ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಕುಸ್ತಿ ಪಟುಗಳು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಭಾನುವಾರ ಹೊಸ ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ಘರ್ಷಣೆ ಉಂಟಾಗಿತ್ತು. ಈ ಘಟನೆಯಿಂದ ತೀವ್ರ ನೋವು ಅನುಭವಿಸಿದ ಕುಸ್ತಿಪಟುಗಳು ಮಂಗಳವಾರ ಸಂಜೆ ಗಂಗಾನದಿಯಲ್ಲಿ ತಮ್ಮ ಪದಕಗಳನ್ನು ಬಿಡಲು ನಿರ್ಧರಿಸಿದ್ದರು. ಈ ಹೊತ್ತಲ್ಲಿ ರೈತರ ನಾಯಕ ನರೇಶ್ ಟಿಕಾಯತ್ ಕುಸ್ತಿಪಟುಗಳೊಂದಿಗೆ ಮಾತನಾಡಿ ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ.
ಆರೋಪವನ್ನು ಅಲ್ಲಗಳೆದ ಬ್ರಿಜ್ ಭೂಷಣ್ ಶರಣ್ ಸಿಂಗ್ :
ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನನ್ನನ್ನು ನಾನು ನೇಣಿಗೆ ಹಾಕಿಕೊಳ್ಳುತ್ತೆನೆ. ನಿಮ್ಮ ಬಳಿ (ಕುಸ್ತಿಪಟುಗಳು) ಯಾವುದೇ ಪುರಾವೆ ಇದ್ದರೂ ಅದನ್ನು ಕೋರ್ಟ್ ಮುಂದೆ ಹಾಜರುಪಡಿಸಿ. ನಾನು ಯಾವುದೇ ಶಿಕ್ಷೆ ಎದುರಿಸಲೂ ಸಿದ್ಧ ಎಂದು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಬ್ರಿಜ್ ಭೂಷಣ್ ಅಲ್ಲಗಳೆದಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾದ ಆರೋಪಗಳು :
ಕಳೆದ ಏಪ್ರಿಲ್ 21ರಂದು ದಿಲ್ಲಿಯ ಕನ್ನೌಟ್ ಪ್ಲೇಸ್ ಪೊಲೀಸ್ ಠಾಣೆಗೆ ಆರು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿದ ದೂರು ನೀಡಿದ್ದರು. ನಂತರ ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಕೂಡ ಏಪ್ರಿಲ್ 28ರಂದು ಪ್ರತ್ಯೇಕ ದೂರು ನೀಡಿದ್ದು, ಎರಡೂ ಎಫ್ಐಆರ್ಗಳಿಂದ ಒಟ್ಟು ಏಳು ಕುಸ್ತಿಪಟುಗಳ ಆರೋಪ ದಾಖಲಿಸಿದ್ದಾರೆ. ಎರಡೂ ಎಫ್ಐಆರ್ಗಳು ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಅನುಚಿತ ವರ್ತನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿ ಪ್ರಕರಣಗಳನ್ನು ನಮೂದಿಸಿವೆ. ಆರೋಪ ಸಾಬೀತಾದರೆ ಇವು ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಬಹುದು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅನುಚಿತವಾಗಿ ಮತ್ತು ದೌರ್ಜನ್ಯದ ರೀತಿಯಲ್ಲಿ ಬೆದರಿಕೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ಕೈಗೆ ಒಂಟಿಯಾಗಿ ಸಿಗದಂತೆ ತಪ್ಪಿಸಿಕೊಳ್ಳಲು ಕೊಠಡಿಗಳಿಂದ ಹೊರ ಹೋಗುವಾಗ ಮಹಿಳೆಯರೆಲ್ಲರೂ ಗುಂಪುಗಳಲ್ಲಿ ಓಡುತ್ತಿದ್ದೆವು ಎಂದು ಅಥ್ಲೀಟ್ಗಳು ಆರೋಪಿಸಿದ್ದಾರೆ. ಗುಂಪುಗಳಿಂದ ಒಬ್ಬೊಬ್ಬರನ್ನೇ ಪ್ರತ್ಯೇಕಿಸುತ್ತಿದ್ದ ಸಿಂಗ್, ಅವರಿಗೆ ಸಮರ್ಪಕವಲ್ಲದ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಒಬ್ಬರು ದೂರಿದ್ದಾರೆ.
ನನ್ನ ಟಿ ಶರ್ಟ್ ಎತ್ತುವಂತೆ ಬ್ರಿಜ್ ಭೂಷಣ್ ಸೂಚಿಸಿದ್ದರು. ನನ್ನ ಹೊಟ್ಟೆಯ ಮೇಲೆ ಅವರು ಕೈ ಆಡಿಸಿದ್ದರು. ನನ್ನ ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಹೊಕ್ಕಳಿನ ಮೇಲೆ ಕೈ ಹಾಕಿದ್ದರು. ಆರೋಗ್ಯ ಹಾಗೂ ಪ್ರದರ್ಶನಕ್ಕೆ ಒಳ್ಳೆಯದು ಎಂದು ನನಗೆ ಪರಿಚಯವಿಲ್ಲದ ಖಾದ್ಯವೊಂದನ್ನು ತಿನ್ನಲು ಹೇಳಿದ್ದರು. ಅದಕ್ಕೆ ಡಯಟೀಷಿಯನ್ ಅಥವಾ ಕೋಚ್ ಅನುಮೋದನೆ ನೀಡಿರಲಿಲ್ಲ” ಎಂದು ಒಬ್ಬ ಮಹಿಳೆ ಆರೋಪಿಸಿದ್ದಾರೆ.
ವಿದೇಶದಲ್ಲಿ ಸ್ಪರ್ಧೆ ವೇಳೆ ಗಾಯಗೊಂಡಿದ್ದೆ. ಲೈಂಗಿಕ ಸುಖ ನೀಡಿದರೆ ಚಿಕಿತ್ಸೆಯ ವೆಚ್ಚವನ್ನು ಸಂಸ್ಥೆಯೇ ನೋಡಿಕೊಳ್ಳಲಿದೆ ಎಂದು ಸಿಂಗ್ ಹೇಳಿದ್ದರು. ನಾನು ಮ್ಯಾಚ್ ಮೇಲೆ ಮಲಗಿದ್ದಾಗ ನನ್ನ ಬಳಿ ಬಂದಿದ್ದ ಸಿಂಗ್, ನನ್ನ ಪಕ್ಕ ಕುಳಿತಿದ್ದರು. ಆಗ ಅಲ್ಲಿ ನನ್ನ ಕೋಚ್ ಇರಲಿಲ್ಲ. ನನ್ನ ಅನುಮತಿ ಇಲ್ಲದೆ ನನ್ನ ಟಿ ಶರ್ಟ್ ಎತ್ತಿ, ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಎದೆಯ ಮೇಲೆ ಅವರ ಕೈ ಇರಿಸಿದ್ದರು. ನಂತರ ಹೊಟ್ಟೆಯ ಮೇಲೆ ಜಾರಿಸಿದ್ದರು” ಎಂದು ಮತ್ತೊಬ್ಬ ಕುಸ್ತಿಪಟು ಆರೋಪಿಸಿದ್ದಾರೆ. ಇತರೆ ಮಹಿಳೆಯರು ಕೂಡ ಇದೇ ರೀತಿಯ ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ಕುಸ್ತಿ ಸಂಸ್ಥೆ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವೂ ಒಬ್ಬ ಮಹಿಳಾ ಕುಸ್ತಿಪಟು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.