“ದ ಕೇರಳಾ ಸ್ಟೋರಿ”. ಬಿಡುಗಡೆಯಾದ ಬೆನ್ನಲ್ಲೇ ಬ್ಯಾನಾಗುವ ಭಯವೂ ಇರುವುದರಿಂದ ಮೊದಲ ವಾರವೇ ಹೋಗಿ ನೋಡಿ ಬಂದದ್ದಾಯ್ತು. ಕೇರಳದ ಕಾಸರಗೋಡು, ಕರ್ನಾಟಕದ ಮಂಗಳೂರು ಮತ್ತಿತರ ಊರುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮತಾಂತರಗಳು ಮತ್ತು ಐಸಿಸ್ ನಂಟು ಹೊಸವಿಚಾರವೇನಲ್ಲ. ದಿನಾಲೂ ನಡೆಯುವ ವಿದ್ಯಮಾನಗಳಿಗೆ ಕಣ್ಣು-ಕಿವಿಗಳಾಗುವ ಪ್ರತಿಯೊಬ್ಬ ನಾಗರಿಕನಿಗೆ ವಿಷಯದ ಬಗ್ಗೆ ಒಂದಿಷ್ಟು ಹೆಚ್ಚು, ಒಂದಿಷ್ಟು ಕಡಿಮೆಯಾದರೂ ಮಾಹಿತಿ ಇದ್ದೇ ಇದೆ. ಭಯ ಕೇವಲ ಸಂಖ್ಯೆ ಅಥವಾ ವೇಗದ್ದಲ್ಲ, ಭಯಕ್ಕೆ ಕಾರಣ ಬೇರೆ ನೂರಿವೆ. ಯಾಕೆ ಮಕ್ಕಳು ಮತಾಂತರಕ್ಕೆ ಮರುಳಾಗುತ್ತಿದ್ದಾರೆ, ಅದರಲ್ಲೂ ಪ್ರಮುಖವಾಗಿ ಐಸಿಸ್ನ ಕಪಿಮುಷ್ಟಿಯಲ್ಲಿ ಸಿಕ್ಕಿ ಬೀಳುತ್ತಿದ್ದಾರೆ, ಯಾಕೆ ಧರ್ಮ ನಮ್ಮ ಸಂಸ್ಕೃತಿಗಿಂತ ಭಿನ್ನವಾದ, ಸಂಸ್ಕೃತಿಯೇ ಅಲ್ಲದ ಒಂದು ವಿಕೃತಿ ಅವರನ್ನು ಸೆಳೆಯುತ್ತಿದೆ? ನಾವೆಲ್ಲಿ ತಪ್ಪುತ್ತಿದ್ದೇವೆ, ಅವರ್ಯಾವ ಒಳಮಾರ್ಗ ಕಂಡುಕೊಂಡಿದ್ದಾರೆ? ಪರಿಹಾರ ಇದೆಯೇ, ಏನು ಪರಿಹಾರ? ಇವು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಉತ್ತರಗಳನ್ನೂ ನಾವೇ ಕಂಡುಕೊಳ್ಳಬೇಕಿದೆ, ಎಲ್ಲರೂ, ಎಲ್ಲವೂ ಕೈತಪ್ಪಿ ಹೋಗುವ ಮುನ್ನ.
ಮೊದಲಿಗೆ ಹಿಂದು ಧರ್ಮದ ಮನೆಗಳ ಒಳಹೊಕ್ಕು ನೋಡೋಣ. ನಮಗೆ ನಮ್ಮದೇ ಆದ ದೇವರು, ಧರ್ಮ, ಆಚರಣೆ, ಸಂಸ್ಕೃತಿ, ಸಂಸ್ಕಾರ ಎಲ್ಲ ಇವೆ. ಅವು ಮಹಾನ್ ಆಗಿವೆ, ಶ್ರೇಷ್ಠವಾಗಿವೆ ಎನ್ನುವುದನ್ನು ನಾವು ಕೇಳಿರುತ್ತೇವೆ. ಹಾಂ, ಬರಿ ಹಾಗೆ ಕೇಳಿರುವುದಷ್ಟೇ. ಹೇಗೆ ಶ್ರೇಷ್ಠ, ಏಕೆ ಮಹಾನ್ ಎನ್ನುವುದನ್ನು ತಿಳಿದುಕೊಂಡಿದ್ದೇವೆಯೇ? ಬಹಳಷ್ಟು ಸಲ ನಮ್ಮ ಧರ್ಮದ ಅರಿವು ಮಡಿ-ಮೈಲಿಗೆ, ಪೂಜೆ-ಪುನಸ್ಕಾರ ಇವುಗಳಿಗಷ್ಟೇ ಸೀಮಿತವಾಗಿರುತ್ತದೆ. ಪೂಜೆ ತಪ್ಪು ಅಂತಲ್ಲ. ದೇವರನ್ನು ಸಮೀಪಿಸಲು ಭಕ್ತಿಮಾರ್ಗವೇ ಮೊದಲ ಮೆಟ್ಟಿಲು. ಅದು ತಪ್ಪೂ ಅಲ್ಲ, ಅಪರಾಧವೂ ಅಲ್ಲ. ಆದರೆ ನಾವು ಬರೀ ಇದೇ ಅದ್ಧೂರಿತನದಲ್ಲಿ ಕಳೆದುಹೋಗಬಾರದು. ದೇವರನ್ನು ತಲುಪಲು ಕರ್ಮಮಾರ್ಗ, ಜ್ಞಾನಮಾರ್ಗ ಮತ್ತು ಆಧ್ಯಾತ್ಮಮಾರ್ಗಗಳೂ ಇವೆ. ಮತ್ತು ಇವು ಮೇಲ್ಮಟ್ಟದ ಮಾರ್ಗಗಳು. ಅವುಗಳ ಬಗ್ಗೆಯೂ ನಮಗೆ ತಿಳಿದಿರುವುದು ಒಳ್ಳೆಯದು. ಏಕೆಂದರೆ ಪರಮ ಕುತೂಹಲಿಗಳಾದ ಇಂದಿನ ಮಕ್ಕಳ ಪ್ರಶ್ನೆಗಳಿಗೆ, ಅವರನ್ನು ಸಂತೃಪ್ತ ಪಡಿಸಬಹುದಾದ ಉತ್ತರಗಳನ್ನು ನೀಡಬೇಕೆಂದರೆ ನಮಗೆ ಭಕ್ತಿಗಿಂತ ಮಿಗಿಲಾದದ್ದು ತಿಳಿದಿರಬೇಕು. ಆಗ ಮಾತ್ರ ನಾವು ನಮ್ಮ ಸನಾತನ ಧರ್ಮವನ್ನು, ಅದರ ತತ್ವಸಿದ್ಧಾಂತಗಳನ್ನು ಮಕ್ಕಳಿಗೆ ತಿಳಿಸಿ ಹೇಳಬಹುದು. ನಮ್ಮ ಧರ್ಮವು ಅತ್ಯಂತ ಸಹಜವಾಗಿಯೇ ಹೇಗೆ ಶ್ರೇಷ್ಠವಾದದ್ದು, ಅದು ಹೇಗೆ ಇನ್ನೊಂದು ನಂಬಿಕೆಯನ್ನು ಹಳಿಯದೇ, ಹೀಗಳಿಯದೇ ಇತರರಿಗೂ ಅವಕಾಶ ಮಾಡಿಕೊಡುತ್ತದೆ ಎನ್ನುವುದನ್ನು ನಾವು ಅರಿತಿರಬೇಕು. ಸಹಬಾಳ್ವೆ ಎನ್ನುವುದು ಹೇಗೆ ನಮ್ಮ ಧರ್ಮದಲ್ಲಿಯೇ ಅಂತರ್ಗತವಾಗಿದೆ ಎನ್ನುವುದು ನಮಗೆ ತಿಳಿದಿದ್ದರೆ ನಾವು ಅದನ್ನು ನಮ್ಮ ಮಕ್ಕಳಿಗೆ ದಾಟಿಸಬಹುದು. (ಹಾಗಂತ ಬೇರೆಯವರು ನಮ್ಮ ಕತ್ತು ಕೊಯ್ಯಲು ಬಂದಾಗಲೂ ಸಹಬಾಳ್ವೆ, ಶಾಂತಿ ಎನ್ನುವ ಗೊಡ್ಡುಮಂತ್ರಗಳನ್ನು ಹೇಳಬೇಕೆಂದಲ್ಲ. ಸ್ವಂತದ, ದೇಶದ ಮತ್ತು ಧರ್ಮದ ರಕ್ಷಣೆ ನಮ್ಮ ಕರ್ತವ್ಯವೇ ಆಗಿವೆ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವುದು ಹೇಡಿಗಳ ಲಕ್ಷಣ, ಅವರ ಕೆನ್ನೆಗೆ ಬಾರಿಸುವುದು ಮಾತ್ರ ಕ್ಷಾತ್ರಲಕ್ಷಣ) ಇಲ್ಲವಾದರೆ ಅವರನ್ನು ಸೆಳೆದು ನಮ್ಮ ದೇಶದ ಗಡಿಯನ್ನೇ ದಾಟಿಸಲು ಹಲವಾರು ಸಂಘಟಿತ ಪ್ರಯತ್ನಗಳು ನಿರಂತರವಾಗಿ ಕೆಲಸ ಮಾಡುತ್ತಿವೆ ಎನ್ನುವುದನ್ನು ನಾವು ಅವಶ್ಯವಾಗಿ ತಿಳಿದುಕೊಳ್ಳಬೇಕಿದೆ. ಮತ್ತು ನಾವು ತಿಳಿದುಕೊಂಡಿರುವುದಕ್ಕಿಂತ ಭಯಾನಕವಾದ ಪರಿಸ್ಥಿತಿ ಇದೆ.
ಇಂದು ಹಿಂದೂ ಮನೆಗಳಲ್ಲಿ ಕಲಿತು ಪಂಡಿತರಾದ, ಮತ್ತು ಶಾಲೆ-ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಸುವ ಜವಾಬ್ದಾರಿ ಹೊತ್ತ ಕಮ್ಯುನಿಸ್ಟ್ ಮನಸ್ಥಿತಿಯ ಪಾಲಕರಿದ್ದಾರೆ. ಅವರು ತಮ್ಮ ಮನೆಯ ಮಕ್ಕಳೊಡನೆ ಹೊರಗೆ ಶಾಲೆ-ಕಾಲೇಜಿನ ಮಕ್ಕಳನ್ನೂ ಅಡ್ಡದಾರಿಗೆಳೆದು ತಮ್ಮ ಹುಸಿ ಸಿದ್ಧಾಂತವನ್ನು ಅವರ ಅಪಕ್ವ ತಲೆಗಳೊಳಗೆ ತುಂಬಿ ಬ್ರೆನ್ ವಾಷ್ ಮಾಡುತ್ತಿದ್ದಾರೆ. ಇಂಥ ಅಡ್ನಾಡಿ ಶಿಕ್ಷಕರು ಮತ್ತು ಪಾಲಕರಿಂದ ಮಕ್ಕಳು ಗೊಂದಲಕ್ಕೊಳಗಾಗಿದ್ದಾರೆ. ನಮ್ಮ ದೇವರು ಕೈಲಾಗದವರು, ನಮ್ಮದು ಗೊಡ್ಡು ಸಂಪ್ರದಾಯಗಳ, ಅರ್ಥಹೀನ ಆಚರಣೆಗಳ, ಮೂಢ ನಂಬಿಕೆಗಳ, ಜಾತಿ-ಮತ ತಾರತಮ್ಯಗಳ ಮೂರ್ಖ ಧರ್ಮ ಎಂದವರು ಬೋಧಿಸುತ್ತಿದ್ದಾರೆ. ತಾವೂ ದೇವರನ್ನು, ಧರ್ಮವನ್ನು ನಂಬುವುದಿಲ್ಲ, ತಮ್ಮ ವಿದ್ಯಾರ್ಥಿಗಳು ಮತ್ತು ಮಕ್ಕಳಿಗೂ ಅದನ್ನೇ ಹೇಳಿಕೊಡುತ್ತಿದ್ದಾರೆ. ಇನ್ನುಳಿದ ಕೆಲ ಬುದ್ಧಿಜೀವಿಗಳ ಪ್ರಕಾರ ಬೇರೆ ಧರ್ಮಗಳು ಮಾತ್ರ ಸಮಾನತೆ, ಭ್ರಾತೃತ್ವವನ್ನು ಬೋಧಿಸುತ್ತವೆ, ನಮ್ಮದು ಬರೀ ಗೊಡ್ಡು ಸಂಪ್ರದಾಯಗಳ, ವರ್ಣಾಶ್ರಮವನ್ನು ಬೋಧಿಸುವ ಧರ್ಮ. ಇನ್ನು ಧರ್ಮವನ್ನು ನಂಬುವ ಸನಾತನಿಗಳಲ್ಲಿ ಬಹಳಷ್ಟು ಜನರು ಬರೀ ಉತ್ಸವಪ್ರಿಯರು. ಆಚರಣೆಗಳ ಹಿಂದಿನ ಮರ್ಮವನ್ನು ತಿಳಿಯಲು ಆಸಕ್ತಿಯಿಲ್ಲದೇ ಬರೀ ಆಚರಣೆಯಲ್ಲೇ ಸುಖ ಪಡುವವರು. ಇಂಥವರಿಂದ ಮಕ್ಕಳ ಸಂಶಯಗಳಿಗೆ ಪರಿಹಾರ ದೊರಕದು. ಮೊದಲೇ ಯೌವನದ ಮದದಲ್ಲಿರುವ ಮಕ್ಕಳು ಎಲ್ಲವನ್ನೂ ಪ್ರಶ್ನಿಸುವ, ಆದರೆ ಹೇಳಿದ್ದೆಲ್ಲವನ್ನೂ ಅಲ್ಲಗಳೆಯುವ ಡಿನೈಯಲ್ ಮೋಡನಲ್ಲಿರುತ್ತಾರೆ. ನಮ್ಮ ಮಕ್ಕಳು ಏನನ್ನು ಓದುತ್ತಾರೆ, ಯಾರ ಜೊತೆ ಮಾತನಾಡುತ್ತಾರೆ, ಯಾವ ವಿಷಯದ ಬಗ್ಗೆ ಚರ್ಚಿಸುತ್ತಾರೆ ಎನ್ನುವ ಯಾವ ಮಾಹಿತಿಯೂ ನಮಗಿರುವುದಿಲ್ಲ. ಹತ್ತಿರದಲ್ಲೇ ಹೊಸ್ಟೆಲ್ಲಿನಲ್ಲಿಟ್ಟ ಮಕ್ಕಳ ಭೇಟಿಗೆ ಹೋಗಲು ಆರೆಂಟು ತಿಂಗಳಾದರೂ ನಮಗೆ ಪುರುಸೊತ್ತೇ ಆಗುವುದಿಲ್ಲ. ಅಂಥ ಅತ್ಯಂತ ಕ್ರೂಷಿಯಲ್ ಸಮಯದಲ್ಲೇ, ಉಗ್ರವಾದಿ ಮತಾಂತರೀ ಸಂಸ್ಥೆಗಳು ಮಕ್ಕಳನ್ನು ಹುಡುಕಿ ಹುಡುಕಿ ಟಾರ್ಗೆಟ್ ಮಾಡುತ್ತವೆ. ನಮ್ಮ ಕೈಯಿಂದ ಜಾರಿಹೋಗುತ್ತಿರುವ ಮಕ್ಕಳ ಮನಸ್ಸಿನಲ್ಲಿ ಎದ್ದಿರುವ ಬಿರುಗಾಳಿ, ಸಮುದ್ರಮಥನ ನಮಗೆ ಗೊತ್ತೇ ಆಗುವುದಿಲ್ಲ. ಮೇಲೆ ಮೇಲೆ ನೀರು ಶಾಂತವಾಗಿಯೇ ಹರಿಯುತ್ತಿರುತ್ತದೆ. ಒಳಗೆ ಅಗ್ನಿಜ್ವಾಲೆ ಹರಡಿಕೊಳ್ಳುತ್ತಿರುತ್ತದೆ.
ಮದುವೆಯಾಗುವುದು ಮತ್ತು ಪಾಲಕರಾಗುವುದು ಎರಡೂ ಆಕಸ್ಮಿಕ ಕ್ರಿಯೆಗಳಲ್ಲ, ಹಾಗೆ ಆಗಬಾರದು. ಮದುವೆಯು ತಂದೊಡ್ಡುವ ಜವಾಬ್ದಾರಿಗಳಂತೆಯೇ ಮಾತೃತ್ವ ಮತ್ತು ಪಿತೃತ್ವ ತಂದುಕೊಡುವ ಜವಾಬ್ದಾರಿಗಳೂ ಅತೀ ಗುರುತರವಾದವುಗಳು. ಎಲ್ಲ ರೀತಿಯಲ್ಲಿ ಯೋಚಿಸಿ, ಚಿಂತನೆ ನಡೆಸಿ ಅದನ್ನು ಬರಮಾಡಿಕೊಳ್ಳಬೇಕು. ಮಕ್ಕಳಾದ ಮೇಲೆ ಅವರು ಟಿವಿಯಲ್ಲಿ ಏನನ್ನು ನೋಡಬೇಕು ಎನ್ನುವುದರ ನಿರ್ಣಯವನ್ನು ತಂದೆ-ತಾಯಿ ಇಬ್ಬರೂ ಸೇರಿಯೇ ಮಾಡಬೇಕು. ಯಾವ ವಯಸ್ಸಿಗೆ ಮಕ್ಕಳ ಕೈಗೆ ಮೊಬೈಲನ್ನು, ಕಂಪ್ಯೂಟರನ್ನು ಕೊಡಬೇಕು ಎನ್ನುವುದನ್ನೂ ನಾವು ತಪ್ಪದೇ ಯೋಚಿಸಬೇಕು. ಏಕೆಂದರೆ ಅಪಾಯಗಳು ಎಲ್ಲ ಮೂಲಗಳಿಂದ ಬಂದು ಅಪ್ಪಳಿಸಲು ತುದಿಗಾಲ ಮೇಲೆ ನಿಂತಿವೆ. ನಮ್ಮ ಡಿಫೆನ್ಸು ಕಡಿಮೆ ಬೀಳುತ್ತದೆ. ಒಂದುಸಲ ರುಚಿ ಹತ್ತಿದ ಮೇಲೆ, ಅದು ಯಾವುದೇ ಚಟವಿರಲಿ, ಬಿಡಿಸುವುದು ತುಂಬ ಕಷ್ಟವಿದೆ. ಇದು ನಮ್ಮೆಲ್ಲರ ಕಟು ಅನುಭವವಾಗಿದೆ. ಹಾಗಾಗಿ ನಮ್ಮ ಮನೆಯಲ್ಲಿ ಟಿವಿಯಲ್ಲಿ ನಾವು ಏನು ನೋಡಬೇಕು, ಎಷ್ಟು ನೋಡಬೇಕು ಎನ್ನುವುದರ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿದೆ. ನಾವು ಬೆಳೆಯುವಾಗ ಯಾವುದೇ ವಿದ್ಯುನ್ಮಾನ ಸಾಧನಗಳು ಇಲ್ಲದೇ ಇದ್ದದ್ದು ಮತ್ತು ನಾವು ಇಂಥ ಯಾವುದೇ ಆಮಿಷಕ್ಕೆ ಬಲಿ ಬೀಳದೇ ಇದ್ದದ್ದು ನಮ್ಮ ಪುಣ್ಯವೇ ಎಂದು ನನಗೀಗ ಅನಿಸುತ್ತದೆ. ಏಕೆಂದರೆ ಹದಿನೆಂಟು, ಹತ್ತೊಂಬತ್ತನೇ ವಯಸ್ಸಿಗೆ ಸ್ವಲ್ಪ ಯಾಮಾರಿದರೂ ಮರಳಿ ಬರಲಾರದ, ಹೊರಹೋಗುವ ಎಲ್ಲ ಮಾರ್ಗಗಳೂ ಬಂದಾಗಿರುವ ರಸ್ತೆಯಲ್ಲಿ ಬಹುದೂರ ಕ್ರಮಿಸಿಬಿಡಬಹುದಿತ್ತು. ಆದರೆ ನಮ್ಮ ನಮ್ಮ ಮನೆಗಳ ವಾತಾವರಣ, ನಮ್ಮ ಪಾಲಕರ ತಿಳುವಳಿಕೆ, ಜೊತೆಗೆ ನಮ್ಮ ಪೂರ್ವಜನ್ಮದ ಪುಣ್ಯವೂ ಸೇರಿ ನಮ್ಮನ್ನು ಅಂಥ ಹೊರದಾರಿಗಳಿಲ್ಲದ ಕೂಪದಲ್ಲಿ ಬೀಳುವುದನ್ನು ತಪ್ಪಿಸಿವೆ ಎಂದುಕೊಳ್ಳುತ್ತೇನೆ. ಆದರೆ ಈಗ ವಿಷಯ ಅಷ್ಟು ಸರಳವಾಗಿಲ್ಲ. ನಮ್ಮ ಮತ್ತು ಮಕ್ಕಳ ಮಧ್ಯೆ ಸಾಕಷ್ಟು ಗ್ಯಾಪ್ ಸೃಷ್ಟಿಯಾಗಿದೆ. ಮತ್ತು ಅಂಥ ಗ್ಯಾಪನ್ನು ತುಂಬಲು ರಣಹದ್ದುಗಳು ಕಾದುಕುಳಿತಿವೆ, ಇಂಥ ಮಕ್ಕಳನ್ನು ಮರಭೂಮಿಗೆ ಸಾಗಿಸಲು. ಅಲ್ಲಿ ಮಕ್ಕಳನ್ನು ಹೆತ್ತು ಮತ್ತಷ್ಟು ಉಗ್ರವಾದಿಗಳನ್ನು ಸಂಘಟನೆಗಳ ಕೈಗಿಡಲು, ಅವರ ಕ್ರೌರ್ಯವನ್ನು ತಡೆದುಕೊಂಡು ಅವರ ತೃಷೆ ತೀರಿಸುವ ಸೆಕ್ಸ್ ಕಾರ್ಮಿಕರಾಗಲು, ಎಲ್ಲ ಮುಗಿದ ಮೇಲೆ ಸುಸೈಡ್ ಬಾಂಬರಗಳಾಗಲು ಅತಿ ಕುತೂಹಲದ ಹಂತದಲ್ಲಿರುವ ಹಿಂದು, ಕ್ರಿಷ್ಚಿಯನ್ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಇವರ ಜೀವ ಮತ್ತು ಜೀವನಕ್ಕೆ ಮನೆಯಲ್ಲಿ ಕಾಡುವ ಸೊಳ್ಳೆಗಿರುವಷ್ಟೇ ಕಿಮ್ಮತ್ತು. ಅವರಿಂದ ಪ್ರತಿಭಟನೆ ಬಂದಾಗ, ಕಾಟ ಅತಿಯಾದಾಗ ಸೊಳ್ಳೆಗಳಂತೆಯೇ ಹೊಸಕಿಹಾಕಲು ರವಷ್ಟೂ ಹೇಸದ ಕ್ರೌರ್ಯವನ್ನು ಮೆರೆಯುವ ಉಗ್ರಗಾಮಿಗಳು ಇಂದು ಜಗತ್ತಿನ ಎಲ್ಲ ದೇಶಗಳಲ್ಲಿ ಹರಡಿಕೊಂಡು ಹೊಂಚುಹಾಕುತ್ತಿದ್ದಾರೆ. ಇದೊಂದು ಅಂತಃರಾಷ್ಟ್ರೀಯ ಮಟ್ಟದ ಮೋಸದ ಬಲೆ.
. ಎಚ್ಚರಿಕೆಯ ಗಂಟೆಯನ್ನು “ದ ಕೇರಳಾ ಸ್ಟೋರಿ” ಬಡೆದಿದೆ, ಎಚ್ಚೆತ್ತುಕೊಳ್ಳುವುದು, ಮತ್ತು ನಮ್ಮ ಮಕ್ಕಳನ್ನೂ, ದೇಶವನ್ನೂ ರಕ್ಷಿಸುವುದು ನಮ್ಮ ಹೊಣೆ.