ಹೊಗೇನಕಲ್ ಈ ಜಲಪಾತವು ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿದೆ. ಬೆಂಗಳೂರು ಮಂದಿಗೆ ಈ ಹೊಗೇನಕಲ್ ಜಲಪಾತ ವಾರಾಂತ್ಯ ತಾಣವಾಗಿದೆ. ಒತ್ತಡವಿರುವ ಸಮಯದಿಂದ ಬಿಡುವು ಮಾಡಿಕೊಂಡು ಕುಟುಂಬ, ಸ್ನೇಹಿತರೊಟ್ಟಿಗೆ ಅಥವಾ ಏಕಾಂತವಾಗಿ ಈ ಜಲಪಾತಕ್ಕೆ ಹೋಗಬಹುದು. ಹೊಗೇನಕಲ್ ಜಲಪಾತವು ಕಾವೇರಿ ನದಿಯಿಂದ ರೂಪುಗೊಂಡ ಜಲಪಾತಗಳ ಸರಣಿಯಾಗಿದೆ. ಜಲಪಾತದ ಪ್ರೇಮಿಗಳು ತಮ್ಮ ಬಿಡುವಿನ ಸಮಯದಲ್ಲಿ ತಪ್ಪದೇ ಭೇಟಿ ನೀಡಬೇಕಾದ ತಾಣ ಇದಾಗಿದೆ.
ಬೆಂಗಳೂರಿನಿಂದ 126 ಕಿ.ಮೀ ದೂರದ ಹೊಗೇನಕಲ್ ಜಲಪಾತದಲ್ಲಿ ದೋಣಿ ಸವಾರಿ, ಜಲಪಾತ ಸ್ನಾನ ಮಾಡಬಹುದು. ಈ ಜಲಪಾತಕ್ಕೆ ಜೂನ್ ತಿಂಗಳಿನಲ್ಲಿ ನೀವು ಹೋಗಬಹುದು. ಬೇಸಿಗೆಯಲ್ಲಿಯು ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳಲ್ಲಿ ಈ ಹೊಗೇನಕಲ್ ಜಲಪಾತವು ಒಂದಾಗಿದೆ.
ರಭಸವಾಗಿ ಧುಮುಕುವ ನೀರು ಕಲ್ಲಿನ ಮೇಲೆ ಬಿದ್ದು ಹೊಗೆಯನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಲೇ ಇಲ್ಲಿನ ಜಲಪಾತಕ್ಕೆ ಹೊಗೇನಕಲ್ ಜಲಪಾತ ಎಂಬ ಹೆಸರು ಬಂದಿದೆ ಅಂತ ಹೇಳಲಾಗುತ್ತದೆ. ಪ್ರತಿಯೊಂದು ಜಲಪಾತದ ಸೌಂದರ್ಯವನ್ನು ಮಾನ್ಸುನ್ ಸಮಯದಲ್ಲಿಯೇ ಸಂದರ್ಶಿಸಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಆದಾಗ್ಯೂ ಈ ಜಲಪಾತವನ್ನು ಜೂನ್ ತಿಂಗಳಿನಲ್ಲಿಯು ಹೋಗಬಹುದಾಗಿದೆ. ಈ ಹೊಗೇನಕಲ್ ಜಲಪಾತದಲ್ಲಿರುವ ನೀರು ಔಷಧೀಯ ಗುಣಗಳಿಂದ ತುಂಬಿದೆ ಎಂದು ಸ್ಥಳೀಯರು ನಂಬುತ್ತಾರೆ. ಈ ಕಾರಣದಿಂದ ಜನರು ಜಲಪಾತದ ನೀರಿನಲ್ಲಿ ಮಿಂದೇಳಲು ಬಯಸುತ್ತಾರೆ. ಹೀಗೆ ಸ್ನಾನ ಮಾಡುವುದರಿಂದ ತಮ್ಮ ಸೂಕ್ಷ್ಮವಾದ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ ಅಲ್ಲಿನ ಜನರದ್ದು.
ಇಲ್ಲಿ ಸ್ನಾನ ಮಾಡಲು ಆಸಕ್ತಿ ಇರುವವರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಸ್ನಾನ ಮಾಡಿಕೊಳ್ಳಬಹುದಾಗಿದೆ. ಹೊಗೇನಕಲ್ ಜಲಪಾತದಲ್ಲಿ ನೀವೇನಾದರೂ ಥ್ರಿಲ್ಲಿಂಗ್ ಚಟುವಟಿಕೆ ಮಾಡಲು ಬಯಸಿದರೆ ಬೋಟಿಂಗ್ ಹಾಗೂ ಕೊರಾಕಲ್ ರೈಡ್ ಟ್ರೈ ಮಾಡಬಹುದು. ಮುಖ್ಯವಾಗಿ ಈ ಜಲಪಾತಕ್ಕೆ ಹೋದವರೆಲ್ಲ ಮಾಡಲೇಬೇಕಾದ ಮೋಜಿನ ಸವಾರಿಗಳು ಇವುಗಳಾಗಿವೆ. ದೋಣಿಯ ವ್ಯಕ್ತಿ ನಿಮ್ಮನ್ನು ಮೊದಲು ಜಲಪಾತದ ಬಳಿ ಕರೆದೊಯ್ಯುತ್ತಾನೆ ಆಗ ನೀವು ತುಂಬಾ ಎಂಜಾಯ್ ಮಾಡು ಅಂತ ಪರಿಸ್ಥಿತಿ ನಿಮಗೆ ಸಿಗುತ್ತದೆ. ಆ ಸಮಯದ ಜಲಪಾತದ ಪ್ರಯಾಣವು ತುಂಬಾ ಸುಂದರವಾಗಿರುತ್ತದೆ. ಹತ್ತಿರದಿಂದ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.ಸಹಜವಾಗಿ ಜಲಪಾತಗಳು ನಿಸರ್ಗದ ಮಡಿಲಿನಲ್ಲಿ ನೆಲೆಸಿರುತ್ತದೆ. ಅದೇ ರೀತಿ ಹೊಗೇನಕಲ್ ಜಲಪಾತವು ಕೂಡ ದಟ್ಟವಾದ ಕಾಡುಗಳು ಹಾಗು ಎತ್ತರವಾದ ಕಲ್ಲಿನ ಬೆಟ್ಟಗಳಿಂದ ಸುತ್ತುವರಿದಿದೆ. ಎತ್ತ ನೋಡಿದರೂ ಹಚ್ಚ ಹಸಿರನಿಂದ ಕಂಗೊಳಿಸುತ್ತಿರುವ ಭೂದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಈ ಪ್ರದೇಶದ ರಮಣೀಯ ಸೌಂದರ್ಯವು ಜಲಪಾತದ ಆಕರ್ಷಣೆಯನ್ನು ಹೆಚ್ಚಿಸಿದೆ ಎಂದೆ ಅನಿಸುತ್ತದೆ. ನೀವು ಬಹುಶಃ ಪ್ರಕೃತಿ ಪ್ರಿಯರು ಅಥವಾ ಛಾಯಾಗ್ರಾಹಕರಾಗಿದ್ದರೆ ಈ ಸ್ಥಳ ನಿಮಗೆ ಸ್ವರ್ಗ ಎಂದೇ ಹೇಳಬಹುದು.
ಜಲಪಾತದ ವೀಕ್ಷಣೆ, ನಿಸರ್ಗದ ರಮಣೀಯತೆಯ ಜೊತೆ ಜೊತೆಗೆ ಟ್ರೆಕ್ಕಿಂಗ್ ಸ್ಥಳಗಳನ್ನು ಹೊಂದಿದೆ. ಒಂದೇ ಸೂರಿನಡಿ ದೋಣಿ ಸವಾರಿ, ಜಲಪಾತದ ಸ್ನಾನ, ಟ್ರೆಕ್ಕಿಂಗ್ನಂತಹ ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಹೊಗೇನಕಲ್ ಜಲಪಾತದ ಸುತ್ತಲಿನ ಪ್ರದೇಶವು ಪ್ರಕೃತಿಯ ಹಾದಿಗಳಿಗೆ ಸೂಕ್ತವಾಗಿದೆ. ಇಷ್ಟು ಸುಂದರವಾದ ಪ್ರಕೃತಿ ಮಡಿಲಿಗೆ ಒಮ್ಮೆ ಭೇಟಿ ನೀಡಿ, ಜಲಪಾತವನ್ನು ಕಣ್ತುಂಬಿಸಿಕೊಳ್ಳುತ್ತಾ ನಿಮ್ಮ ಮನಸ್ಸನ್ನು ಮುದಗೊಳಿಸಿ.