ಬೆಂಗಳೂರು: ಕಾವೇರಿ ನೀರಿಗಾಗಿ ನೆರೆಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು ಇದರ ಬಗ್ಗೆ ಚರ್ಚೆ ನಡೆಸಲು ಶೀಘ್ರವೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿಯವರು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಕಾವೇರಿ ಜೊತೆಗೆ ಮಹದಾಯಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಸರ್ವ ಪಕ್ಷಗಳ ಜತೆ ಚರ್ಚೆ ನಡೆಸಲಾಗುವುದು.
ತಮಿಳುನಾಡಿಗೆ ನಿತ್ಯ 10,000 ಕ್ಯೂಸೆಕ್ಸ್ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಹ ತಿಳಿಸಿದರು.
ಮಳೆ ಸರಿಯಾಗಿ ಇಲ್ಲದೇ ರಾಜ್ಯದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಆದರೂ ನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಪ್ರಾಧಿಕಾರ ತಿಳಿಸಿದೆ. ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಆದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.