ಮಲೆನಾಡಿನ ಮೊದಲ ವಿಮಾನ ನಿಲ್ದಾಣವಾದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಆಗಸ್ಟ್ 11 ರಂದು ವಿಮಾನ ಹಾರಾಟ ಆರಂಭವಾಗಲಿದ್ದು, ಇಂಡಿಗೋ ಸಂಸ್ಥೆಯ ಮೊದಲ ವಿಮಾನ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವನ್ನು ಫೆಬ್ರವರಿಯಲ್ಲಿ 27 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಆದರೆ ಉದ್ಘಾಟನೆಗೊಂಡು ನಾಲ್ಕೈದು ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ವಿಮಾನ ಹಾರಾಟ ನಡೆಸಿಲ್ಲ. ಈ ಮಧ್ಯೆ ಸರ್ಕಾರ ಬದಲಾವಣೆಯಿಂದ ವಿಮಾನ ಹಾರಾಟ ಇನ್ನಷ್ಟು ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆ.11ರಿಂದಲೇ ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಳ್ಳುವುದು ಖಚಿತವಾಗಿದೆ.
ಇಂಡಿಗೋ ಸಂಸ್ಥೆಯ ಎಟಿಆರ್72 ಮಾದರಿಯ 78 ಆಸನಗಳ ವಿಮಾನ ಹಾರಾಟ ನಡೆಸಲಿದ್ದು, ಕಳೆದ ವಾರ ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸೇವೆಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.
ಪ್ರತಿ ದಿನ ಹೊರಡುವ ಸಮಯ:
ವಿಮಾನ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ 1.30ಕ್ಕೆ ಬೆಂಗಳೂರು ತಲುಪಲಿದೆ.
ಸದ್ಯ ಇಂಡಿಗೋ ಸಂಸ್ಥೆ ಬೆಂಗಳೂರು-ಶಿವಮೊಗ್ಗ ನಡುವೆ ಒಂದು ವಿಮಾನವನ್ನು ಮಾತ್ರ ಓಡಿಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಇನ್ನು ಬೆಂಗಳೂರು- ಶಿವಮೊಗ್ಗ ಮಾರ್ಗಕ್ಕೆ 2,500ರಿಂದ 3,500 ರೂ. ತನಕ ದರ ನಿಗದಿ ಆಗುವ ನಿರೀಕ್ಷೆ ಇದೆ.