ಈ ಕಾವ್ಯ ಸಂಪುಟದ ಲೇಖನದ ಸರಣಿಯಲ್ಲಿ ದ.ರಾ. ಬೇಂದ್ರೆಯವರ ಸಾಂಗತ್ಯದ ಕವನಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಲಿದ್ದೆವೆ.
ನಲ್ಲ ನಲ್ಲೆಯರ ಲಲ್ಲೆ
ನಲ್ಲ ನಲ್ಲೆಯರ ಪ್ರೇಮ ಸಂಭಾಷಣೆಯನ್ನು ಈ ಕವಿತೆಯಲ್ಲಿ ಅತ್ಯಂತ ರಸಮಯವಾಗಿ ಕವಿಯು ಕೆಲವು ಸಾಲುಗಳಲ್ಲಿ ತಿಳಿಸಿದ್ದಾರೆ. ಪರಸ್ಪರರು ತಮ್ಮಲ್ಲಿಯ ಚೆಲುವನ್ನು ಕಂಡು ಮನದುಂಬಿ ಹೊಗಳಿಕೊಂಡು ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಒಮ್ಮೊಮ್ಮೆ ಮಾತು ಕೆಲವೊಮ್ಮೆ ಮೌನ ಇನ್ನೊಮ್ಮೆ ಕೇವಲ ಅಭಿನಯ ಹೀಗಿರುವಾಗ ಕೆಲವು ಸಲ ಆಡುವ ಮಾತುಗಳೇ ಬದುಕಾಗಿಬಿಡುತ್ತವೆ, ಸಂತೋಷದ. ಕಾರಂಜಿಯಾಗುತ್ತದೆ. ಪರಸ್ಪರರು ಹೀಗೆ ಮಾತನಾಡಿಕೊಳ್ಳುತ್ತಾರೆ.
ನಲ್ಲ : ನಲ್ಲೆ ! ನಿನ್ನ ಲಲ್ಲೆವಾತು
ಮುಗುಳುನಗೆಯಲಲ್ಲೆ ಹೂತು
ಸೋತು, ಓತು, ಬಂತು, ಹೋತು
ನಲ್ಲೆ, ನಿನ್ನ ಬಲ್ಲೆವಾತು’.
ನಲ್ಲೆ : ‘ನಲ್ಲ ! ನಿನ್ನ ಲಲ್ಲೆವಾತು
ಮೊಸಕುಡಿಯಲಲ್ಲೆ ಹೂತು
ಕುಣಿದು, ಮಣಿದು, ಬಂತು
ಹೋತು ನಲ್ಲ, ನಿನ್ನ ಲಲ್ಲೆವಾತು
ಪ್ರೀಯೆ ನಿನ್ನ ಪ್ರೀತಿಯ ಮಾತು ನಿನ್ನ ನಗುವಿನಲ್ಲಿಯೇ ಮುಳುಗಿ ಹೋಗಿದೆ. ನೀನು ಮಾತನಾಡಿದರೂ ನನಗೆ ಆ ಮಾತಿಗಿಂತ ನಿನ್ನ ನಗುವೆ ನನ್ನನ್ನು ಸೆಳೆದು ಅದಕ್ಕೆ ನಾನು ಸೋತು ಹೋಗಿದ್ದೇನೆ ಎಂದು ನಲ್ಲ ಹೇಳುತ್ತಾನೆ. ನಲ್ಲೆಯೂ ಕೂಡ ನಿನ್ನ ಮಾತು ಕುಡಿ ಮೀಸೆಯಲ್ಲಿಯೇ ಕಳೆದು ಹೋಗಿದೆ. ನಿನ್ನ ಮಾತಿಗಿಂತ ನಿನ್ನ ಕುಡಿ ಮೀಸೆ ನನ್ನನ್ನು ಆಕರ್ಷಿಸುತ್ತಿದೆ, ಅದಕ್ಕೆ ನನ್ನ ಮನ ಕುಣಿದು ಸಂತೋಷಪಡುತ್ತಿದೆ, ನಿನಗೆ ಪರವಶವಾಗಿದೆ ಎನ್ನುತ್ತಾಳೆ, ನಿನ್ನ ಕಣ್ಣ ಬೆಳಕಿನಲ್ಲಿ ಸವಿ ನುಡಿಯಿದೆ ಎಂದು ನಲ್ಲ ಹೇಳಿದರೆ, ನಿನ್ನ ಹುಬ್ಬು ಬಿಲ್ಲಿನಲ್ಲಿಯೇ ಎಲ್ಲ ಮಾತನ್ನು ಆಡುವೆ ಎಂದು ನಲ್ಲೆ ಹೇಳುತ್ತಾಳೆ. ನಲ್ಲ ನಲ್ಲೆಯರ ಮಾತಿನ ಮಹತ್ತು ಮುಂದುವರೆದು ಸಾಗಿದೆ:
ನಲ್ಲ : ‘ನಲ್ಲೆ ! ನಿನ್ನ ಮಾತಿನಲ್ಲಿ
ಹುಟ್ಟಿ ಬಂತು ಹುಟ್ಟು-ಲಲ್ಲೆ;
ಹೂಂಗುಟ್ಟಿ ಹುದುಗಬಲ್ಲೆ,
ಒಲ್ಲೆಯೆಂದು ಒಲಿಸಬಲ್ಲೆ.
ನಲ್ಲೆ : ‘ ನಲ್ಲ ! ನಿನ್ನ ಮಾತಿನಲ್ಲಿ
ಎದೆ ಮೃದಂಗದೊಂದೆ ಸೊಲ್ಲೆ
ಹುಚ್ಚು ಹಿಡಿಸಿ ಬಿಡಿಸಬಲ್ಲೆ
ನಿನ್ನ ಮಾತು ನನಗೆ ಹೊಸ ಹುಟ್ಟನ್ನು ನೀಡುತ್ತದೆ. ಜನ್ಮ ಕೊಟ್ಟವಳು ತಾಯಿಯಾದರೆ ಮರುಜನ್ಮ ಕೊಡುವವಳು ಹೆಂಡತಿ, ಅವಳೇ ತಾನೇ ಲಲ್ಲೆ. ಆದ್ದರಿಂದ ನಿನ್ನ ಮಾತಿನಲ್ಲಿ ಹುಟ್ಟಿ ಬಂತು ಹುಟ್ಟು ಎಂದು ನಲ್ಲ ಧನ್ಯತೆಯ ಭಾವ ತಾಳಿದರೆ, ನಲ್ಲೆಯೂ ಕೂಡ ನಿನ್ನ ಮಾತಿನಿಂದಲೇ ನನ್ನ ಹೃದಯ ಮೃದಂಗವನ್ನು ನುಡಿಸಿ ಹುಚ್ಚು ಹಿಡಿಸಿ ಬಿಡುವೆ. ಅಂತೆಯೇ ಹಾಗೇ ಹಿಡಿದ ಹುಚ್ಚನ್ನು ಬಿಡಿಸುವ ಸಾಮರ್ಥ್ಯವು ನಿನಗಿದೆ. ನಿನ್ನ ಮಾತಿಗಿದೆ ಎನ್ನುತ್ತಾಳೆ. ಹೀಗೆ ಪರಸ್ಪರರ ಮಾತು ಸಾಗುತ್ತದೆ. ನೀನು ಮಲೆನಾಡಿನ ಮೊಲ್ಲೆಯಾಗಿ ಸುಗಂಧವನ್ನು ಬೀರುತ್ತಿದ್ದರೆ ಅದರ ಸವಿ ಧ್ಯಾನದಲ್ಲಿ ಮನಸ್ಸು ಏಕತಾನಮಾನವಾಗಿದೆ ಎಂದು ನಲ್ಲ ಹೇಳಿದರೆ, ನಿನ್ನ ಉಸಿರಿನಲ್ಲಿ ಗಾನವಿದೆ ಗಮಕವಿದೆ ಎನ್ನುತ್ತಾಳೆ ನಲ್ಲೆ. ಹೀಗೆ ಬಾನು ಬೆಳಕು ಹೂಡಿ ಕಡಲಿನಲ್ಲಿ ಮೂಡಿ ಚೆಲುವು ಇಮ್ಮಡಿಯಾಗಿರುವಂತೆ ನಲ್ಲ ನಲ್ಲೆಯರು ಕೂಡಿದಾಗ ಬರುವ ಹಿಗ್ಗಿಗೆ ಮೇರೆ ಇಲ್ಲವೆಂದು ಕವಿ ಹೇಳುತ್ತಾರೆ. ನಲ್ಲ ನಲ್ಲೆಯರ ನಿಷ್ಕಲ್ಮಷ ಪ್ರೀತಿ ಮಧುರವಾದ ಸಂಭಾಷಣೆಯೊಂದಿಗೆ ಸಾಗಿದೆ. ಪರಸ್ಪರರು ಒಬ್ಬರನ್ನೊಬ್ಬರು ಹಾಡಿ ಹೊಗಳಿ ಇಷ್ಟ ಪಡುವುದೇ ಈ ಕವಿತೆಯ ವಸ್ತು ವಿಷಯವಾಗಿದೆ