ಡೆಂಗೀ ಜ್ವರವು ಡೆಂಗೀ ವೈರಸ್ಗಳಲ್ಲಿ ಒಂದಾದ ಸೊಳ್ಳೆಗಳ ಕಡಿತದಿಂದ ಹರಡುವ ಕಾಯಿಲೆಯಾಗಿದೆ. ರೋಗಲಕ್ಷಣಗಳು ಸಾಮಾನ್ಯ ಜ್ವರ ತರಹ ಇರುತ್ತವೆ ಆದರೆ ತೀವ್ರವಾದ ಡೆಂಗೀ ಮಾರಣಾಂತಿಕ ಸ್ಥಿತಿಗೆ ಉಲ್ಬಣಗೊಳ್ಳಬಹುದು. ಡೆಂಗೀ ಜ್ವರ ಬಂದರೆ ದೇಹ ಬಸವಳಿದು ಹೋಗುತ್ತದೆ. ಹೀಗಾಗಿ, ಅದರಿಂದ ಚೇತರಿಸಿಕೊಳ್ಳಲು ಬಹಳಷ್ಟು ಸಮಯವೂ ಬೇಕಾಗುತ್ತದೆ. ಡೆಂಗೀ ಜ್ವರದ ಸಮಯದಲ್ಲಿ ಸಿಕ್ಕಾಪಟ್ಟೆ ತಲೆನೋವು, ತೀವ್ರ ಜ್ವರ ಸೇರಿದಂತೆ ಹಲವು ಸಂಕಟಗಳು ಉಂಟಾಗುವುದರಿಂದ ಸೂಕ್ತ ಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೂ ಅಪಾಯ ಎದುರಾಗುತ್ತದೆ.
ಡೆಂಗೀ ಜ್ವರವನ್ನು ರಕ್ತ ಪರೀಕ್ಷೆಯಿಂದ ಗುರುತಿಸಲಾಗುತ್ತದೆ. ಡೆಂಗೀ ನ ಆರಂಭಿಕ ಲಕ್ಷಣಗಳು ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ರೋಗಲಕ್ಷಣಗಳು, ಸಾಮಾನ್ಯವಾಗಿ ಸೋಂಕಿನ ನಂತರ ನಾಲ್ಕರಿಂದ ಆರು ದಿನಗಳ ನಂತರ ಪ್ರಾರಂಭವಾಗುತ್ತದೆ ಮತ್ತು 10 ದಿನಗಳವರೆಗೆ ಇರುತ್ತದೆ. ಹಠಾತ್ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂದೆ ನೋವು, ತೀವ್ರ ಕೀಲು ಮತ್ತು ಸ್ನಾಯು ನೋವು, ಆಯಾಸ, ವಾಕರಿಕೆ, ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಡೆಂಗೀ ಜ್ವರದ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ನೀವು ಈಗಾಗಲೇ ಡೆಂಗೀ ಹೊಂದಿದ್ದರೆ ಮಾತ್ರ ಡೆಂಗೀ ಲಸಿಕೆ (ಡೆಂಗ್ವಾಕ್ಸಿಯ) ಅನ್ನು ಶಿಫಾರಸು ಮಾಡಲಾಗುತ್ತದೆ.
ಡೆಂಗೀ ಸಮಯದಲ್ಲಂತೂ ಆಹಾರದ ಬಗ್ಗೆ ಭಾರೀ ಕಾಳಜಿವಹಿಸಬೇಕು. ಏಕೆಂದರೆ, ಕೆಲ ಆಹಾರಗಳು ಡೆಂಗೀ ವೈರಸ್ ಗೆ ಹೊಂದುವುದಿಲ್ಲ. ಹೇಗಿದ್ದರೂ ಔಷಧ ಪಡೆಯುತ್ತಿದ್ದೇವೆ, ಯಾವುದಾದರೂ ಆಹಾರ ಸೇವಿಸಬಹುದು ಎನ್ನುವುದನ್ನು ಮಾಡಬಾರದು.
ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸಲೇಬಾರದು.ಅವುಗಳು ಯಾವುದೆಂದರೆ
• ಮಸಾಲೆ ಪದಾರ್ಥ
ಮಸಾಲೆಯುಕ್ತ ಯಾವುದೇ ರೀತಿಯ ಆಹಾರಗಳನ್ನು ಡೆಂಗೀ ಜ್ವರ ಇರುವ ಸಮಯದಲ್ಲಿ ಹಾಗೂ ಚೇತರಿಸಿಕೊಳ್ಳುವ ಸಮಯದಲ್ಲಿ ಸೇವಿಸಬಾರದು.ಈ ಸಮಯದಲ್ಲಿ, ಮಸಾಲೆ ಬೆರೆಸಿದ ಪಲಾವ್, ಬಿರಿಯಾನಿ ಸೇರಿದಂತೆ ಎಲ್ಲ ರೀತಿಯ ಆಹಾರಗಳಿಂದ ದೂರವಿರಬೇಕು.
ಕಾಫಿ
ಜ್ವರ ಬಂದಾಗ ಕಾಫಿ ಸೇವನೆ ಮಾಡುವುದರಿಂದ ಹಿತವೆನಿಸುವುದು ಸಹಜ. ಆದರೆ, ಡೆಂಗೀ ಇರುವಾಗ ಕಾಫಿಯಿಂದ ದೂರವಿರಬೇಕು. ಕಾಫಿ ಮಾತ್ರವಲ್ಲ, ಈ ಸಮಯದಲ್ಲಿ ಹೈಡ್ರೇಟಿಂಗ್ ಡ್ರಿಂಗ್ಸ್ ಮತ್ತು ಕೆಫೀನ್ ಒಳಗೊಂಡಿರುವ ಯಾವುದೇ ಪಾನೀಯಗಳ ಸೇವನೆ ಮಾಡಬಾರದು. ಸಾಫ್ಟ್ ಡ್ರಿಂಕ್ಸ್ ಬೇಡವೇ ಬೇಡ. ಇದರಿಂದ ಹೃದಯದ ಬಡಿತ ಹೆಚ್ಚುಗುತ್ತದೆ.ಸುಸ್ತು ಮತ್ತು ಮಾಂಸಖಂಡಗಳ ನೋವು ಕಂಡುಬರುತ್ತದೆ.
• ಮಾಂಸಾಹಾರ
ಸಹಜವಾಗಿ ಮಾಂಸಾಹಾರಗಳಲ್ಲಿ ಮಸಾಲೆ ಪದಾರ್ಥ ಹೆಚ್ಚಿರುತ್ತದೆ. ಅಲ್ಲದೆ, ಮಾಂಸಾಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಅಧಿಕ ಜಿಡ್ಡಿನಂಶ ಹೊಂದಿರುತ್ತವೆ. ಹೀಗಾಗಿ, ಮಾಂಸಾಹಾರ ಸೇವನೆಯಿಂದ ಡೆಂಗೀ ರೋಗಿಗಳು ದೂರವಿರಬೇಕು.
ಯಾವುದು ತಿನ್ನಬೇಕು,
• ಎಳನೀರು: ಇದರಲ್ಲಿ ಎಲೆಕ್ಟ್ರೋಲೈಟ್ಸ್ ಮತ್ತು ಇತರ ಅಗತ್ಯ ಪೋಷಕಾಂಶಗಳಿರುತ್ತವೆ. ದೇಹವನ್ನು ಡಿಹೈಡ್ರೇಟ್ ಆಗಲು ಬಿಡುವುದಿಲ್ಲ. ತಿಂದ ಆಹಾರ ಜೀರ್ಣವಾಗಲು ಆಗಾಗ ಬಿಸಿನೀರು ಕುಡಿಯಬೇಕು. ದ್ರವಾಹಾರ ಸೇವಿಸಬೇಕು. ಚೆನ್ನಾಗಿ ಬೇಯಿಸಿದ ಮೆತ್ತಗಿನ ಅನ್ನ, ಮಸಾಲೆ ಬೆರೆಸದ ಹೆಸರುಬೇಳೆಯ ಸಾರನ್ನು ಸೇವಿಸಬಹುದು.
• ಪಪ್ಪಾಯದ ಎಲೆಯ ರಸ: ಎಲ್ಲರೂ ತಿಳಿದಿರುವಂತೆ ಡೆಂಗೀ ರೋಗಿಗಳಿಗೆ ಪಪ್ಪಾಯದ ಎಲೆಯ ರಸದ ಸೇವನೆ ಉತ್ತಮ. ಇದರಲ್ಲಿ ಪಪೈನ್ ಮತ್ತು ಕೈಮೋಪಪೈನ್ ನಂತಹ ಎಂಜೈಮುಗಳಿರುತ್ತವೆ. ಇವು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಹೊಟ್ಟೆಯಲ್ಲಿ ಉಂಟಾಗುವ ನೋವು ಕಿರಿಕಿರಿಗಳನ್ನು ನಿವಾರಿಸುತ್ತವೆ. ಎಲ್ಲಕ್ಕಿಂತ ದೊಡ್ಡ ಲಾಭವೆಂದರೆ, ಇವು ರಕ್ತದಲ್ಲಿ ಪ್ಲೇಟ್ ಲೆಟ್ ಗಳು ಹೆಚ್ಚಾಗುತ್ತವೆ. ಕೇವಲ 30 ಎಂಎಲ್ ರಸದಿಂದ ಪ್ಲೇಟ್ ಲೆಟ್ಸ್ ಹೆಚ್ಚುತ್ತವೆ.
• ಕಿವಿ ಹಣ್ಣು:ಇದು ಸಹ ಡೆಂಗೀ ರೋಗಿಗಳಿಗೆ ಉತ್ತಮ. ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಇ ಮುಂತಾದ ಅಂಶಗಳಿಂದ ತುಂಬಿರುವ ಕಿವಿ ಹಣ್ಣಿನಲ್ಲಿ ವಿಶೇಷವಾಗಿರುವ ತಾಮ್ರದ (Copper) ಅಂಶವು ಕೆಂಪು ರಕ್ತಕಣಗಳನ್ನು ಸೃಷ್ಟಿಸುತ್ತದೆ. ರೋಗನಿರೋಧಕತೆ ಹೆಚ್ಚುತ್ತದೆ.
ಡೆಂಗೀ ಜ್ವರದ ರೋಗ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆಯ ವರದಿ ಪಡೆದುಕೊಂಡು ದೇಹದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಳಿರಕ್ತಕಣಗಳ ಮಟ್ಟ ಎಷ್ಟಿದೆ ಎಂಬುದನ್ನು ಮೊದಲು ತಿಳಿದುಕೊಂಡು ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಲವಾರು ಆಹಾರಗಳು ಮತ್ತು ವೈದ್ಯರು ನೀಡಿದ ಮಾತ್ರೆಗಳನ್ನು ಸೇವಿಸುವುದು ಉತ್ತಮವಾಗಿರುತ್ತದೆ.