ಸಾಮಾನ್ಯವಾಗಿ ನಾವೆಲ್ಲಾ ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ಒಂದು ಟ್ರಕ್ ಅನ್ನು ನೋಡಿದರೆ, ಅದರ ಹಿಂದೆ ದೊಡ್ಡ ಅಕ್ಷರಗಳಲ್ಲಿ ‘Horn OK Please’ ಅಂತೆಲ್ಲಾ ಬರೆದಿರುವುದನ್ನು ಗಮನಿಸಬಹುದು. ಈ ದೊಡ್ಡ ವಾಕ್ಯವು ಬಹುತೇಕ ಎಲ್ಲಾ ಟ್ರಕ್ ಗಳ ಹಿಂಭಾಗದಲ್ಲಿ ಇರುವುದನ್ನು ನಾವು ನೋಡಿರುತ್ತೇವೆ. ದೊಡ್ಡ ದೊಡ್ಡ ಟ್ರಕ್ ತಯಾರಕ ಕಂಪನಿಗಳು ಸಹ ಇದನ್ನು ಬರೆದಿರುತ್ತದೆ.
ಈ ವಾಕ್ಯವನ್ನು ಏಕೆ ಟ್ರಕ್ ನ ಹಿಂಭಾಗದಲ್ಲಿ ಬರೆದಿರುತ್ತಾರೆ ಅಂತ ಅನೇಕರ ತಲೆಯಲ್ಲಿ ಪ್ರಶ್ನೆಯೊಂದು ಮೂಡಬಹುದು. ಈ ಪದಗುಚ್ಛದ ಮೂಲದ ಬಗ್ಗೆ ದೃಢವಾಗಿ ಯಾವುದೇ ಮಾಹಿತಿ ಇಲ್ಲವಾದರೂ, ಕಳೆದ ಕೆಲವು ವರ್ಷಗಳಲ್ಲಿ ಬೆಳಕಿಗೆ ಬಂದ ಹಲವಾರು ಸಿದ್ಧಾಂತಗಳಿವೆ. ಇದೊಂದು ಕುತೂಹಲ ಮೂಡಿಸುವ ವಾಕ್ಯವಾಗಿದ್ದು, ಇದಕ್ಕೆ ನಿಖರವಾದ ಕಾರಣ ಭಾರತದಲ್ಲಿ ಯಾರಿಗೂ ತಿಳಿದಿಲ್ಲ.
ಈ ಪದಗುಚ್ಛದ ಹಿಂದಿರುವ ಕೆಲವು ಸಿದ್ಧಾಂತಗಳನ್ನು ನೋಡೋಣ ಬನ್ನಿ. ವಾಹನವನ್ನು ಓವರ್ಟೆಕ್ ಮಾಡಲು ಸುರಕ್ಷತಾ ಕ್ರಮವಾಗಿರಬಹುದು. ಈ ಹಿಂದೆ ಭಾರತದ ಹೆಚ್ಚಿನ ಹೆದ್ದಾರಿಗಳು ಏಕ ಪಥಗಳನ್ನು ಹೊಂದಿದ್ದವು. ಹಾಗಿದ್ದಾಗ, ಒಂದು ಟ್ರಕ್ ಅನ್ನು ಬೇರೆ ವಾಹನಗಳು ಓವರ್ಟೆಕ್ ಮಾಡಲು ಬಯಸುವ ಚಾಲಕ ಹಾರ್ನ್ ಮಾಡಿದಾಗ, ಟ್ರಕ್ ಚಾಲಕ ಮುಂಬರುವ ದಟ್ಟಣೆಯನ್ನು ಪರಿಶೀಲಿಸುತ್ತಾನೆ ಮತ್ತು ಅದರ ಪ್ರಕಾರವಾಗಿ ಹಿಂದಿರುವ ವಾಹನಕ್ಕೆ ಮುಂದಕ್ಕೆ ಹೋಗಲು ರಸ್ತೆಯ ಮೇಲೆ ಸ್ಥಳಾವಕಾಶ ಮಾಡಿ ಕೊಡುತ್ತಾರೆ.
‘OK’ ಎಂಬ ಚಿಕ್ಕ ಪದದ ಮೇಲೆ ಒಂದು ಬಲ್ಬ್ ಇದ್ದು, ರಸ್ತೆ ಸ್ಪಷ್ಟವಾಗಿದ್ದರೆ, ಟ್ರಕ್ ಚಾಲಕ ಓವರ್ಟೆಕ್ ಮಾಡಲು ಹಿಂದಿನ ಚಾಲಕನಿಗೆ ಸಂಕೇತವಾಗಿ ಆ ಬಲ್ಬ್ ಅನ್ನು ಬೆಳಗಿಸುತ್ತಿದ್ದನು. ಭಾರತವು ಈಗ ಸಾಕಷ್ಟು ಅಭಿವೃದ್ಧಿಯಾಗಿದೆ, ಹೆದ್ದಾರಿಗಳು ಬಹು ಪಥಗಳನ್ನು ಹೊಂದಿವೆ, ಆದರೆ ಈ ‘ಹಾರ್ನ್ ಓಕೆ ಪ್ಲೀಸ್’ ಎಂಬ ವ್ಯಾಕ್ಯವನ್ನು ಹಿಂಭಾಗದಲ್ಲಿ ಬರೆಸುವುದು ಒಂದು ಸಂಪ್ರದಾಯವಾಗಿ ಮಾರ್ಪಟ್ಟಿದೆ.
‘OK’ ಎಂದರೆ ‘ಆನ್ ಕೆರೋಸಿನ್’ ಎಂದರ್ಥವಂತೆ: ‘ಓಕೆ’ ಎಂದರೆ ‘On Kerosene’ ಎಂದರ್ಥ. ಎಂದರೆ ಟ್ರಕ್ ಸೀಮೆಎಣ್ಣೆ ಮೇಲೆ ನಡೀತಾ ಇದೆ ಅಂತಾ ಅರ್ಥ ಬರುತ್ತದೆಯೇ? ಎರಡನೇ ಮಹಾಯುದ್ಧದ ಸಮಯದಲ್ಲಿ, ಟ್ರಕ್ ಗಳನ್ನು ಸೀಮೆಎಣ್ಣೆಯನ್ನು ಸಾಗಿಸಲು ಬಳಸಲಾಗುತ್ತಿತ್ತು ಮತ್ತು ಟ್ರಕ್ ನ ಹಿಂದಿನ ವಾಹನಗಳು ಸುಡುವ ದ್ರವವನ್ನು ಹೊಂದಿವೆ ಎಂದು ಎಚ್ಚರಿಸಲು ‘ಓಕೆ’ ಎಂಬ ಪದವು ‘ಆನ್ ಕೆರೋಸಿನ್’ ಅನ್ನು ಸೂಚಿಸುತ್ತದೆ. ಯಾವುದೇ ಸಣ್ಣ ಅಪಘಾತವು ಟ್ರಕ್ ಸ್ಫೋಟಗೊಳ್ಳಲು ಕಾರಣವಾಗಬಹುದು ಎಂದು ಅದು ಚಾಲಕರಿಗೆ ಎಚ್ಚರಿಕೆ ನೀಡುವಂತಿತ್ತು.
‘OK’ ಎನ್ನುವುದು ಈ ‘Horn and Pkease’ ನಿಂದ ಪ್ರತ್ಯೇಕವಾಗಿದೆ: ಈ ‘OK’ ಅಂತ ದಪ್ಪ ಅಕ್ಷರಗಳಲ್ಲಿ ಬರೆದಿರುವುದು ಸುರಕ್ಷಿತ ದೂರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಡ್ರೈವರ್ ಈ ಪದವನ್ನು ಓದಲು ಸಾಧ್ಯವಾದರೆ ಅವರು ಸುರಕ್ಷಿತವಾದ ಬ್ರೇಕಿಂಗ್ ದೂರದಲ್ಲಿದ್ದಾರೆ ಎಂದರ್ಥ.
ಈ ‘OK’ ಎಂಬುದು ಮೂಲತಃ ‘OTK’ ಆಗಿತ್ತಂತೆ: ಈ ‘ಓಕೆ’ ಅನ್ನು ಮೂಲತಃ ಓಟಿಕೆ ಎಂದು ಕರೆಯಲಾಗುತ್ತಿತ್ತು, ಆರಂಭದಲ್ಲಿ ಈ ಪದವು ‘OTK’ ಆಗಿತ್ತು ಮತ್ತು ಇದು ‘OK’ ಆಗಿರಲಿಲ್ಲ ಎಂದು ಹೇಳಲಾಗುತ್ತದೆ. OTK ಎಂದರೆ ಓವರ್ಟೇಕ್ ಎಂದರ್ಥ ಮತ್ತು ಹಿಂದಿನಿಂದ ಬರುವ ಚಾಲಕ ಓವರ್ಟೇಕ್ ಮಾಡುವ ಮೊದಲು ಹಾರ್ನ್ ಹೊಡೆಯುವಂತೆ ಹಾರ್ನ್ ನ ಚಿತ್ರವನ್ನು ಸಹ ಬಿಡಿಸಲಾಗಿರುತ್ತದೆ.
ಈ ‘OTK’ ಪದದಲ್ಲಿರುವ ‘T’ ಅಕ್ಷರವು ಟ್ರಕ್ ನ ಫಲಕದಂತೆಯೇ ಆಕಾರದಲ್ಲಿರುವುದರಿಂದ ಚಾಲಕನನ್ನು ಗೊಂದಲಗೊಳಿಸುತ್ತದೆ ಎಂದು ನಂತರದಲ್ಲಿ ಈ ಪದವನ್ನು ಓಟಿಕೆ ಯಿಂದ ಓಕೆ ಗೆ ಬದಲಾಯಿಸಲಾಯಿತು ಎನ್ನಲಾಗುತ್ತದೆ.
ಟ್ರಕ್ ಗಳ ಹಿಂಭಾಗದಲ್ಲಿ ಈ ಪದಗಳನ್ನು ಬರೆಯುವುದರ ಹಿಂದಿನ ನಿಜವಾದ ಕಾರಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಪದಗುಚ್ಛವನ್ನು ಮಹಾರಾಷ್ಟ್ರ ಸಾರಿಗೆ ಇಲಾಖೆ ನಿಷೇಧಿಸಿತು, ಏಕೆಂದರೆ ಈ ಕ್ರಮ ರಾಜ್ಯದಲ್ಲಿ ಹಾರ್ನ್ ಮಾಡುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ ಎಂದು ಅದು ಭಾವಿಸಿದೆ.