಶದ ಶಿಕ್ಷಕಿಯ ಈ ಕ್ರಿಯೆ ಮಾನವೀಯವಾಗಿ ಖಂಡನೀಯ. ಭಾರತ ಸಂವಿಧಾನಾದ ಮೂಲ ಹಕ್ಕುಗಳ ವಿರುದ್ಧದ ನಡೆಯೂ ಹೌದು. ಅಂಬೇಡ್ಕರ್ ರ ಏಳು ದಶಕಗಳ ಹಿಂದೆ ನಡೆಸಿದ ಹೋರಾಟ ಸಂವಿಧಾನ ದೊರಕಿ ವರ್ಷಗಳು ಉರುಳಿದರೂ ಮುಂದುವರೆಸುವ ಪರಿಸ್ಥಿತಿ ಬಂದೊದಗಿದುದರ ಬಗ್ಗೆ ಚಿಂತನೆ ಅತ್ಯಗತ್ಯ.
ಶಿಕ್ಷಕರ ರೆಂಬ ಅಮೂಲ್ಯ ಸ್ಥಾನಕ್ಕೆ ದಕ್ಕೆ ತರುವಂತಹ ಇಂತಹ ನೀಚ ಮನೋಸ್ಥಿತಿಯ ಶಿಕ್ಷಕಿಯ ವಿರುದ್ಧ ಕ್ರಮ ಅತ್ಯಗತ್ಯ. ಈ ಶಿಕ್ಷಕೆಗೆ ನೀಡುವ ಪ್ರತೀ ಶಿಕ್ಷೆಯು ದೇಶದ ಶಾಂತಿ ಕೆಡಿಸುವಲ್ಲಿ ಪಣ ತೊಟ್ಟಿರುವ ಪ್ರತಿಯೊಬ್ಬರಿಗೂ ಪಾಠವಾಗ ಬೇಕಿದೆ.