ಬೆಂಗಳೂರು: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಿವಾಸದಲ್ಲಿ 30-40 ಉಗ್ರರು ಆಶ್ರಯ ಪಡೆದಿದ್ದಾರೆ ಎಂದು ಪಂಜಾಬ್ ಸರ್ಕಾರ ಹಾಗೂ ಪೊಲೀಸರು ಆರೋಪಿಸಿದ್ದರು.
ಲಾಹೋರ್ ನಲ್ಲಿರುವ ಇಮ್ರಾನ್ ಖಾನ್ ಅವರ ನಿವಾಸವಾದ ಜಮಾನ್ ಪಾರ್ಕ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ 6 ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಘೋಷಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇತ್ತೀಚಿಗೆ ಅಲ್ಲಿನ ಸೇನಾ ಕಾಪ್ಸ್ ಕಮಾಂಡರ್ ಅವರ ಮನೆಯಲ್ಲಿ ನಡೆದ ವಿಧ್ವಂಸಕ ಕೃತ್ಯದ ವಾಂಟೆಡ್ ಭಯೋತ್ಪಾದಕ ಸಿಕ್ಕಿಬಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಲಾಹೋರ್ ನಲ್ಲಿರುವ ಇಮ್ರಾನ್ ನ ಮನೆಯಲ್ಲಿ ಪೊಲೀಸರು ಸುತ್ತುವರಿದಿದ್ದು, ಎಲ್ಲರನ್ನು ಹಸ್ತಾಂತರಿಸಲು 24 ಗಂಟೆಗಳ ಗಡುವು ನೀಡಿದೆ.
ಮೇ 9ರಂದು ಪಾಕಿಸ್ತಾನದ ಅರೆಸೈನಿಕ ಪಡೆ ರೇಂಜರ್ ಗಳು ಇಮ್ರಾನ್ ಖಾನ್ ರನ್ನು ಬಂಧಿಸಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್ ನ ಆದೇಶದ ಮೇರೆಗೆ ಅವರನ್ನು ಬಿಡುಗಡೆಗೊಳಿಸಲಾಗಿದೆ. ಇಮ್ರಾನ್ ಬಂಧನದ ಹೊತ್ತಿನಲ್ಲಿ ಇಡೀ ಪಾಕಿಸ್ತಾನ ಹೊತ್ತಿ ಉರಿದು, ಎಲ್ಲಾ ಸರ್ಕಾರಿ ಕಚೇರಿಗಳನ್ನು ಧ್ವಂಸ ಮಾಡಲಾಗಿತ್ತು.
–
ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಾಳೆ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆಯಾಗಿದ್ದು, ಇದರ ನಿಯಂತ್ರಣಕ್ಕೆ ಸಂಚಾರ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಹಾಗಿದ್ರೆ ನಾಳೆ ಯಾವೆಲ್ಲಾ ರಸ್ತೆಗಳು ಬಂದ್? ಪರ್ಯಾಯ ಮಾರ್ಗ ಯಾವುದು?
1.ಕ್ವೀನ್ಸ್ ವೃತ್ತದ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಿದ್ದು, ರಸ್ತೆ ಬಳಕೆದಾರರು ಕ್ವೀನ್ಸ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಲ್ಯಾವಲ್ಲೆ ರಸ್ತೆ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ಸಂಚರಿಸಬಹುದಾಗಿರುತ್ತೆ.
2. ಬಾಳೆಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ತೆರಳುವ ವಾಹನಗಳನ್ನು ಪಟ್ಟಾ ಜಂಕ್ಷನ್ ನಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ಡೈವರ್ಷನ್ ಮಾಡುವುದರಿಂದ ಬಿಎಂಟಿಸಿ ಹಾಗು ಇತರೆ ವಾಹನಗಳು ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡ ತಿರುವು ಪಡೆದು ಕೆ.ಆರ್.ಸರ್ಕಲ್ ಮೂಲಕ ಸಂಚರಿಸಬಹುದಾಗಿರುತ್ತೆ.
3. ಸಿಟಿಓ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ರಸ್ತೆ ಬಳಕೆದಾರರು ಕಬ್ಬನ್ ರಸ್ತೆಯ ಮೂಲಕ-ಅನಿಲ್ ಕುಂಬ್ಳೆ ವೃತ್ತದ ಕಡೆಗೆ ಅಥವಾ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸಬಹುದಾಗಿರುತ್ತೆ.
4. ಹಲಸೂರು ಗೇಟ್ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.
5. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸಂಟ್ ಜೋಸೆಫ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
6. ಇತರೆ ವಾಹನಗಳನ್ನು ಬಿಬಿಎಂಪಿ ಮುಖ್ಯ ಕಛೇರಿ ಆವರಣ, ಬದಾಮಿ ಹೌಸ್, ಕೆ.ಜಿ. ರಸ್ತೆಯ ಎಡ ಬದಿಯಲ್ಲಿ ಹಾಗೂ ಯುನೈಟೆಡ್ ಮಿಷನ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಬಹುದಾಗಿರುತ್ತೆ.
7. ಆರ್.ಆರ್.ಎಂ.ಆರ್ ರಸ್ತೆ ಹಾಗು ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿರುತ್ತೆ.
8. ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರು ತಮ್ಮ ತಮ್ಮ ವಾಹನಗಳಿಂದ ಇಳಿದು ಕೆ.ಬಿ. ರಸ್ತೆ, ಆರ್.ಆರ್.ಐ.ಆರ್ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯ ಗೇಟ್ಗಳ ಮೂಲಕ ನಡೆದು ಒಳ ಪ್ರವೇಶಿಸಬೇಕಾಗಿರುತ್ತೆ. ಹಾಗು ತಮ್ಮ ವಾಹನಗಳನ್ನು ಮೇಲ್ಕಂಡ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಲು ಕೋರಿದೆ.
9. ಸಾರ್ವಜನಿಕರು ಕೆಜಿ ರಸ್ತೆಯ ಎಸ್.ಬಿ.ಎಂ. ಜಂಕ್ಷನ್ ಬಳಿ/ ರಿಚ್ ಮಂಡ್ ಸರ್ಕಲ್ ಬಳಿ/ಕ್ವೀನ್ಸ್ ಸರ್ಕಲ್ ಬಳಿ ವಾಹನದಿಂದ ಇಳಿದು ತಮ್ಮ ವಾಹನಗಳನ್ನು ಅರಮನೆ ಮೈದಾನದಲ್ಲಿ ನಿಲ್ಲಿಸುವಂತೆ ಸೂಚಿಸಲಾಗಿದೆ.
10. ಸಮಾರಂಭ ಸ್ಥಳದಲ್ಲಿ ಯಾವುದೇ ರೀತಿಯ ಸ್ಫೋಟಕದ ವಸ್ತುಗಳನ್ನು ಬೆಂಕಿಪಟ್ಟಣ, ಲೈಟರ್, ಇತ್ಯಾದಿಗಳನ್ನು ಕೊಂಡೊಯ್ಯಬಾರದು.
11. ರಸ್ತೆ ಬಳಕೆದಾರರು ಸಂಚಾರ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.
12. ನಗರದ ಯಾವುದಾದರೂ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಲ್ಲಿ / ಅಪಘಾತ ಸಂಭವಿಸಿದಲ್ಲಿ ಗಮನಿಸಿದ ಕೂಡಲೇ ಸಂಚಾರ ನಿಯಂತ್ರಣ ಕೂಡ ದೂರವಾಣಿ ಸಂಖ್ಯೆ-080-22043131 ಅಥವಾ 080- 22043030 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
13. ಮುಖ್ಯ ಕೆಲಸಗಳಿಗೆ ಹಾಗು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಇಚ್ಛಿಸುವವರು ಸಾಕಷ್ಟು ಮುಂಚೆಯೇ ಪ್ರಯಾಣವನ್ನು ಪ್ರಾರಂಭಿಸಲು ಕೋರಿದೆ.
ಕಂಠೀರವ ಸ್ಟೇಡಿಯಂ ಸಮೀಪ ಇರುವ ಸಿಇಟಿ ಪರೀಕ್ಷೆ ಕೇಂದ್ರಗಳಿಗೆ ತೆರಳುವವರಿಗೆ ಸೂಚನೆ
14. 20.05.2023 ರಂದು ಸಿಇಟಿ ಪರೀಕ್ಷೆಗೆ ಕಂಠೀರವ ಸ್ಟೇಡಿಯಂ ಸಮೀಪವಿರುವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8.30ರ ಒಳಗಾಗಿ ತಲುಪುವಂತೆ ಸೂಚಿಸಲಾಗಿದೆ.
15. ಯಾವುದೇ ವಿದ್ಯಾರ್ಥಿಗೆ ಸಂಚಾರ ಸಂಬಂಧಿತ ಸಹಾಯ ಬೇಕಿದ್ದಲ್ಲಿ, ರಸ್ತೆಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
16. ಮಧ್ಯಾಹ್ನದ ಸಿಇಟಿ ಪರೀಕ್ಷೆಗೆ ಸೆಂಟ್ ಜೋಸೆಫ್ ಪಿಯು ಇಂಡಿಯನ್ ಕಾಲೇಜು, ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಸೆಂಟ್ ಮಾರ್ಕ್ಸ್ ರಸ್ತೆ, ವಿಠಲ್ ಮಲ್ಯ ರಸ್ತೆ ಮೂಲಕ ಬಂದು ಯೂಬಿ ಸಿಟಿಯ ಮುಂಭಾಗದ ಗೇಟ್ ನಿಂದ ಕಾಲೇಜಿಗೆ ಪ್ರವೇಶಿಸಬಹುದಾಗಿರುತ್ತದೆ.
17. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸೆಂಟ್ ಜೋಸಫ್ ಪಿಯು ಕಾಲೇಜಿನ ಅಧಿಕಾರಿಗಳು ಸೆಂಟ್ ಜೋಸೆಫ್ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಉಟೋಪಚಾರವನ್ನು ಏರ್ಪಡಿಸಿರುತ್ತಾರೆ.
18. ಸೆಂಟ್ ಜೋಸೆಫ್ ಕಾಲೇಜಿಗೆ ಪರೀಕ್ಷೆಗಾಗಿ ಬರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪಲು ಸಂಚಾರ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಎಸಿಪಿ, ಸಂಚಾರ ಯೋಜನೆ ಮೊ.ನಂ. 9480801809 ಅನ್ನು ಸಂಪರ್ಕಿಸಹುದಾಗಿರುತ್ತದೆ.
–
ಉಕ್ರೇನ್ ಯುದ್ದದ ನಡುವೆ ಮಿಲಿಟರಿ-ಕೈಗಾರಿಕಾ ಸಂಕೀರ್ಣ ಮತ್ತು ಲೋಹಗಳ ಜೊತೆಗೆ ಇನ್ನು ರಷ್ಯಾದ ವಜ್ರಗಳ ಮೇಲೆ ಬ್ರಿಟನ್ ನಿಷೇಧ ಹೇರಿದೆ. ಇಷ್ಟೆ ಅಲ್ಲದೆ ರಷ್ಯಾದ ತಾಮ್ರ, ಅಲ್ಯೂಮಿನಿಯಂ ಮತ್ತು ನಿಕಲ್ ಆಮದುಗಳ ಮೇಲೆ ಕೂಡ ನಿಷೇಧ ಘೋಷಿಸಿದೆ.
ಇದರ ಜೊತೆಗೆ ಹೆಚ್ಚುವರಿ 86 ಸದಸ್ಯತನ್ನು ಮತ್ತು ಲೋಹಗಳು, ಹಡಗು ಸೇರಿದಂತೆ ಪ್ರಮುಖ ಕೈಗಾರಿಕೆಗಳಲ್ಲಿ ತೊಡಗಿರುವವರನ್ನು ಗುರಿಯಾಗಿಸಿ ಬ್ರಿಟನ್ ಈ ತಯಾರಿ ನಡೆಸುತ್ತಿದೆ. ಈ ಮೂಲಕ ರಷ್ಯಾ ಉಕ್ರೇನ್ ವಿರುದ್ಧದ ಯುದ್ಧ ಪ್ರಯತ್ನಕ್ಕೆ ಅಡ್ಡಿಪಡಿಸಲು ಬ್ರಿಟನ್ ರಷ್ಯಾದ ಪ್ರಮುಖ ಆರ್ಥಿಕತೆ ಮೇಲೆ ನೀಡಿರುವ ಕಠಿಣ ನಿರ್ಬಂಧಗಳಲ್ಲಿ ಇದು ಕೂಡ ಒಂದು.
–
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಆರು ದಿನಗಳ ಕಾಲ ಜಪಾನ್, ಪಪುವಾ ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.
ಹಿರೋಶಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಇಂದು ಜಪಾನ್ ಗೆ ತೆರಳಿದ್ದಾರೆ. ಈ ಭೇಟಿ ವೇಳೆ ಜಾಗತಿಕ ಸವಾಲುಗಳು ಮತ್ತು ಪರಿಹಾರೋಪಾಯಗಳ ಕುರಿತು ವಿಶ್ವದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ನಾನು ಭಾಗಿಯಾಗುತ್ತಿರುವುದು ಅರ್ಥಪೂರ್ಣವಾಗಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.