ದಕ್ಷಿಣ ಭಾರತದಲ್ಲಿ ಐತಿಹಾಸಿಕ ಕಾಲದಿಂದಲೂ ಇರುವ ನಾಲ್ಕು ಭಾಗಗಳು ಆಂಧ್ರಪ್ರದೇಶ ಪ್ರಾಚೀನ ಆಂಧ್ರಕ್ಕಿಂತಲೂ ವಿಸ್ತಾರದಲ್ಲಿ ಹಿರಿದಾದುವು. ಇದರ ಕೆಲವು ಭಾಗ ಒಮ್ಮೆ ಕರ್ನಾಟಕಕ್ಕೆ ಸೇರಿತ್ತು. ಈ ಪ್ರದೇಶದೊಡನೆ ಕನ್ನಡಿಗರು ನಿಕಟ ಸಂಪರ್ಕ ಹೊಂದಿದ್ದರು. ಪಶ್ಚಿಮ ಕರಾವಳಿಯ ಮೇಲೆ ಪ್ರಭುತ್ವ ಪಡೆದ ಕನ್ನಡಿಗರು ಪೂರ್ವ ಕರಾವಳಿಯ ಮೇಲೂ ಸಹ ಆಧಿಪತ್ಯವನ್ನು ಸ್ಥಾಪಿಸಲು ಯತ್ನಿಸಿದರು. ಸಾತವಾಹನರೊಡನೆ ಮಧುರವಾದ ಬಾಂಧವ್ಯವನ್ನು ಪಡೆದ ಕರ್ನಾಟಕದ ಅರಸರು, ಸಹಜವಾಗಿಯೇ ಸಾತವಾಹನರ ರಾಜ್ಯಕ್ಕೆ ಉತ್ತರಾಧಿಕಾರಿಗಳಾಗಲು ಹವಣಿಸಿದರು.
ಇವರ ಈ ಹವಣಿಕೆಯು ಇವರು ತಮಿಳುನಾಡಿನ ಪಲ್ಲವರೊಡನೆ ಸ್ಪರ್ಧೆ ಹೂಡಲು ಹಾದಿ ಮಾಡಿತು, ಕದಂಬರಿಗೂ ಪಲ್ಲವರಿಗೂ ನಡುವೆ ಏರ್ಪಟ್ಟ ವಿರಸ ಅನಂತರದ ಅವರ ಬಾಂಧವ್ಯವನ್ನು ಹದಗೆಡಿಸಿತು. ಚಾಲುಕ್ಯ ಇಮ್ಮಡಿಪುಲಿಕೇಶಿಯು ವೆಂಗಿಮಂಡಲ-ಈಗಿನ ಗೋದಾವರಿ ಜಿಲ್ಲೆಯ ಸುತ್ತಲಿನ ಪ್ರದೇಶದಲ್ಲಿ ತನ್ನ ಸೋದರನನ್ನು ಅಧಿಕಾರದಲ್ಲಿ ನಿಲ್ಲಿಸಿದನು. ಹೀಗೆ ಅಲ್ಲಿ ನೆಲೆಗೊಂಡ ವಿಷ್ಣುವರ್ಧನನೂ, ಅವನ ಸಂತತಿಯವರೂ ಪೂರ್ಣ ಚಾಲುಕ್ಯರೆನಿಸಿಕೊಂಡರು. ಕರ್ನಾಟಕದಲ್ಲಿ ರಾಷ್ಟ್ರಕೂಟರ ಆಳ್ವಿಕೆ ಆರಂಭವಾದಾಗ ಪಶ್ಚಿಮ ಚಾಲುಕ್ಯರನ್ನು ಅವರು ಸೋಲಿಸಿ ಓಡಿಸಿದರೆಂಬ ಮೂಲಭೂತ ಕಾರಣದಿಂದಲೋ ಎಂಬಂತೆ, ಪೂರ್ವ ಚಾಲುಕ್ಯರು ರಾಷ್ಟ್ರಕೂಟರೊಡನೆ ಮೇಲಿಂದ ಮೇಲೆ ಕದನಗಳನ್ನು ಹೂಡಿದರು. ಇಮ್ಮಡಿ ತೈಲಪನನಂತರ ಪಶ್ಚಿಮ ಚಾಲುಕ್ಯರು ತಮ್ಮ ರಾಜ್ಯವನ್ನು ಮನು ಪ್ರತಿ ಸ್ಥಾಪಿಸಿದಾಗ, ವೆಂಗಿಯನ್ನು ಸಹ ಈ ಚಾಲುಕ್ಯ ರಾಜ್ಯಕ್ಕೆ ಸೇರಿಸಿಕೊಳ್ಳುವ ಸನ್ನಾಹಗಳು ನಡೆದುವು
ಆದರೆ ವಿಧಿವಿಲಾಸ ಬೇರೆಯದಾಗಿತ್ತು. ಪಲ್ಲವ-ಕದಂಬರೊಡನೆ ಆರಂಭವಾದ ವಿರಸ ತದನಂತರ ಅಧಿಕಾರಕ್ಕೆ ಬಂದ ಚಾಲುಕ್ಯರ ಕಾಲದಲ್ಲಿ ತೀವ್ರ ರೂಪವನ್ನು ತಾಳಿತು. ಪುಲಿಕೇಶಿಯಿಂದ ಸೋಲಿಸಲ್ಪಟ್ಟ ಪಲ್ಲವರು ಕರ್ನಾಟಕದ ಆರಸರನ್ನು ಪ್ರತಿಸ್ಪರ್ಧಿಗಳೆಂದೂ, ಶತ್ರುಗಳೆಂದೂ ಬಗೆದರು. ಈ ಎರಡು ಭೌಗೋಳಿಕವಾಗಿ ಭಿನ್ನವಾದ ಪ್ರದೇಶಗಳ ಅರಸು ಮನೆತನಗಳ ನಡುವೆ ಅಂದು ತಲೆದೋರಿದ ವೈಷಮ್ಯ ಶತಮಾನಗಳ ಕಾಲ ಮುಂದುವರೆಯಿತು. ಎರಡೂ ಪ್ರದೇಶಗಳ ಅರಸು ಮನೆತನಗಳವರು ಈ ವೈಷಮ್ಯವನ್ನು ಅನುವಂಶಿಕವಾಗಿ ಎಂಬಂತೆ ಮುಂದುವರೆಸಿಕೊಂಡು ಬಂದರು ಕರ್ನಾಟಕದ ಅರಸರು ವೆಂಗಿಯನ್ನು ತಮ್ಮ ಆಧೀನದಲ್ಲಿರಿಸಿಕೊಳ್ಳಲು ಮಾಡಿದ ಯತ್ನಗಳು ಈ ಸರ್ಧೆ ತೀವ್ರವಾಗುವುದರಲ್ಲಿ ಪರಿಣಮಿಸಿದವು. ಪೂರ್ವಚಾಲುಕ್ಯರ ಇಮ್ಮಡಿ ರಾಜೇಂದ್ರನು ಚೋಳವಂಶೀಯವಾಗಿದ್ದು, ಚೋಳ ರಾಜ್ಯದಲ್ಲಿ ವೀರ ರಾಜೇಂದ್ರನ ನಂತರ ಸಿಂಹಾಸನಕ್ಕಾಗಿ ನಡೆದ ಕದನಗಳಲ್ಲಿ ಪಾಲ್ಗೊಂಡು, ಅಧಿರಾಜೇಂದ್ರನನ್ನು ಕೊಂದು, ಆನಂತರ ತಾನೇ ಚೋಳರಾಜ್ಯದ ಅರಸನೂ ಅದನು (ಕ್ರಿ.ಶ. 1063), ಅಂದು ಚೋಳ ಹಾಗೂ ಪೂರ್ವ ಚಾಲುಕ್ಯ ರಾಜ್ಯಗಳು ಒಂದಾಗಿ ಸಮಾವೇಶಗೊಂಡವು. ಅಲ್ಲಿಯವರೆವಿಗೂ ಚಾಲುಕ್ಯ ಚೋಳರ ಕದನ ಬಹುಮಟ್ಟಿಗೆ ವೆಂಗಿ ಮಂಡಲದ ಆಕ್ರಮಣಕ್ಕಾಗಿಯೇ ನಡೆಯಿತು. ಆಂಧ್ರಪ್ರದೇಶದ ಉತ್ತರಭಾಗ ಕೆಲವು ಕಾಲ ಚಾಲುಕ್ಯರ ಅಧೀನದಲ್ಲಿದ್ದು ಆ ಮನೆತನ ಆಳಿದಾಗ ಅಲ್ಲಿ ಕಾಕತೀಯ ಮನೆತನ ವಿಜೃಂಭಿಸಿತು.
ಆದರೆ ಕರ್ನಾಟಕ ಹಾಗೂ ತಮಿಳುನಾಡಿನ ಅರಸರ ನಡುವಣ ಹೋರಾಟಗಳು ಹೊಯ್ಸಳರ ಕಾಲದಲ್ಲೂ ಮುಂದುವರೆದವು, ದಕ್ಷಿಣದಲ್ಲಿ ಆಗ ಪಾಂಡ್ಯರು ಪ್ರಬಲರಾಗಿ ಅವರಿಗೂ ಚೋಳರಿಗೂ ನಡೆದ ಕದನಗಳಲ್ಲಿ ಹೊಯ್ಸಳರು ಭಾಗಿಗಳಾಗಬೇಕಾಯಿತು. ಇಮ್ಮಡಿ ಬಲ್ಲಾಳನು ಚೋಳರ ರಾಜ್ಯ ಪ್ರತಿಷ್ಠಾಚಾರ್ಯನೆಂಬ ಬಿರುದನ್ನು ಧರಿಸಿದ್ದರೆ. ಸೋಮೆಶ್ವರನು ‘ಪಾಂಡ್ಯ ರಾಜ್ಯ ಸ್ಥಾಪನಾಚಾರ’ನೆಂದು ಬಿರುದಾಂಕಿತನಾಗಿರುವುದನ್ನು ನಾವು ಇವರ ಕನ್ನಡ ಹಾಗೂ ತಮಿಳು ಶಾಸನಗಳಲ್ಲಿ ಕಾಣುತ್ತೇವೆ.
ಈ ಸ್ಪರ್ಧೆ ಪ್ರತಿಸ್ಪರ್ಧೆಗಳು ಅಂತ್ಯಗೊಂಡಿದ್ದು ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯ ಉದಯಿಸಿದಾಗ; ಕ್ರಿ. ಶ. ಹದಿನಾಲ್ಕನೆಯ ಶತಮಾನದ ನಂತರ, ಸುಮಾರು ಎರಡು ಶತಮಾನಗಳ ಕಾಲ ಇಡೀ ದಕ್ಷಿಣ ಭಾರತ ಒಂದು ರಾಜಕೀಯ ಘಟಕವಾಗಿ ತಲೆ ಎತ್ತಿತು. ತಾಳೀಕೋಟೆಯ ಕದನವು (ಕ್ರಿಶ 1505) ಪುನಃ ದಕ್ಷಿಣಭಾರತದ ಇತಿಹಾಸವನ್ನು ಬದಲಿಸಿತು. ಮೊದಲು ಮೂರು ನಾಲ್ಕು ಭಾಗಗಳಾಗಿದ್ದ ದಕ್ಷಿಣ ಭಾರತ ಅಂದಿನಿಂದ ಹಲವಾರು ಅರಸರ, ಪಾಳೆಯಗಾರರ ಆಡಳಿತಗಳಿಗೆ ಸಿಲುಕಿತು. ಕರ್ನಾಟಕ ರಾಜ್ಯವಂತೂ ಹರಿದು ಹಂಚಿಹೋಯಿತೆಂದೇ ಹೇಳಬೇಕು. ಅಂದು ಛಿದ್ರವಾದ ಕರ್ನಾಟಕ 1956ರ ವರೆಗೂ ಒಂದುಗೂಡಲೇ ಇಲ್ಲ.
ಈ ಐತಿಹಾಸಿಕ ಘಟನೆ ಕನ್ನಡಿಗರಿಗೆ ಒಂದು ವಿಶಿಷ್ಟವಾದ ಸಂಪ್ರದಾಯವನ್ನು ಹಾಕಿಕೊಟ್ಟಿತು. ತಮಿಳುನಾಡಿನ ಆರಸರು, ಆರ್ಥಿಕ ಪ್ರಗತಿಗಾಗಿ ಹಾಗೂ ಇತರ ಕಾರಣಗಳಿಗಾಗಿ ಆಕ್ರಮಣ ಮನೋವೃತ್ತಿಯನ್ನು ಬೆಳೆಸಿಕೊಂಡರು. ಸಮುದ್ರದೊಡನೆ ಅವರಿಗಿದ್ದ ಸಾಮೀಪ್ಯ ಅತಿ ಪ್ರಾಚೀನ ಕಾಲದಿಂದಲೂ ಅವರ ನೌಕಾಯಾನದಲ್ಲಿ ಪರಿಣತಿಯನ್ನು ತಂದುಕೊಟ್ಟು, ಆಗ್ನೇಯದಲ್ಲಿದ್ದ ದ್ವೀಪಗಳಿಗೂ ವಲಸೆಹೋಗುವಂತೆ ಮಾಡಿತ್ತು. ಅಲ್ಲದೆ ನೆರೆಯ ರಾಜ್ಯಗಳ ಮೇಲೂ ದಂಡೆತ್ತಿ ಅವರ ರಾಜ್ಯಗಳನ್ನು ಆಕ್ರಮಿಸುವ ಮನೋಭಾವವನ್ನು ಅವರಲ್ಲಿ ಕಾಣುತ್ತೇವೆ. ಆದರೆ ಕರ್ನಾಟಕದ ಇತಿಹಾಸ, ಕನ್ನಡದ ಅರಸರು ಪರರ ರಾಜ್ಯಗಳನ್ನು ಆಕ್ರಮಿಸುವ, ವೃಥಾ ಅವರೊಡನೆ ಕದನಕ್ಕಿಳಿಯುವ ಪ್ರವೃತ್ತಿಯನ್ನು ಹೊಂದಿರಲಿಲ್ಲವೆಂಬುದನ್ನು ಸ್ಪಷ್ಟಗೊಳಿಸುತ್ತದೆ. ತಮಿಳುನಾಡಿನ ಅರಸರ ಶಾಸನಗಳಲ್ಲಿ ಅವರು ಕಾದಿದ ಕದನಗಳ ವಿವರಗಳುಬಹಳವಾಗಿಯೂ ಉತ್ತೇಕ್ಷಿತವಾಗಿಯೂ ದೊರೆಯುತ್ತವೆ. ಆದರೆ ಕನ್ನಡದ ಶಾಸನಗಳಲ್ಲಿ ಇವು ಬಹಳ ಕಡಮೆ. ಪಲ್ಲವರನ್ನು ಸೋಲಿಸಿದಾಗ ಚೋಳರನ್ನು ಸೋಲಿಸಿದ ಕರ್ನಾಟಕದ ಶಾಸನ ಕವಿಗಳಿಗೆ ಆ ಘಟನೆಗಳನ್ನು ವಿವರಿಸುವ ಸಂದರ್ಭಗಳೊದಗಿದ್ದರೂ ಅದರ ಪ್ರಯೋಜನವನ್ನು ಅವರು ಸಾಕಷ್ಟು ಪಡೆಯಲಿಲ್ಲ. ಕರ್ನಾಟಕದ ಅರಸನೊಬ್ಬ ರಣರಂಗದಲ್ಲಿ ಚೋಳರ ಆರಸನನ್ನು ಕೊಂದು, ಕದನ ಭೂಮಿಯಲ್ಲಿಯೇ ಇನ್ನೊಬ್ಬ ಚೋಳರಾಜ ಉತ್ತರಾಧಿಕಾರತ್ವವನ್ನು ಹೊಂದಿ ಯುದ್ಧವನ್ನು ಮುಂದುವರಿಸಿದುದು ಒಂದು ಅಪೂರ್ವ ಘಟನೆಯೇ ಸರಿ! ಆದರೂ ಇದರ ನೇರವಾದ ಪ್ರಸ್ತಾಪ ಕನ್ನಡ ಅರಸರ ಶಾಸನಗಳಲ್ಲಿಲ್ಲದಿರುವುದು ಆಶ್ಚರ್ಯಕರ, ಹೆಚ್ಚಿನ ವಿವರಗಳು ನಮಗೆ ಲಭ್ಯವಾಗಿರುವುದು ತಮಿಳು ಶಾಸನಗಳಿಂದಲೇ!
ಆದರೆ, ನಾಡಿನ ರಕ್ಷಣೆಗಾಗಿ, ಜನರ ಹಿತಕ್ಕಾಗಿ ಜೀವವನ್ನೇ ಬಲಿಗೊಟ್ಟ ವೀರರನ್ನು ಕೃತಜ್ಞತೆಯಿಂದ ಸರಿಸಿ ಅವರ ನೆನಪಿಗಾಗಿ ವೀರಗಲ್ಲುಗಳನ್ನು ನೆಡುವ ಒಂದು ವಿಶಿಷ್ಟ ಸಂಪ್ರದಾಯವನ್ನು ಬಹಳ ಮಟ್ಟಿಗೆ ಪಾಲಿಸಿದವರು. ಕನ್ನಡಿಗರು: ಕರ್ನಾಟಕದಲ್ಲಿ ಲಭ್ಯವಿರುವಷ್ಟು ವೀರಗಲ್ಲುಗಳು, ಅದರಂತೆಯೇ ಮಹಾಸತಿಕಲ್ಲುಗಳು ಭಾರತದ ಬೇರಾವ ಭಾಗದಲ್ಲೂ ದೊರೆತಿಲ್ಲವೆಂದೇ ಹೇಳಬೇಕು. ಇದರಲ್ಲಿ ಗ್ರಾಮದ ತುರು-ಕರುಗಳನ್ನು ರಕ್ಷಿಸಿದ, ಶತ್ರುಗಳಿಂದ ಪ್ರಜೆಗಳನ್ನು ಕಾಪಾಡಿದ, ಊರಿನ ಸ್ತ್ರೀಯ ಮಾನಸಂರಕ್ಷಣೆ ಮಾಡಿದ ವೀರರ ವರ್ಣನೆ “ಟಿತೇನ ಲಭ್ಯತೇ ಲಕ್ಷ್ಮೀ ಮೃಸೇನಾಪಿ ಸುರಾಂಗನಾ, ಕ್ಷಣ ವಿಧ್ವಂಸಿನೀ ಕಾಯೇ ಕಾ ಚಿಂತಾ ಮರಣೇ ರಣೇ” ಎಂಬ ಭಾವನೆಯಿಂದ ಆತ್ಮಾರ್ಪಣೆ ಮಾಡಿದ ತ್ಯಾಗಿಗಳ ಸ್ಮರಣೆ ಇದೆ.
ಮೊದಲೇ ಹೇಳಿದಂತೆ ಕರ್ನಾಟಕವು ಭಾರತದ ಸಕಲ ಧರ್ಮಗಳಿಗೂ ಆಶ್ರಯವನ್ನು ನೀಡಿದೆ. ತಮಿಳುನಾಡಿನಲ್ಲಿ ಶೈವರ ಪ್ರಾಬಲ್ಯ ಹೆಚ್ಚಾದಾಗ ವೈಷ್ಣವರು ಆ ದೇಶವನ್ನೇ ಬಿಟ್ಟುಹೋದರೆಂಬ ಸಾಂಪ್ರದಾಯಿಕ ಕತೆಗಳು ಪ್ರಚಾರದಲ್ಲಿವೆ. ಆದರೆ, ಕರ್ನಾಟಕದಿಂದ ಹೊರದೂಡಲ್ಪಟ್ಟ ಧರ್ಮ ಒಂದೂ ಇಲ್ಲ. “ಯಂ ಶೈವಾಃ ಸಮುಪಾಸತೆ ಶಿವ ಇತಿ” ಎಂಬ ಸುಪ್ರಸಿದ್ಧ ಧರ್ಮಭಾವವನ್ನು ಶಾಸನಸ್ಯವನ್ನಾಗಿಸಿದ ಒರಿದು ಕನ್ನಡಿಗರದು, ಶ್ರೀ ವೈಷ್ಣವರಿಗೂ ಜೈನರಿಗೂ ಭಿನ್ನಾಭಿಪ್ರಾಯವುಂಟಾಗಿ, ಸಮಾಜದ ಶಾಂತಿ ಕದಡಿದಾಗ ಬುಕ್ಕಿ ಮಹಾರಾಯನು ಅನುಸರಿಸಿದ ನೀತಿ ಇಂದಿಗೂ ಪ್ರಖ್ಯಾತವಾಗಿದೆ.
ಸಕಲ ಸೌಭಾಗ್ಯಗಳಿಗೂ ತಾಣವಾಗಿದ್ದ ಈ ಪ್ರದೇಶದ ಜನ ಕೊಡುಗೈ ದಾನಿಗಳಾಗಿದ್ದರು. ಕೊಟ್ಟು ಬಲ್ಲ ಇವರು ಎಲ್ಲವನ್ನೂ ಕೊಟ್ಟು ನಿರ್ಗತಿಕರಾಗುವಂತಹ ಪರಿಸ್ಥಿತಿಗಳೂ ಇಲ್ಲದಿಲ್ಲ. ಮಾನವನ ಒಳ್ಳೆಯ ಗುಣದಲ್ಲಿ ಮಾನವತ್ತದಲ್ಲಿ ಗಾಢವಾದ ನಂಬುಗೆಯನ್ನು ಪಡೆದಿದ್ದ ಇವರು ದಾನಗಳನ್ನು ಮಾಡಿದಾಗ, ಆ ದಾನವನ್ನು ಸ್ವೀಕರಿಸಿದಾತ ಅದನ್ನು ಹೇಗೆ ಉಪಯೋಗಿಸಬೇಕೆಂದು ಎಂದೂ ಕಟ್ಟುಪಾಡುಗಳನ್ನು ಸೂಚಿಸುವ ಗೋಜಿಗೆ ಹೋಗಲಿಲ್ಲ. ಇದರಿಂದ ಉಂಟಾದ ಪರಿಣಾಮಗಳಂತಹವೇ ಆದರೂ ಅವು ಮಾನವತ್ವದಲ್ಲಿ ನಮ್ಮ ಜನರಿಗಿದ್ದ ನಂಬಿಕೆಯನ್ನು ಸೂಚಿಸುತ್ತವೆ. ಕನ್ನಡಿಗನನ್ನು ಶಾಸನದ ಭಾಷೆಯಲ್ಲಿ ವರ್ಣಿಸಬಹುದಾದಲ್ಲಿ,
ಸಾಧುಂಗೆ ಹಾದು, ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ.
ಎನ್ನಬಹುದು. ಹೀಗೆ ಕರ್ನಾಟಕ ಸಂಸ್ಕೃತಿ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದು ಪ್ರಜ್ವಲಿಸಿದೆ.
ಮುಂದುವರೆಯುತ್ತದೆ..