ಸೂರತ್ ಮತ್ತು ಮುಂಬೈ ನಡುವೆ ಸಂಚರಿಸುವ ಐಕಾನಿಕ್ ಫ್ಲೈಯಿಂಗ್ ರಾನೀ ಎಕ್ಸ್ಪ್ರೆಸ್ ಅನ್ನು ಈಗ ನವೀಕರಿಸಲಾಗಿದ್ದು, ಜುಲೈ 16, ಭಾನುವಾರದಿಂದ 12921 ಮತ್ತು 12922 ಸಂಖ್ಯೆಯ ಫ್ಲೈಯಿಂಗ್ ರಾನಿ ಹೊಸ ರೂಪದಲ್ಲಿ ಓಡಾಟ ಪ್ರಾರಂಭಿಸಿದೆ.
ಕೇಂದ್ರ ರೈಲ್ವೇ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಅವರು ನವೀಕರಣಗೊಂಡ ಐಕಾನಿಕ್ ಫ್ಲೈಯಿಂಗ್ ರಾನೀ ಎಕ್ಸ್ಪ್ರೆಸ್ ರೈಲಿಗೆ ಚಾಲನೆಯನ್ನು ನೀಡಿ ಮುಂಬೈ ಸೆಂಟ್ರಲ್ನಿಂದ ಸೂರತ್ಗೆ 200 ಕಿ.ಮೀ.ಗೂ ಹೆಚ್ಚು ದೂರ ರೈಲಿನಲ್ಲಿ ಪ್ರಯಾಣಿಸಿದರು.
ಐಕಾನಿಕ್ ಫ್ಲೈಯಿಂಗ್ ರಾನೀ ರೈಲು ಇನ್ನು ಮುಂದೆ ಡಬಲ್ ಡೆಕ್ಕರ್ ಕೋಚ್ಗಳನ್ನು ಹೊಂದಿರುವುದಿಲ್ಲ. ಇದು LHB ಕೋಚ್ಗಳನ್ನು ಹೊಂದಿದ್ದು, ಅದರ ಹಿಂದಿನದ ಕೋಚ್ಗಿಂತಲೂ ವೇಗವಾಗಿ ಮತ್ತು ಹೆಚ್ಚು ಆರಾಮದಾಯಕವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಫ್ಲೈಯಿಂಗ್ ರಾನಿಯು ಒಟ್ಟು 21 ಕೋಚ್ಗಳನ್ನು ಹೊಂದಿದ್ದು ಹವಾನಿಯಂತ್ರಿತ ಚೇರ್ ಕಾರ್ಗಳನ್ನು ಹೊಂದಿರುತ್ತದೆ. ಇದಲ್ಲದೆ, ಸಾಮಾನ್ಯ ಕೋಚ್ಗೆ ಹೆಚ್ಚುವರಿಯಾಗಿ ಎರಡನೇ ದರ್ಜೆಯ ಆಸನ ಕೋಚ್ಗಳು, ಮಹಿಳೆಯರಿಗೆ ಮಾತ್ರ ಕೋಚ್ ಮತ್ತು ಮಹಿಳೆಯರ ಸೀಸನ್ ಟಿಕೆಟ್ ಹೋಲ್ಡರ್ಗಳ ಕೋಚ್ಗಳನ್ನು ಹೊಂದಿದೆ.
ಎರಡು ನಗರಗಳ ನಡುವಿನ ಅಂತರವು 265 ಕಿಲೋಮೀಟರ್ಗಳು ಮತ್ತು ಫ್ಲೈಯಿಂಗ್ ರಾನೀ ಈ ದೂರವನ್ನು ಕೇವಲ ನಾಲ್ಕು ಗಂಟೆ 40 ನಿಮಿಷಗಳಲ್ಲಿ ಹಾರುತ್ತದೆ, ಇದು ಗಂಟೆಗೆ ಸರಾಸರಿ 80 ಕಿಲೋಮೀಟರ್ಗಳು ಚಲಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ಪ್ರಯಾಣಿಸಬಹುದಾದ ಈ ರೈಲು ಕರಾವಳಿಯ ರಾಣಿ ಎಂದು ಹೆಸರುವಾಸಿಯಾಗಿದೆ.
ಈ ಐಕಾನಿಕ್ ರೈಲು ಮೊದಲ ಬಾರಿಗೆ 1906 ರಲ್ಲಿ ಪ್ರಾರಂಭವಾಯಿತು. ಇದು ಕಳೆದ 117 ವರ್ಷಗಳಿಂದ ಅಡೆತಡೆಗಳೊಂದಿಗೆ ಸಂಚಾರ ನಡೆಸುತ್ತಿದೆ. ಕೆಲವು ಕಾರಣಗಳಿಂದ ಇದನ್ನು 1914 ರಲ್ಲಿ ನಿಲ್ಲಿಸಲಾಯಿತು. ನಂತರ ಡಿಸೆಂಬರ್ನಲ್ಲಿ 1934 ರಲ್ಲಿ ಪುನರಾರಂಭವಾಯಿತು ಆದರೆ ಬಳಿಕ 1936 ರಲ್ಲಿ ಅದನ್ನು ಮತ್ತೆ ನಿಲ್ಲಿಸಲಾಯಿತು. ಭಾರತದ ಸ್ವಾತಂತ್ರ್ಯದ ನಂತರ, 1950 ರಲ್ಲಿ ಮತ್ತೆ ಸಂಚಾರ ಪ್ರಾರಂಭವಾಯಿತು. 73 ವರ್ಷಗಳಿಂದ, ಇದು ಎರಡು ನಗರಗಳಿಗೆ ಬೆಸೆಯುವ ಕೊಂಡಿಯಾಗಿ ಸಂಚಾರವನ್ನು ಮಾಡುತ್ತಿದೆ.