ಕೆಲ ದಿನಗಳ ಹಿಂದಷ್ಟೇ ಕೇಂದ್ರ ಆದಾಯ ತೆರಿಗೆ ಇಲಾಖೆ 15 ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ನೋಟೀಸ್ ಜಾರಿ ಮಾಡಿದ ಈ ಘಟನೆ ನಡೆದಿತ್ತು.
ಇದೀಗ ಆದಾಯ ತೆರಿಗೆ ಇಲಾಖೆ ಒಂದು ಕೋಟಿಗೂ ಅಧಿಕ ಆದಾಯ ಗಳಿಸಿದ ಯುಟ್ಯೂಬರ್ ಒಬ್ಬರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಇದು ಸಾಮಾಜಿಕ ಜಾಲತಾಣದ ಯುಗವಾಗಿದ್ದು, ಇಂದು ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಮೀಸಲಾಗಿರದೆ, ಇದರಿಂದ ಹಣ ಮಾಡುವ ತಾಣಗಳಾಗಿ ಬದಲಾಗಿರೋದನ್ನು ನಾವು ಗಮನಿಸುತ್ತಿದ್ದೇವೆ.
ಬುದ್ಧಿವಂತಿಕೆ, ಪ್ರತಿಭೆಯ ಜನರನ್ನು ಸೆಳೆಯುವ ವಿಭಿನ್ನ ಕಂಟೆಂಟ್ ಸೃಷ್ಟಿಸುವ ಶಕ್ತಿ ನಿಮ್ಮಲ್ಲಿದ್ದರೆ, ನೀವು ಕೂಡ ಇಂಟರ್ನೆಟ್ನಲ್ಲಿ ಇಂದು ಕಡಿಮೆ ಎಂದರೂ ಲಕ್ಷದಲ್ಲಿ ಸಂಪಾದನೆ ಮಾಡಬಹುದಾದ ಅವಕಾಶ ಇದೆ.
ಅದೇ ರೀತಿ ಇಲ್ಲೊಂದು ಕಡೆ ಯೂಟ್ಯೂಬರ್ ಒಬ್ಬರು ಯೂಟ್ಯೂಬ್ ಮೂಲಕ ಒಳ್ಳೆಯ ಸಂಪಾದನೆ ಮಾಡಿದ್ದು, ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟದ ಕಾರಣ ಅವರು ಈಗ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಕಾಣಿಸಿಕೊಂಡ ವಿಷಯ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಯೂಟ್ಯೂಬರ್ ಆದ ತಸ್ಲೀಮ್ ಎಂಬಾತ ಹಲವು ವರ್ಷಗಳಿಂದ ಯೂಟ್ಯೂಬ್ ಚೆನೆಲೊಂದನ್ನು ನಡೆಸುತ್ತಿದ್ದು, ಆತ ಈ ಚಾನೆಲ್ನಿಂದಲೇ ಒಂದು ಕೋಟಿಗೂ ಅಧಿಕ ಆದಾಯ ಗಳಿಸಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈತನ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈತನ ಮನೆಯಲ್ಲಿ 24 ಲಕ್ಷ ರೂಪಾಯಿ ಹಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ವರದಿಯಾಗಿದೆ.
ಯೂಟ್ಯೂಬರ್ ಕಾನೂನುಬಾಹಿರ ವಿಧಾನಗಳ ಮೂಲಕ ಹಣ ಸಂಪಾದಿಸಿದ್ದಾನೆ ಎಂದು ಆರೋಪ ಕೇಳಿ ಬಂದಿದ್ದು, ಈ ಆರೋಪವನ್ನು ಆತನ ಕುಟುಂಬದವರು ನಿರಾಕರಿಸಿದ್ದಾರೆ. ಉತ್ತರಪ್ರದೇಶದ ಬರೇಲಿಯಲ್ಲಿ ವಾಸ ಮಾಡುವ ಈ ಯುಟ್ಯೂಬರ್ ಷೇರು ಮಾರುಕಟ್ಟೆ ಬಗ್ಗೆ ವೀಡಿಯೋಗಳನ್ನು ಮಾಡುತ್ತಿದ್ದ, ಇವುಗಳು ಸಾಕಷ್ಟು ವೈರಲ್ ಆಗುತ್ತಿದ್ದವು. ಅಲ್ಲದೇ ಈತ ತನ್ನ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಕಟ್ಟಿದ್ದಾನೆ ಎಂದು ಈತನ ಸಹೋದರ ಫಿರೋಜ್ ಹೇಳುತ್ತಿದ್ದಾರೆ. ತನ್ನ ಸಹೋದರ ಟ್ರೆಡಿಂಗ್ ಹಬ್ 3.0 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ. ಆತ ಈಗಾಗಲೇ ಯೂಟ್ಯೂಬ್ನಿಂದ ಬಂದ 1.2 ಕೋಟಿ ಆದಾಯಕ್ಕೆ ಸಂಬಂಧಿಸಿದಂತೆ 4 ಲಕ್ಷ ರೂಪಾಯಿ ತೆರಿಗೆ ಕಟ್ಟಿದ್ದಾನೆ. ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ, ಯೂಟ್ಯೂಬ್ನಿಂದ ಬರುತ್ತಿರುವ ಆದಾಯದಿಂದಲೇ ಅದನ್ನು ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.