ಧಾರವಾಡ: ಕಾಂಗ್ರೆಸ್ ಅಂದರೆ ಉತ್ತರ ಕರ್ನಾಟಕ ವಿರೋಧಿ. ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಕಕ್ಕೆ ಅನ್ಯಾಯ ಮಾಡಿದ್ದಾರೆ. ನಂಜುಂಡಪ್ಪ ವರದಿಯನ್ನು ಯಡಿಯೂರಪ್ಪ ಅವರು ಅನುಷ್ಠಾನ ಮಾಡಿದ ಮೇಲೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತಿದೆ. ನಾನು ಉತ್ತರ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಅಂತ ಘೋಷಣೆ ಮಾಡಿದ್ದೇನೆ. ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅಮರಗೋಳ ಮತ್ತು ನವಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಪರ ಪ್ರಚಾರ ನಡೆಸಿ ಮಾತನಾಡಿದ ಅವರು ಅಮರಗೋಳ ಗ್ರಾಮ ನನ್ನ ಗ್ರಾಮ. ನನ್ನ ಗ್ರಾಮದಿಂದ ಶೇ. 95 ರಷ್ಟು ಮತ ನೀಡಿ. ಕಳೆದ ಬಾರಿಗಿಂತ ಹೆಚ್ಚಿನ ಮತ ನೀಡಿ ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.
ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವುದು ಅಭಿವೃದ್ಧಿ ಮಾಡುತ್ತಿರುವವರು ಮತ್ತು ಚುನಾವಣೆಗೆ ಮಾತ್ರ ಬರುವವರ ನಡುವೆ. ಆಮಿಷವೊಡ್ಡಿ ಮತ ಪಡೆಯುವವರಿಂದ ಏನು ಮಾಡಲು ಸಾಧ್ಯವಿಲ್ಲ. ಅರವಿಂದ ಬೆಲ್ಲದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ. ಅವರು ಒಬ್ಬ ಸಜ್ಜನ ರಾಜಕಾರಣಿ, ಉದ್ಯಮಿ, ಚಂದ್ರಕಾಂತ ಬೆಲ್ಲದ ಅವರ ಪುತ್ರ ಎಂದರು.
ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಮಾಡಿದ್ದೇವೆ. ಕೆಎಂಸಿ ಆಸ್ಪತ್ರೆ ವಿಸ್ತರಣೆ ಗೆ 250 ಕೋಟಿ ನೀಡಿದ್ದೇವೆ. ಕುಡಿಯುವ ನೀರು 24 ಗಂಟೆ ಕೊಡಲು ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ ನವರು ಹತಾಶರಾಗಿ ಮನಸೋ ಇಚ್ಚೆ ಮಾತನಾಡುತ್ತಿದ್ದಾರೆ. ಬೆಲ್ಲದ ಅವರನ್ನು ಆಯ್ಕೆ ಮಾಡಿದರೆ ಒಬ್ಬ ಶಾಸಕ ಅಷ್ಟೇ ಅಲ್ಲ. ರಾಜ್ಯ ಮಟ್ಟದ ನಾಯಕನ ಆಯ್ಕೆ ಮಾಡಿದಂತಾಗುತ್ತದೆ. ಈ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಅವರನ್ನು 50 ಸಾವಿರ ಮತಗಳಿಂದ ಆರಿಸಿ ತರಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಎಲ್ಲರೂ ಬೆಂಬಲ ನೀಡಿ ಎಂದರು.
ಕಾಂಗ್ರೆಸ್ ಈ ರಾಜ್ಯಕ್ಕೆ ಒಂದು ಅನಿಷ್ಠ. ಅವರು ಐದು ವರ್ಷ ಆಡಳಿತ ಮಾಡಿ, ಆ ಭಾಗ್ಯ ಈ ಭಾಗ್ಯ ಅಂತ ದೌರ್ಬಾಗ್ಯ ನೀಡಿದ್ದಾರೆ. ರಾಹುಲ್ ಗಾಂಧಿ ಕೂಡಲ ಸಂಗಮಕ್ಕೆ ಬಂದು ಹೋಗಿದಾರೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಬರಲಿಲ್ಲ. ನಾವು ನವಲೂರಿನಲ್ಲಿ ಹಾಲು ಮತದ ವ್ಯಕ್ತಿ ತೀರಿಕೊಂಡಾಗ ಬಂದು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವು. ಕಾಂಗ್ರೆಸ್ ನವರು ದೀನ ದಲಿತರನ್ನು ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡಿದ್ದಾರೆ. ಅವರನ್ನು ಬಾವಿಯಲ್ಲಿಟ್ಟು ಚುನಾವಣೆ ಬಂದಾಗ ಅವರನ್ನು ಬಾವಿಯಿಂದ ಎತ್ತಿ ಮತ ಹಾಕಿಸಿ, ಮತ್ತೆ ಬಾವಿಯಲ್ಲಿ ಬಿಡುವ ಕೆಲಸ ಮಾಡುತ್ತಾರೆ. ಈಗ ದಲಿತರು, ಹಿಂದುಳಿದವರು ಎಲ್ಲರೂ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ. ಜನರು ಈ ಬಾರಿ ಕಾಂಗ್ರೆಸ್ ನ್ನು ಬಾವಿಗೆ ಹಾಕಲು ತೀರ್ಮಾನಿಸಿದ್ದಾರೆ ಎಂದರು.
ಕಾಂಗ್ರೆಸ್ ನವರು ಚುನಾವಣೆಗೆ ಮತ್ತೆ ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದಾರೆ. ಅದು ಚುನಾವಣೆ ಮುಗಿದ ಮೇಲೆ ಗಳಗಂಟಿ ಆಗಲಿದೆ. ಕಾಂಗ್ರೆಸ್ ನವರು ಮನೆಗೆ ಹೋಗುವುದು ಗ್ಯಾರೆಂಟಿ. ನಾವು ಹಿಂದುಳಿದ ವರ್ಗಗಳ ಗಾಣೀಗರು, ಮಾಲಗಾರರು, ವಿಶ್ವಕರ್ಮ, ಮರಾಠ ಅಭಿವೃದ್ಧಿ ನಿಗಮ ಮಾಡಿದ್ದೇವೆ. ರಾಜ್ಯದ ಎಲ್ಲ ಸಮುದಾಯಗಳಿಗೆ ನ್ಯಾಯ ಸಮ್ಮತ ಪಾಲು ಸಿಗಬೇಕು ಎಂದು ನಿಗಮಗಳನ್ನು ಮಾಡಿದ್ದೇವೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಬಸವಣ್ಣನರ ಆಶಯದಂತೆ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ ಎಂದರು.