ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದ ಬಿಟ್ ಕಾಯಿನ್ ಹಗರಣಕ್ಕೆ ಈಗ ಮರುಜೀವ ಬಂದಿದ್ದು, ಪ್ರಕರಣದ ಮರು ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ನೀಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ ನಡೆದಿದ್ದು, 2020ರಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 03ರಂದು ಈ ಪ್ರಕರಣವನ್ನು ಮರುತನಿಖೆಗೆ ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸಿಐಡಿ ಸಹ ಸರ್ಕಾರದ ಆದೇಶದಂತೆ ಕರ್ಭೀಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ. ಎಸ್ಐಟಿ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಸಿಐಡಿ ಎಸ್ಪಿ ಶರತ್ ಇದ್ದಾರೆ.
ಇದರ ಮೊದಲ ಹಂತವಾಗಿ ಬಿಟ್ ಕಾಯಿನ್ ಪ್ರಕರಣ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳೆದ ಜೂನ್ ತಿಂಗಳಿನಲ್ಲಿ ಪತ್ರ ಬರೆದಿದ್ದರು. ಬೆಂಗಳೂರು ಸಿಸಿಬಿ ತನಿಖೆ ನಡೆಸಿದ್ದ ಕೇಸಿನ ಮರುತನಿಖೆಗೆ ಆದೇಶ ಹೊರಬಿದ್ದಿದೆ.
ಏನಿದು ಪ್ರಕರಣ?
ಮೂರು ವರ್ಷಗಳ ಹಿಂದೆ ಡ್ರಗ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕಾಂತ್ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಆಗ ವಿಚಾರಣೆ ವೇಳೆ ಆತನ ಬಿಟ್ ಕಾಯಿನ್ ದಂಧೆ ಬಯಲಾಗಿತ್ತು. ಈ ಬಗ್ಗೆ ಕಾಟನ್ಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ ಸಿಸಿಬಿ, ಶ್ರೀಕಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಹ ಸಲ್ಲಿಸಿತ್ತು. ಇನ್ನೊಂದೆಡೆ ಇ ಪ್ರೊಕ್ಯುರ್ಮೆಂಟ್ ವೆಬ್ಸೈಟ್ ಹ್ಯಾಕ್ ಪ್ರಕರಣ ಸಂಬಂಧ ಶ್ರೀಕಿ ವಿರುದ್ಧ ಸಿಐಡಿ ಕೂಡ ಪ್ರತ್ಯೇಕ ತನಿಖೆ ನಡೆಸಿತ್ತು.
ಆದರೆ ಬಿಟ್ ಕಾಯಿನ್ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹ್ಯಾಕರ್ ಶ್ರೀಕಿಯನ್ನು ಬಳಸಿಕೊಂಡು ಆಡಳಿತ ಪಕ್ಷದವರು ದೊಡ್ಡ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಆಗಿನ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದರು. ಅಲ್ಲದೆ ತಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವುದಾಗಿ ಸಹ ಕಾಂಗ್ರೆಸ್ ಪಕ್ಷ ಹೇಳಿತ್ತು.
- ಶ್ರೀಕಿ ಎರಡು ಬಾರಿ ಬಿಟ್ಫಿನೆಕ್ಸ್ ಎಂಬ ಬಿಟ್ಕಾಯಿನ್ ಎಕ್ಸ್ಚೆಂಜ್ ಅನ್ನು ಹ್ಯಾಕ್ ಮಾಡಿದ್ದ. 2015ರಲ್ಲಿ ಸಣ್ಣ ಪ್ರಮಾಣದಲ್ಲಿ ಬಿಟ್ ಕಾಯಿನ್ ದೋಚಿದ್ದ ಶ್ರೀಕಿ, 2016ರಲ್ಲಿ 1,20,000 ಬಿಟ್ ಕಾಯಿನ್ಗಳನ್ನು ದೋಚಿದ್ದ ಎನ್ನಲಾಗಿದೆ. ಈ ಬಿಟ್ ಕಾಯಿನ್ಗಳ ಸದ್ಯದ ಮೌಲ್ಯ 7 ಬಿಲಿಯನ್ ಡಾಲರ್ ಇದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 4,900 ಕೋಟಿ ರೂ. ಮೌಲ್ಯ ಹೊಂದಿದೆ.
- 2017ರಲ್ಲಿ ಬಿಟ್ ಕ್ಲಬ್ ನೆಟ್ವರ್ಕ್ ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕಿ ಅದರಿಂದ 100 ಬಿಟ್ ಕಾಯಿನ್ಗಳನ್ನು ದೋಚಿದ್ದ.
- 2020 ನವೆಂಬರ್ 17ರಲ್ಲಿ ಬೆಂಗಳೂರಿನ ಕೆಜಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಜಯನಗರ ನಿವಾಸಿ ಶ್ರೀಕಿಯ ಬಂಧನ. ವಿಚಾರಣೆಯಲ್ಲಿ ಶ್ರೀಕಿಯ ಸೈಬರ್ ಅಪರಾಧ ಹಾಗೂ ಬಿಟ್ ಕಾಯಿನ್ ಅಕ್ರಮ ಪತ್ತೆ.
- 2020 ಡಿಸೆಂಬರ್ 1ರಲ್ಲಿ ಬಿಟ್ ಕಾಯಿನ್ ಅಕ್ರಮದ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿರುವಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶ್ರೀಕಿಯ ಪ್ರಕರಣದ ಮಾಹಿತಿ ಕೇಳಿ ಪತ್ರ ಬರೆದಿದ್ದರು.
- 2020ರ ಡಿಸೆಂಬರ್ 1ರಲ್ಲಿ ಸಿಸಿಬಿ ಅಧಿಕಾರಿಗಳಿಗೆ ಇಡಿ ಉಪ ನಿರ್ದೇಶಕ ಎ. ಸಾದಿಕ್ ಮೊಹಮ್ಮದ್ ನೈನಾರ್ ಪತ್ರ ಬರೆದು, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿಯನ್ನು ಬಂಧಿಸಿ, ಆತನ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಎಫ್ಐಆರ್ ಪ್ರತಿ ಹಾಗೂ ಆರೋಪಗಳ ಪಟ್ಟಿ ಸಮೇತ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದರು.
- 2021 ಜನವರಿ 14ರಲ್ಲಿ ಹ್ಯಾಕರ್ ಶ್ರೀಕಿಯಿಂದ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.
- 2021 ಫೆಬ್ರವರಿ 22ರಲ್ಲಿ ಸಿಸಿಬಿ ಪೊಲೀಸರಿಂದ ಶ್ರೀಕಿಯ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 2021ರ ಫೆಬ್ರವರಿ 22ರಂದು 757 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ. ಚಾರ್ಜ್ಶೀಟ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಸಂಪಾದನೆ ಬಗ್ಗೆ ವಿವರವಾದ ಮಾಹಿತಿ ಉಲ್ಲೇಖ.
- 2021 ಫೆಬ್ರವರಿ 22ರಲ್ಲಿ ಅಮೆರಿಕದ ಹಣ ವಿನಿಮಯ ಏಜೆನ್ಸಿ ‘ಬಿಟಿಸಿ ಇ ಡಾಟ್ ಕಾಮ್’ ಜಾಲತಾಣ ಹ್ಯಾಕ್ ಮಾಡಿದ್ದ ಆರೋಪಿ, ಅದರಿಂದ 3,000 ಬಿಟಿಸಿ (₹1,370 ಕೋಟಿ) ಗಳಿಸಿದ್ದ. ಅದಾದ ಬಳಿಕ ‘ಬಿಟ್ ಫಿನಿಕ್ಸ್’ ಜಾಲತಾಣ ಹ್ಯಾಕ್ ಮಾಡಿ ಸರ್ವರ್ ತನ್ನದಾಗಿಸಿಕೊಂಡಿದ್ದ. ಇದಕ್ಕೆ ಇಬ್ಬರು ಇಸ್ರೇಲ್ ಹ್ಯಾಕರ್ಸ್ಗಳ ಸಹಾಯ ಪಡೆದಿದ್ದ. ಇದರಿಂದ 2,000 ಬಿಟಿಸಿ (₹ 913.33 ಕೋಟಿ) ಕಾಯಿನ್ ಸಂಪಾದಿಸಿದ್ದ’ ಎಂಬ ಮಾಹಿತಿ ಸಿಸಿಬಿ ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿದೆ.