ತಾಪಮಾನ ಗಗನಕ್ಕೇರಿದೆ. ಆದರೂ ಈ ಬಿಸಿಯ ಅಲೆಗಳಿಂದ ವಾಸ್ತವದಲ್ಲಿ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ವರದಿಯ ಪ್ರಕಾರ, ಏಪ್ರಿಲ್ನಲ್ಲಿ ಭಾರತ ಅಸಾಧಾರಣ ಬೇಸಿಗೆ ಬಿಸಿಯನ್ನು ಅನುಭವಿಸಿತ್ತು. ಸಣ್ಣ ಪ್ರದೇಶಗಳು ಮತ್ತು ವಿಸ್ತಾರವಾದ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆ ಶಾಖದ ಅಲೆಗಳು ಕಾಡುತ್ತಿದ್ದವು. ದುರದೃಷ್ಟವಶಾತ್, 2024ನೇ ಇಸವಿಯು ಕಳೆದ ವರ್ಷದ ತಾಪಮಾನದ ದಾಖಲೆ ಮುರಿದು ಹೊಸ ತಾಪಮಾನ ದಾಖಲೆ ನಿರ್ಮಿಸುವ ಮೂಲಕ ಮತ್ತಷ್ಟು ಬಿಸಿಯಾಗಲು ಸಿದ್ಧವಾಗಿದೆ. ಹಾಗಂತ ಇದು ಕೇವಲ ಪ್ರಾದೇಶಿಕ ಸಮಸ್ಯೆ ಅಲ್ಲ, ಜಾಗತಿಕ ಸಮಸ್ಯೆಯ ಭಾಗ ಅಷ್ಟೇ. 2023ನೇ ಇಸವಿ ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ತಾಪಮಾನ ಇದ್ದ ವರ್ಷ. ಆದ್ದರಿಂದ, ತಾಪಮಾನವು ಹೆಚ್ಚಾಗುತ್ತಾ ಹೋದಂತೆ ತಂಪಾಗಿ ಇರುವುದು ಮತ್ತು ಸುರಕ್ಷಿತವಾಗಿರುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯ.
ತಾಪಮಾನ ಹೆಚ್ಚುವುದು ಮತ್ತು ಶಾಖದ ಅಲೆಗಳು ಸುಡುವುದರಿಂದ ಮಧುಮೇಹ ಹೊಂದಿದವರು ಹೆಚ್ಚು ಸವಾಲು ಎದುರಿಸಬೇಕಾಗುತ್ತದೆ. ಉಷ್ಣತೆ ಹೆಚ್ಚವುದರಿಂದ ದೇಹದಲ್ಲಿರುವ ದ್ರವ ಅಂಶ ಮತ್ತು ಉಪ್ಪಿನ ಅಂಶ ಕಡಿಮೆಯಾಗಬಹುದಾಗಿದೆ. ಅದರಿಂದ ಡೀಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗಬಹುದು ಮತ್ತು ಶಾಖದ ಬಳಲಿಕೆ ಕಾಡಬಹುದು. ಶಾಖದ ಆಯಾಸದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಹೆಚ್ಚು ಸವಾಲಿನ ವಿಚಾರ. ಹಾಗಾಗಿಯೇ ಮಧುಮೇಹ ಹೊಂದಿರುವ ಜನರು ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ತೇವಾಂಶ ಪರಿಸರದಲ್ಲಿ ಹೆಚ್ಚು ಸೆನ್ಸಿಟಿವ್ ಅಥವಾ ಸೂಕ್ಷ್ಮರಾಗಿರುತ್ತಾರೆ. ಆದ್ದರಿಂದ, ಶಾಖದ ಅಲೆಗಳು ಅವರ ದೈನಂದಿನ ದಿನಚರಿಗೆ ಅಡ್ಡಿಪಡಿಸಬಹುದು ಮತ್ತು ಅವರ ಒಟ್ಟಾರೆ ಮಧುಮೇಹ ನಿರ್ವಹಣೆಯ ಮೇಲೆ ಭಾರಿ ಪರಿಣಾಮ ಬೀರಬಹುದು.
ಈ ಕುರಿತು ಬೆಂಗಳೂರು, ಕೋಲಾರ, ಕೆಜಿಎಫ್ ನ ಡಾ. ರಾಜೇಂದ್ರ ಕುಮಾರ್ ಕ್ಲಿನಿಕ್ ನ ಎಂಬಿಬಿಎಸ್, ಎಂಡಿ, ಎಂಬಿಎ, ಮಧುಮೇಹ ತಜ್ಞ, ಡಾ ಬಿ. ರಾಜೇಂದ್ರ ಕುಮಾರ್, “ಮಧುಮೇಹದ ನಿರ್ವಹಣೆಗೆ ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಬಹಳ ಅವಶ್ಯ. ಆದರೆ ಆ ದಿನಚರಿಗೆ ಬೇಸಿಗೆ ಬಹಳಷ್ಟು ಅಡ್ಡಿ ಮಾಡುತ್ತದೆ. ದಿನಚರಿ ಆಚೀಚೆ ಆಗುವುದರಿಂದ ಮಧುಮೇಹ ಸ್ನೇಹಿ ಆಹಾರ ಸೇವನೆ ಮಾಡಲು ಅಥವಾ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸಲು ಸಾಧ್ಯವಾಗದೇ ಇರಬಹುದು. ವಿಶೇಷವಾಗಿ, ಶಾಖದ ಅಲೆಗಳ ಸಮಯದಲ್ಲಿ ಮಧುಮೇಹ ಹೊಂದಿರುವವರು ಅವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಅನಿಯಮಿತವಾಗಿದ್ದರೆ ಡೀಹೈಡ್ರೇಷನ್ ಅಥವಾ ನಿರ್ಜಲೀಕರಣ ಹೊಂದುವ ಅಪಾಯ ಇರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ಸಮತೋಲನ ಮಾಡಲು ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ನಂತಹ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ. ಈ ಸಿಜಿಎಂ ಸಾಧನಗಳು ಈಗ ಸ್ಮಾರ್ಟ್ಫೋನ್ಗಳಿಗೂ ಹೊಂದಿಕೆಯಾಗುತ್ತವೆ. ನೀವು ಎಲ್ಲೇ ಇದ್ದರೂ ನೈಜ-ಸಮಯದ ಮಾಹಿತಿಯನ್ನು ನೀಡುತ್ತವೆ ಮತ್ತು ಮಧುಮೇಹ ನಿರ್ವಹಣೆಯಲ್ಲಿ ರಾಜಿ ಮಾಡಿಕೊಳ್ಳದಂತೆ ನಿಮ್ಮ ದಿನಚರಿಯಲ್ಲಿ ಬದಲಾವಣೆ ಆಗುವುದನ್ನು ತಡೆಯುತ್ತದೆ” ಎಂದು ಹೇಳಿದರು.
ಮಧುಮೇಹ ಹೊಂದಿರುವ ವ್ಯಕ್ತಿಗಳು ದಿನದ ಬಹುತೇಕ ಭಾಗದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ರಕ್ತದ ಸಕ್ಕರೆ ಮಟ್ಟವು ತಮಗೆ ಶಿಫಾರಸು ಮಾಡಲಾದ ರೇಂಜ್ (70 – 180 mg/dl) ನಲ್ಲಿ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅದನ್ನು ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳನ್ನು ಬಳಸುವುದರ ಮೂಲಕ ಸಾಧಿಸಬಹುದಾಗಿದೆ. ಈ ಸಾಧನವು ಬೆರಳನ್ನು ಚುಚ್ಚುವ ಅಗತ್ಯವೇ ಇಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಮಾಹಿತಿಯನ್ನು ಒದಗಿಸುತ್ತದೆ. ಈ ಸಾಧನಗಳು ಟೈಮ್ ಇನ್ ರೇಂಜ್ನಂತಹ ಮೆಟ್ರಿಕ್ಗಳನ್ನು ಹೊಂದಿವೆ ಮತ್ತು ನಿಮಗೆ ಶಿಫಾರಸು ಮಾಡಲಾದ ರೇಂಜ್ ನಲ್ಲಿ ಇರುವಂತೆ ನಿಮ್ಮ ಮಾಹಿತಿಯ ಮೇಲೆ ನಿಗಾ ಇಡುವಂತೆ ಮಾಡುತ್ತದೆ. ಅದರಿಂದ ನಿಮ್ಮ ಗ್ಲೂಕೋಸ್ ಮಟ್ಟದ ನಿಯಂತ್ರಣವನ್ನು ಮಾಡಬಹುದಾಗಿದೆ.
ಬಿಸಿಯ ಅಲೆಗಳನ್ನು ಸೋಲಿಸಲು ಮತ್ತು ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು 4 ಸರಳ ಸಲಹೆಗಳು:
1. ಹೈಡ್ರೇಷನ್ ಅಥವಾ ದೇಹದಲ್ಲಿ ದ್ರವಾಂಶ ಇರುವಂತೆ ನೋಡಿಕೊಳ್ಳಿ: ಶಾಖದ ಅಲೆಗಳು ಕಾಡುತ್ತಿರುವ ಸಮಯದಲ್ಲಿ ನೀವು ನಿರ್ಜಲೀಕರಣ ಉಂಟಾಗುವುದನ್ನು ತಡೆಗಟ್ಟಲು ನಿಮಗೆ ಬಾಯಾರಿಕೆ ಆಗದಿದ್ದರೂ ಸಾಕಷ್ಟು ನೀರು ಕುಡಿಯುವ ಮೂಲಕ ಡೀಹೈಡ್ರೇಷನ್ ಆಗದಂತೆ ನೋಡಿಕೊಳ್ಳಿ. ದೇಹದಲ್ಲಿ ಸೂಕ್ತವಾದ ದ್ರವಾಂಶ ಇದ್ದರೆ, ದೇಹಶ ಹೈಡ್ರೇಟ್ ಆಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಆಗುತ್ತದೆ. ಜೊತೆಗೆ ರಕ್ತದ ಹರಿವಿನಿಂದ ಟಾಕ್ಸಿಕ್ ಅಂದ್ರೆ ಬೇಡದ ಅಂಶವನ್ನು ಹೊರಹಾಕುತ್ತದೆ. ಮಧುಮೇಹದ ಜೊತೆಗೆ ವಾಸಿಸುವ ಜನರು ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ದ್ರವಾಂಶ ಕಡಿಮೆಯಾಗಿ ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ನೀವು ಗಮನಿಸಬೇಕಾದ ವಿಷಯವೆಂದರೆ ಅಸಮರ್ಪಕ ದ್ರವ ಸೇವನೆಯಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಬಹುದು. ರಕ್ತದ ಸಕ್ಕರೆ ಮಟ್ಟ ಹೆಚ್ಚಾದರೆ ಅದರಿಂದ ಮೂತ್ರ ವಿಸರ್ಜನೆಯೂ ಹೆಚ್ಚಾಗುತ್ತದೆ. ಅದು ನಿರ್ಜಲೀಕರಣ ಉಂಟಾಗಲು ಮತ್ತಷ್ಟು ಕೊಡುಗೆ ನೀಡುತ್ತದೆ. ಒಬ್ಬ ವ್ಯಕ್ತಿಯು ಕುಡಿಯುವ ನೀರಿನ ಪ್ರಮಾಣವು ಆ ವ್ಯಕ್ತಿಯ ತೂಕ, ವಯಸ್ಸು, ದೈಹಿಕ ಚಟುವಟಿಕೆಯಂತಹ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆಯಾದರೂ ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 2 ಲೀಟರ್ ನೀರನ್ನು ಸೇವಿಸಬೇಕು.
2. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಗಾ ವಹಿಸಿ: ಶಾಖದ ಅಲೆಯ ಸಮಯದಲ್ಲಿ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಪರಿಶೀಲಿಸುವುದು ಬಹಳ ಮುಖ್ಯ. ಫ್ರೀಸ್ಟೈಲ್ ಲಿಬ್ರೆ ಯಂತಹ ಅತ್ಯಾಧುನಿಕ ಸೆನ್ಸರ್ ಆಧಾರಿತ ಕಂಟಿನ್ಯೂಯಸ್ ಮಾನಿಟರಿಂಗ್ ಸಾಧನಗಳು ನೀವು ಕೆಲಸ ಮಾಡುತ್ತಿದ್ದರೂ ಅಥವಾ ನಿದ್ರಿಸುತ್ತಿದ್ದರೂ ಸದಾ ನಿಮ್ಮ ರಕ್ತ ಗ್ಲೂಕೋಸ್ ಅಂಶಗಳನ್ನು ಪರಿಶೀಲಿಸಲು ನಿಮಗೆ ನೆರವಾಗುತ್ತದೆ. ಸಾಧನವು ನಿಮ್ಮ ಗ್ಲೂಕೋಸ್ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಮತ್ತು ನಿಮ್ಮ ಏರುಪೇರು ಉಂಟಾದಾಗ ತಕ್ಷಣವೇ ನಿಖರವಾಗಿ ಎಚ್ಚರಿಕೆಗಳನ್ನು ನೀಡುತ್ತದೆ. ಆದ್ದರಿಂದ ನೀವು ರಕ್ತದಲ್ಲಿನ ಸಕ್ಕರೆ ಅಂಶದ ಹಠಾತ್ ಕುಸಿತ ಅಥವಾ ಹಠಾತ್ ಏರುವಿಕೆ ಕುರಿತು ಚಿಂತಿಸದೆ ನಿಮ್ಮ ದಿನವನ್ನು ಕಳೆಯಬಹುದು. ನೀವು ಸದಾ ನಿಮ್ಮ ರೀಡಿಂಗ್ ಅನ್ನು ಗಮನಿಸುತ್ತಿರಬೇಕು ಮತ್ತು ಪ್ರತಿ ದಿನ 24 ಗಂಟೆಗಳಲ್ಲಿ ಸುಮಾರು 17 ಗಂಟೆಗಳ ಕಾಲ ಗ್ಲೂಕೋಸ್ ಮಟ್ಟವನ್ನು ನಿಮಗೆ ಶಿಫಾರಸ್ ಮಾಡಲಾದ ರೇಂಜ್ ನಲ್ಲಿ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು.
3. ಸೂಕ್ತ ರೀತಿಯಲ್ಲಿ ವ್ಯಾಯಾಮ ಯೋಜನೆ ಮಾಡಿಕೊಳ್ಳಿ: ಮಧುಮೇಹ ನಿರ್ವಹಣೆಯಲ್ಲಿ ಬಹಳ ಅತ್ಯಗತ್ಯ ಯಾವುದು ಎಂದರೆ ಅದು ಕ್ರಿಯಾಶೀಲ ಜೀವನಶೈಲಿ. ಜೊತೆಗೆ ಬಿಸಿಲು ಮತ್ತು ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಸಹ ಮುಖ್ಯ. ಹೊರಗೆ ತುಂಬಾ ಬಿಸಿಲು ಇರುವಾಗ ಹೊರಗಡೆ ಹೋಗುವುದನ್ನು ತಪ್ಪಿಸಬೇಕು ಮತ್ತು ಅದರ ಬದಲಿಗೆ ಒಳಾಂಗಣ ವ್ಯಾಯಾಮ ಅಥವಾ ಯೋಗ ಮಾಡಬೇಕು. ನೀವು ಮುಂಜಾನೆ ಅಥವಾ ಸಂಜೆಯ ಸಮಯದಲ್ಲಿ ಹೊರಗಡೆ ಹೋಗಿ ವ್ಯಾಯಾಮ ಮಾಡಬಹುದು. ಆದರೆ ಬಿಸಿಲು ಇದ್ದಾಗ ಒಳಾಂಗಣ ಜಿಮ್ನಲ್ಲಿ ಅಥವಾ ಮನೆಯಲ್ಲಿ ವ್ಯಾಯಾಮವನ್ನು ಮಾಡುವುದು ಸೂಕ್ತ.
4. ಆರೋಗ್ಯಕರ ಆಹಾರ ಸೇವಿಸಿ: ಬೇಸಿಗೆಯಲ್ಲಿ ಐಸ್ ಕ್ರೀಂ ಮತ್ತು ಸ್ಲಶಿಗಳಿಗೆ ಅಂದ್ರೆ ಐಸ್ ಮತ್ತು ಪಾನೀಯದಿಂದ ತಯಾರಿಸಿದ ತಂಪಾದ ಆಹಾರ ಪದಾರ್ಥಗಳನ್ನು ಬಯಸುವುದು ಸಹಜ. ಆದರೆ ಮಧುಮೇಹ ಹೊಂದಿರುವ ಜನರು ಬಹಳ ಜಾಗರೂಕರಾಗಿರಬೇಕು ಮತ್ತು ಅವರು ತಮ್ಮ ಸ್ಥಿತಿಗೆ ಅನುಗುಣವಾಗಿ ಸಮತೋಲಿತ, ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಸೆಲರಿ ಹಾಗೂ ಬ್ರಸೆಲ್ಸ್ ಸ್ಪ್ರೌಟ್ ನಂತಹ ಸೊಪ್ಪು ತರಕಾರಿ, ಹೆಚ್ಚಿನ ಫೈಬರ್ ಇರುವ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಆಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ನಿಂಬೆಹಣ್ಣು ಮತ್ತು ಆಮ್ಲಾ ಮುಂತಾದ ಸಿಟ್ರಸ್ ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಬೇಸಿಗೆಯು ವಿಶ್ರಾಂತಿ ತೆಗೆದುಕೊಳ್ಳುವ ಮತ್ತು ನಿರಾತಂಕವಾಗಿರುವ ಸಮಯ. ಅದರಲ್ಲೂ ಮಧುಮೇಹ ಹೊಂದಿರುವವರು ಬೇಸಿಗೆಯನ್ನು ಆನಂದಿಸುವುದು ಸ್ವಲ್ಪ ಕಷ್ಟವೇ. ಆದರೆ ಈ ಜೀವನಶೈಲಿ ಕಾಯಿಲೆಯನ್ನು ನಿರ್ವಹಿಸಲು ಸಣ್ಣದಾದ ಮತ್ತು ನಿರ್ವಹಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ನಿಯಂತ್ರಿಸಬಹುದು, ಆನಂದದಿಂದ ಬದುಕಬಹುದು ಮತ್ತು ಬೇಸಿಯನ್ನೂ ಆನಂದಿಸಬಹುದು.