ಬೊಜ್ಜು, ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಬೊಜ್ಜು ಬಂದರೆ ಡಯಾಬಿಟಿಸ್, ಬಿಪಿ ಮೊದಲಾದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಬೊಜ್ಜಿನಿಂದ ಕೂದಲು ಸಹ ಉದುರುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ?
ಅಧಿಕ ತೂಕ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ವರ್ಲ್ಡ್ ಹಾರ್ಟ್ ಫೆಡರೇಶನ್ ವರದಿಗಳ ಪ್ರಕಾರ ಪ್ರಪಂಚದಾದ್ಯಂತ 2.3 ಶತಕೋಟಿ ಮಕ್ಕಳು ಮತ್ತು ವಯಸ್ಕರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆಂದು ತಿಳಿದುಬಂದಿದೆ. ಚಿಕಿತ್ಸೆ ನೀಡದೆ ಬಿಟ್ಟರೆ ಅದು ಭೀಕರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗೆಯೇ ಬೊಜ್ಜು ,ಕೂದಲು ಉದುರುವಿಕೆಗೂ ಕಾರಣವಾಗುತ್ತೆ ಅನ್ನೋದು ನಿಜ. ಬೊಜ್ಜು ಮತ್ತು ಕೂದಲು ಉದುರುವಿಕೆಗೂ ಇರುವ ಸಂಬಂಧ ಏನು ಅಂತ ನೋಡೋಣ.
ಬೊಜ್ಜು (Obesity) ಮತ್ತು ಅಧಿಕ ತೂಕ ಹೊಂದಿರುವ ಮಹಿಳೆಯರು ಕೂದಲು ಉದುರುವಿಕೆ (Hair loss)ಯಂತಹ ಕೂದಲಿನ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ದೆಹಲಿಯ ದ್ವಾರಕಾದ ಸ್ಕಿನ್ ಡೆಕೋರ್ನ ಮುಖ್ಯ ಚರ್ಮರೋಗ ತಜ್ಞರು ಮತ್ತು ನಿರ್ದೇಶಕಿ ಡಾ.ಮೋನಿಕಾ ಚಾಹರ್ ತಿಳಿಸಿದ್ದಾರೆ.
ಬೊಜ್ಜು ಹಲವಾರು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಸ್ಥೂಲಕಾಯದ ಜನರು ಹೃದ್ರೋಗ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಬೊಜ್ಜು ಬಂದ ಕೂಡಲೇ ಅವರಿಗೆ ಯಾವುದರಲ್ಲಿ ಆಸಕ್ತಿ ಇರದೇ ಅವರು ಕ್ರಿಯಾಶೀಲರಾಗಿರಲು ಸಾಧ್ಯವಿಲ್ಲ.
ಟೋಕಿಯೊ ವೈದ್ಯಕೀಯ ಅಧ್ಯಯನದ ಆವಿಷ್ಕಾರಗಳ ಪ್ರಕಾರ, ಬೊಜ್ಜು ಕೂದಲು ನಷ್ಟಕ್ಕೆ ಕಾರಣವಾಗಬಹುದು, ಇದು ಕೂದಲು ಕೋಶಕ ಪುನರುತ್ಪಾದನೆಯನ್ನು ತಡೆಯುತ್ತದೆ. ಅಲ್ಲದೆ ಕೊಬ್ಬಿನಿಂದ ಹಾರ್ಮೋನ್ ಅಸಮತೋಲನ, ಹೇರ್ ಲಾಸ್ ಉಂಟಾಗುತ್ತದೆ.
ಇದರ ಪರಿಣಾಮವಾಗಿ ಡೈಹೈಡ್ರೊಟೆಸ್ಟೋಸ್ಟೆರಾನ್ (DHT) ನಂತಹ ಆಂಡ್ರೋಜೆನ್ಗಳ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಇದರಿಂದ ಕೂದಲು ತೆಳುವಾಗುವುದು ಮತ್ತು ಅಂತಿಮವಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಸ್ಥೂಲಕಾಯ ಅಥವಾ ಅಧಿಕ ತೂಕ ಹೊಂದಿರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳಲ್ಲಿ ಒಂದಾದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಪಿಸಿಓಎಸ್ ಕೂದಲು ಉದುರುವಿಕೆಗೆ ಒಂದು ಅಂಶವಾಗಿರಬಹುದು ಏಕೆಂದರೆ ಈ ಸ್ಥಿತಿಯು ಸಾಮಾನ್ಯ ಟೆಸ್ಟೋಸ್ಟೆರಾನ್ ಮಟ್ಟಕ್ಕಿಂತ ಹೆಚ್ಚಿನದಕ್ಕೆ ಸಂಬಂಧಿಸಿದೆ, ಇದು ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಕೂದಲು ಉದುರುವಿಕೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ ಆದರೂ ಕೂಡ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಮತೋಲಿತ ಆಹಾರವನ್ನು ತಿನ್ನಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ದೀರ್ಘಕಾಲದ ಒತ್ತಡವು ಕೂದಲು ಉದುರುವಿಕೆಯನ್ನು ಉಲ್ಬಣಗೊಳಿಸಬಹುದು. ಹೀಗಾಗಿ ದೈನಂದಿನ ವೇಳಾಪಟ್ಟಿಯಲ್ಲಿ ಡೈಟೇಶನ್, ಯೋಗ ಅಥವಾ ಆಳವಾದ ಉಸಿರಾಟ ಮೊದಲಾದ ಕ್ರಮವನ್ನು ಅಳವಡಿಸಿಕೊಳ್ಳಿ. ಕೂದಲು ಉದುರುವ ಸಮಸ್ಯೆಯ ಮೂಲಕ ಕಾರಣ ಅಧಿಕ ಬೊಜ್ಜು ಆಗಿದ್ದರೆ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನ ಪಡುತ್ತಲೇ ಇರಬೇಕು ಹಾಗೆ ಮಾಡುವುದರಿಂದ ಎರಡು ಸಮಸ್ಯೆಯಿಂದ ಹೊರ ಬರಬಹುದು.