‘ಆದಿಪುರುಷ್’ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ತಿರುಪತಿಯಲ್ಲಿ ನಡೆದಿದ್ದು ಆ ಸಮಯದಲ್ಲಿ ಪ್ರಭಾಸ್ ಅವರು ತಮ್ಮ ಮುಂದಿನ ಸಿನಿಮಾ ಪ್ಲ್ಯಾನ್ ಕುರಿತು ಮಾತನಾಡಿದ್ದಾರೆ. ನಟ ಪ್ರಭಾಸ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
‘ಬಾಹುಬಲಿ’ ಬಳಿಕ ನಿಧಾನ ಗತಿಯಲ್ಲಿ ಸಿನಿಮಾ ಮಾಡಿದ್ದ ಪ್ರಭಾಸ್ ಅವರು ಈಗ ವೇಗ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಒಟ್ಟೊಟ್ಟಿಗೆ ಹಲವು ಸಿನಿಮಾಗಳನ್ನು ಒಪ್ಪಿ ಅಭಿನಯಿಸುತ್ತಿದ್ದಾರೆ. ಈಗ ಪ್ರಭಾಸ್ ಅವರು ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ್ದು ಇನ್ನುಮುಂದೆ ವರ್ಷಕ್ಕೆ ಅವರ ನಟನೆಯ ಎರಡು ಅಥವಾ ಮೂರು ಸಿನಿಮಾಗಳು ರಿಲೀಸ್ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
2013ರಲ್ಲಿ ಅವರ ನಟನೆಯ ‘ಮಿರ್ಚಿ’ ಚಿತ್ರ ತೆರೆಗೆ ಬಂತು. ನಂತರದ 10 ವರ್ಷಗಳಲ್ಲಿ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆದವು. ಇದರ ಸರಾಸರಿ ತೆಗೆದರೆ ಎರಡೂವರೆ ವರ್ಷಕ್ಕೆ ಅವರ ಒಂದು ಸಿನಿಮಾ ರಿಲೀಸ್ ಆಗಿದೆ. ಆದರೆ, ಇನ್ನುಮುಂದೆ ಈ ರೀತಿ ಆಗುವುದಿಲ್ಲ ಎಂದು ಅವರು ಒಪ್ಪಿಕೊಂಡರು. ಡಾರ್ಲಿಂಗ್ಸ್ ದಯವಿಟ್ಟು ವೇದಿಕೆ ಮೇಲೆ ಹೆಚ್ಚು ಮಾತನಾಡಲು ಒತ್ತಾಯಿಸಬೇಡಿ, ಇಂದು, ನಾನು ಸಾಮಾನ್ಯಕ್ಕಿಂತ ಹೆಚ್ಚೇ ಮಾತನಾಡಿದ್ದೇನೆ. ನಾನು ಇನ್ನುಮುಂದೆ ಕಡಿಮೆ ಮಾತನಾಡುತ್ತೇನೆ, ಹೆಚ್ಚು ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾರೆ.
ವರ್ಷಕ್ಕೆ ಎರಡು ಚಿತ್ರಗಳನ್ನು ತಪ್ಪದೆ ಮಾಡುತ್ತೇನೆ. ಸಾಧ್ಯವಾದರೆ ಮೂರನೇ ಚಿತ್ರವನ್ನೂ ಮಾಡುತ್ತೇನೆ ಎಂದು ಪ್ರಭಾಸ್ ಹೇಳಿಕೊಂಡರು. ಈ ವಿಚಾರ ಕೇಳಿ ಪ್ರಭಾಸ್ ಫ್ಯಾನ್ಸ್ ತುಂಬಾ ಖುಷಿಪಟ್ಟಿದ್ದಾರೆ. ಪ್ರಭಾಸ್ ಇದನ್ನು ಗಂಭೀರವಾಗಿಯೇ ಹೇಳುತ್ತಿದ್ದಾರೆ ಎಂಬುದು ಅಭಿಮಾನಿಗಳು ನಂಬಿಕೊಂಡಿದ್ದಾರೆ.
ಜೂನ್ 16ರಂದು ‘ಆದಿಪುರುಷ್’ ರಿಲೀಸ್ ಆಗಲಿದೆ. ಸೆಪ್ಟೆಂಬರ್ನಲ್ಲಿ ‘ಸಲಾರ್’ ಸಿನಿಮಾ ತೆರೆಗೆ ಬರಲಿದ್ದು 2024ರ ಆರಂಭದಲ್ಲೇ ‘ಪ್ರಾಜೆಕ್ಟ್ ಕೆ’ ರಿಲೀಸ್ ಆಗಲಿದೆ. ಆ ಬಳಿಕ ‘ರಾಜ ಡೆಲಕ್ಸ್’ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ಹೊಸ ಸಿನಿಮಾ ಘೋಷಣೆ ಮಾಡೋ ಸಾಧ್ಯತೆ ಇದೆ ಎಂದು ಸಿನಿಮಾ ಮೂಲಗಳು ತಿಳಿಸಿವೆ