ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಪಡೆದುಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಯ್ಕೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ತೀವ್ರ ಪೈಪೋಟಿ ನಡೆದು ರಾಜ್ಯದ ಜನತೆಯಲ್ಲಿ ಕುತೂಹಲವನ್ನು ಮೂಡಿಸಿತ್ತು. ಕೊನೆಗೂ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿ ಸಿಎಂ ಬಿಕ್ಕಟ್ಟು ಬಗೆಹರಿಸಿದೆ.
ನಾಳೆ ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಮಧ್ಯಾಹ್ನ 3:30ಕ್ಕೆ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ನ ಬೆಂಬಲಿತ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ನೀರಿಕ್ಷೆಯಿದೆ ಹಾಗೆಯೇ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದು, ಸಿದ್ದರಾಮಯ್ಯ ಅಭಿಮಾನಿಗಳ ಮುಂದೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ 2013 ರಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣವಚನ ಸ್ವೀಕರಿಸಿ 5 ವರ್ಷ ಅಧಿಕಾರ ನಡೆಸಿದ್ದರು. ಅದರಂತೆಯೇ ಎರಡನೇ ಬಾರಿ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಅಧಿಕಾರಿಗಳು ಸಿದ್ಧತೆಗಾಗಿ ಕಂಠೀರವ ಸ್ಟೇಡಿಯಂಗೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಅಭಿಮಾನಿಗಳಲ್ಲಿ ಸಂಭ್ರಮ:
ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಅಭಿಮಾನಿಗಳ ಸಂಭ್ರಮಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಸಿದ್ದರಾಮಯ್ಯ ಮನೆಮುಂದೆ ಘೋಷಣೆಗಳನ್ನು ಕೂಗುತ್ತಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಕ್ಷೇತ್ರವಾದ ವರುಣಾದಲ್ಲೂ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಇನ್ನೂ ಸಿಎಂ ಆಗುವ ನಿರೀಕ್ಷೆಯಲ್ಲಿದ್ದ ಡಿಕೆ ಶಿವಕುಮಾರ್ ಉಪಮುಖ್ಯಂತ್ರಿ ಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲು ಹೈಕಮಾಂಡ್ ಒಪ್ಪಿಗೆಯನ್ನು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.