‘ಲಾ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡಿದ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಇದೀಗ ‘ಶಾನುಭೋಗರ ಮಗಳು’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕೂಡ್ಲು ರಾಮಕೃಷ್ಣ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿನ ರಾಗಿಣಿ ಲುಕ್ ಅನ್ನು ಚಿತ್ರತಂಡ ಮೊನ್ನೆ ಬಿಡುಗಡೆ ಮಾಡಿತ್ತು.
ರಾಗಿಣಿ ಮೂಲತಃ ನಟಿಯಲ್ಲ, ನೃತ್ಯಗಾರ್ತಿ ಮತ್ತು ಯೋಗಪಟು ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ನೃತ್ಯದ ವಿಡಿಯೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತವೆ. ಸಿನಿಮಾ ಅಂದಾಗ ಪಾತ್ರ ಚೆನ್ನಾಗಿದ್ದರೆ ಮಾತ್ರ ರಾಗಿಣಿ ಒಪ್ಪಿಕೊಳ್ಳುತ್ತಾರಂತೆ. ‘ನಾನು ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸುವುದಿಲ್ಲ. ಕೂಡ್ಲು ರಾಮಕೃಷ್ಣ ಅವರು ಬಂದು ನನಗೆ ಕಥೆ ಹೇಳಿದಾಗಲೇ ಇಂತಹ ಒಂದು ಪಾತ್ರವನ್ನು ಮಿಸ್ ಮಾಡಿಕೊಳ್ಳಬಾರದು ಎಂದು ಚಾಲೆಂಜಿಂಗ್ ಮತ್ತು ಡಿಫ್ರೆಂಟ್ ಆದ ಪಾತ್ರ ಅದು ಎಂಬ ಭಾವನೆ ಬಂದು ಈ ಪಾತ್ರಕ್ಕಾಗಿ ನಾನು ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡು ಅಭಿನಯಿಸುತ್ತಿದ್ದೇನೆ ಎಂದು ನಟಿ ರಾಗಿಣಿ ಹೇಳಿಕೊಂಡಿದ್ದಾರೆ.
ಈ ಸಿನಿಮಾದ ಪಾತ್ರವೇ ವಿಶೇಷವಾಗಿದೆ. ಆಗಿನ ಕಾಲದಲ್ಲಿ ಮಹಿಳೆಯರು ಎಂದರೆ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರುತ್ತಿದ್ದರು. ಅಂತಹದ್ರಲ್ಲಿ ಶಾನುಭೋಗರ ಮಗಳು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಾಳೆ. ಇದು ನನಗೆ ಈ ಪಾತ್ರ ಒಪ್ಪಿಕೊಳ್ಳಲು ಮುಖ್ಯ ಕಾರಣ. ಹಲವು ಸೀನ್ಗಳಲ್ಲಿ ಗ್ಲಿಸರಿನ್ ಇಲ್ಲದೇ ಅತ್ತು ನಟಿಸಿದ್ದೇನೆ. ‘ಶಾನುಭೋಗರ ಮಗಳು’ ನನ್ನೊಳಗೆ ಬೆರೆತುಬಿಟ್ಟಿದ್ದಾಳೆ. ಶ್ರೀರಂಗಪಟ್ಟಣ, ಮೇಲುಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಗಿಣಿಯವರು ಕಾಸ್ಟ್ಯೂಮ್, ಹೇರ್ ಸ್ಟೈಲ್, ಭಾಷೆ ಎಲ್ಲದಕ್ಕೂ ಒಂದಿಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಭಾಗ್ಯ ಕೆ ಮೂರ್ತಿ ಎಂಬ ಲೇಖಕರು ಬರೆದಿರುವ ಕಾದಂಬರಿಯನ್ನು ಆಧರಿಸಿ ಮಾಡುತ್ತಿರುವ ಸಿನಿಮಾವಿದು. ಶಮಿತಾ ಮಲ್ನಾಡ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಾನುಭೋಗರ ಮಗಳು ಪಾತ್ರವೇ ನಾನಾಗಿದ್ದೇನೆ. ಪ್ರತಿಯೊಂದು ವಿಷಯವನ್ನು ಕಲಿತುಕೊಂಡು ಈ ಸಿನಿಮಾ ಮಾಡಿದ್ದೇವೆ. ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಪಾತ್ರವದು ಎಂದಿದ್ದಾರೆ ನಟಿ ರಾಗಿಣಿ ಚಂದ್ರನ್. ಇಂತಹ ಕಾದಂಬರಿ ಆಧಾರಿತ ಸಿನಿಮಾ, ನಿಜವಾಗಲೂ ಇಂಟರೆಸ್ಟಿಂಗ್ ಆಗಿರುತ್ತದೆ.