ಪ್ರಸ್ತುತ ದೇಶದಲ್ಲಿರುವ ಅನೇಕ ದೊಡ್ಡ ವ್ಯಾಪಾರಿಗಳು ಗೀತೆ ಮತ್ತು ಮಹಾಭಾರತವನ್ನು ತಮ್ಮ ಅನುಭವಕ್ಕಿಂತಲೂ ಹೆಚ್ಚಿನದ್ದಾಗಿ ಗೀತೆಯನ್ನು ನಂಬುತ್ತಾರೆ.
ಅನೇಕ ಜನ ಪ್ರಾಧ್ಯಾಪಕರಿಗೆ Business Ethics ಕಲಿಸುವಾಗ ಕ್ಷಣಕ್ಷಣಕ್ಕೂ ನೆನಪಾಗುವದು ಮಹಾಭಾರತ. ನೈತಿಕತೆಯ ದ್ವಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಅನುಭವಿಸುವ ಧರ್ಮಸಂಕಟಕ್ಕಿಂತ ಶ್ರೇಷ್ಠವಾದ ಉದಾಹರಣೆ ಇನ್ನೊಂದ್ಯಾವುದಿದೆ? Ethics ಅಂದರೆ ನಮ್ಮಲ್ಲಿ ಧರ್ಮ. ರಾಜಧರ್ಮ, ಕ್ಷತ್ರಿಯ ಧರ್ಮ, ಸ್ತ್ರೀ ಧರ್ಮ, ಗೃಹಸ್ಥಧರ್ಮ, ವೃತ್ತಿ ಧರ್ಮ, ವ್ಯಾಪಾರಿ ಧರ್ಮ, ಹೀಗೆ ನಾವು ಹೇಳುವುದರ ಅರ್ಥವೆಂದರೆ ನಮ್ಮ ನಮ್ಮ ಜವಾಬ್ದಾರಿಗೆ ತಕ್ಕಂತೆ ನಾವು ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು, ಮತ್ತು ಅವುಗಳನ್ನು ಸರಿಯಾಗಿ ಪಾಲಿಸಬೇಕು. Ethics ಬಗ್ಗೆ ನಮ್ಮಲ್ಲಿ ನಾನಾ ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಕೃಷ್ಣನಂಥ ದೇವಪುರುಷನಿಗೆ ಇಂಥ ಪ್ರಶ್ನೆಗಳು ಉದ್ಭವಿಸುವುದಿಲ್ಲ, ಅವನಲ್ಲಿ ವಿಚಾರ ಸ್ಪಷ್ಟತೆ ಇದೆ. ಕರ್ಣನ ವಿಷಯವೂ ಹಾಗೆಯೇ. ಅವನಿಗೂ ವಿಚಾರ ಸ್ಪಷ್ಟತೆ ಇದೆ. ತಾನು ವಹಿಸಿಕೊಂಡಿರುವ ದುರ್ಯೋಧನನ ಪಕ್ಷ ಸೋಲುವುದು ನಿಶ್ಚಿತವೇ ಇದೆ. ದುರ್ಯೋಧನ ಮತ್ತು ಕೌರವರು ನೀತಿವಂತರಲ್ಲ. ಆದರೂ ಸುಯೋಧನನ ಗೆಳೆತನದ ಋಣ ಅವನ ಮೇಲಿದೆ. ಅದಕ್ಕಾಗಿ ಅವನ ಜೊತೆ ಇರುವುದೇ ತನಗೆ ಶ್ರೇಯಸ್ಕರ. ಅವನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಅವನ ಪಕ್ಷದಲ್ಲಿದ್ದುಕೊಂಡು ಹೋರಾಡಿ ಮಡಿಯುವುದೇ ಹೆಚ್ಚು ಶ್ರೇಷ್ಠ ಮತ್ತು ಅದುವೇ ಧರ್ಮ ಎನ್ನುವುದು ಅವನ ತರ್ಕ. ಅವನ ದೃಷ್ಟಿಯಿಂದ ಅದು ಸರಿಯೇ. ಇದನ್ನೇ ನಾವು Ethical relativism ಗೆ ಸೂಕ್ತ ಉದಾಹರಣೆಯಾಗಿ ಬಳಸಬಹುದು.
ಇನ್ನು ವಿದುರನ ನೀತಿಯೂ ಸ್ಪಷ್ಟ. ಯುಯುತ್ಸುವಿನ ವಿಚಾರಗಳಲ್ಲೂ ಸ್ಪಷ್ಟತೆ ಇದೆ.
ಇಡೀ ಮಹಾಭಾರತವೇ ನೀತಿ, ಅನೀತಿಗಳ ತಾಕಲಾಟದ ಒಂದು ಮಹಾನ್ ಕಥೆ, ಇತಿಹಾಸ. ಭಾರತೀಯ ಲೇಖಕರು ತಮ್ಮ Business Ethics ಪುಸ್ತಕದಲ್ಲಿ ಭಗವದ್ಗೀತೆಯ ಕೆಲವು ಬೋಧನೆಗಳನ್ನು ಸೇರಿಸಿದ್ದಾರೆಂಬುದೇ ಸಮಾಧಾನದ ಮತ್ತು ಸಂತಸದ ಸಂಗತಿ. ಇಷ್ಟೊಂದು ವಿಪುಲವಾದ ಸಾಹಿತ್ಯ ನಮಗೆ Business Ethics ಬಗ್ಗೆ ನಮ್ಮಲ್ಲಿಯೇ ಸಿಗುತ್ತದೆ. ಯಾವ್ಯಾವುದು ಎಲ್ಲಿ apply ಆಗುತ್ತೆ ಎನ್ನುವುದನ್ನು ತಿಳಿದುಕೊಳ್ಳಬೇಕಿರುವುದು ನಮ್ಮ ಜವಾಬ್ದಾರಿ.
ಶಿಕ್ಷಣದಲ್ಲಿ ಭಾರತೀಯತೆಯನ್ನು ಹೀಗೂ ತರಬಹದು.