ಫಿಫಾ ಮಹಿಳಾ ವಿಶ್ವ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಚೊಚ್ಚಲ ಬಾರಿ ಸ್ಪೇನ್ ಮಹಿಳಾ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.
ಸಿಡ್ನಿಯಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಸ್ಪೇನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕಿ ಓಲ್ಗಾ ಕಾರ್ಮೋನಾ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿಕೊಂಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಅಂತರದಿಂದ ಯುರೋಪಿಯನ್ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಇದರೊಂದಿಗೆ ಪುರುಷ-ಮಹಿಳಾ ವಿಭಾಗದಲ್ಲಿ ಫುಟ್ ಬಾಲ್ ವಿಶ್ವ ಚಾಂಪಿಯನ್ ಪಟ್ಟವೇರಿದ 2ನೇ ತಂಡವೆನಿಸಿತು.
ಇಂಗ್ಲೆಂಡ್ ಶೇ.70 ರಷ್ಟು ನಿಖರ ಪಾಸ್ ಗಳ ಮೂಲಕ ಗಮನ ಸೆಳೆದರೆ, ಸ್ಪೇನ್ ಆಟಗಾರ್ತಿಯರು ಶೇ.81 ರಷ್ಟು ಪಾಸ್ ಗಳ ಮೂಲಕ ಪಂದ್ಯವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಈ ಮೂಲಕ ಪೂರ್ಣ ಸಮಯದವರೆಗೆ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಸ್ಪೇನ್ ತಂಡವು ಅಂತಿಮವಾಗಿ 1-0 ಅಂತರದ ಮುನ್ನಡೆಯೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
2010ರಲ್ಲಿ ಪುರುಷರ ವಿಭಾಗದಲ್ಲಿ ಸ್ಪೇನ್ ಚಾಂಪಿಯನ್ ಆಗಿತ್ತು. ಜರ್ಮನಿ ಪುರುಷ-ಮಹಿಳಾ ಫಿಫಾ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ. 23 ವರ್ಷದ ಓಲ್ಗಾ ಫೈನಲ್ ಹಾಗೂ ಸೆಮಿಫೈನಲ್ನಲ್ಲಿ ಗೋಲು ಸಿಡಿಸಿದ ಎರಡನೇ ಆಟಗಾರ್ತಿ ಎನಿಸಿದರು. 2015ರಲ್ಲಿ ಅಮೆರಿಕದ ಕಾರ್ಲಿ ಲಾಯ್ಡ ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು.
ಇಂಗ್ಲೆಂಡ್ ತಂಡದ ಕೋಚ್ ಸರಿನಾ ವೆಗ್ಯಾಮ್ ಸತತ ಎರಡನೇ ಫಿಫಾ ವಿಶ್ವಕಪ್ ಫೈನಲ್ನಲ್ಲಿ ನಿರಾಸೆ ಕಂಡರು.
2019ರಲ್ಲಿ ನೆದರ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರೂ, ಫೈನಲ್ ನಲ್ಲಿ ಅಮೆರಿಕ ಎದುರು 0-2 ವಿರುದ್ಧ ಎಡವಿದ್ದರು.