ಕಾಲ ಹೇಗೆ ಬದಲಾಗಿದೆ ನೋಡಿ:
ಮುಂಚೆ,
ಅವ: ಹೇ, ನೋಡಿಲ್ಲಿ, ಹೊಸ ಮೊಬೈಲ್ ಫೋನ್ ತಗೊಂಡಿದ್ದೇನೆ
ಇವ: ಹೌದಾ, ನೋಡುವ. ಎಷ್ಟಾಯ್ತು ಇದಕ್ಕೆ?
ಅವ: 1 ಸಾವಿರ ರೂಪಾಯಿ.
ಇವ: ಓಹ್, ಚೆನ್ನಾಗಿದೆ……
ಈಗ,
ಅವ: ಹೇ, ನೋಡಿಲ್ಲಿ, ಹೊಸ ಇಯರ್ಫೋನ್ ತಗೊಂಡಿದ್ದೇನೆ
ಇವ: ಹೌದಾ. ತೋರಿಸು. ಎಷ್ಟಾಯ್ತು ಇದಕ್ಕೆ?
ಅವ: 1 ಕೆ ಬ್ರೋ.
ಬದಲಾವಣೆಯನ್ನು ಗಮನಿಸಿದ್ರಾ? ಸಾವಿರದ ಜಾಗವನ್ನು ‘ಕೆ’ ಪದ ಆಕ್ರಮಿಸಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ಇಲ್ಲದವರಿಗಂತೂ ‘ಕೆ’ ಅಂದ್ರೆ ಏನು ಅಂತಲೂ ಗೊತ್ತಾಗಲಾರದು. ಹೀಗಿದ್ರೂ ಆ ಒಂದು ಅಕ್ಷರ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಾಗಾದರೆ ಏನದು ‘ಕೆ’?
ಗ್ರೀಕ್ ಪದ ಕಿಲೋ, ಇದರರ್ಥ ಸಾವಿರ, ‘ಕೆ’ ಆಗಿ ಬದಲಾಗಿದೆ. ಗ್ರೀಕರು ಮಿಲಿಯನ್ (ದಶಲಕ್ಷ) ಅನ್ನು ‘ಎಂ’ ಎಂದು ಬಳಸುತ್ತಾರೆ. ಅದನ್ನೇ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಂಬರ್ ಸಿಸ್ಟಂನಲ್ಲಿ ಬಳಸಲಾಗುತ್ತಿದೆ.
ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಹೀಗೆ ಎಲ್ಲದರಲ್ಲೂ ಅಂತರಾಷ್ಟ್ರೀಯ ಸಂಖ್ಯಾ ವ್ಯವಸ್ಥೆ ಪ್ರಕಾರವೇ ಸಂಖ್ಯೆಗಳನ್ನು ತೋರಿಸಲಾಗುತ್ತಿತ್ತು. ಆದರೆ ಈಗ ಹಂತಹಂತವಾಗಿ ಭಾರತೀಯ ಬಳಕೆದಾರರಿಗೆ ಭಾರತೀಯ ಅಂಕಿಯಂತೇ ತೋರಿಸಲಾಗುತ್ತಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ನಲ್ಲಿ ವೀಕ್ಷಣೆಯ ಸಂಖ್ಯೆಗಳನ್ನು ‘ಕೆ’ ಬದಲು ಥೌಸೆಂಡ್ (ಸಾವಿರ), ಮಿಲಿಯನ್ ಬದಲು ಲಕ್ಷವನ್ನು, ಬಿಲಿಯನ್ ಬದಲು ಕೋಟಿಯನ್ನು ತೋರಿಸಲು ಶುರುಮಾಡಿದರು. ಆದರೆ ಸಬ್ಸ್ಕ್ರೈಬರ್ಸ್ ಸಂಖ್ಯೆಯನ್ನು ಇಂದಿಗೂ ‘ಕೆ’ ರೂಪದಲ್ಲಿಯೇ ತೋರಿಸಲಾಗುತ್ತಿದೆ. ಅದೇ ರೀತಿ ಈಗ ಫೇಸ್ಬುಕ್ನಲ್ಲೂ ವೀಡಿಯೋಗಳಲ್ಲಿ ವೀಕ್ಷಣೆ, ಲೈಕು ಹಾಗೂ ಕಾಮೆಂಟ್ ಅಂಕಿಗಳನ್ನು ಸಾವಿರ, ಲಕ್ಷ ಹಾಗೂ ಕೋಟಿಗಳಲ್ಲಿಯೇ ತೋರಿಸಲಾಗುತ್ತಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಇದು ಜಾರಿಗೆ ಬಂದಿಲ್ಲ. ಉದಾಹರಣೆಗೆ, ಫಾಲೋವರ್ಸ್ ಸಂಖ್ಯೆ ‘ಕೆ’, ‘ಎಂ’ ರೂಪದಲ್ಲಿಯೇ ತೋರಿಸಲಾಗುತ್ತಿದೆ.
ಭಾರತೀಯ ಹಾಗೂ ಅಂತರರಾಷ್ಟ್ರೀಯ ಸಂಖ್ಯಾ ವ್ಯವಸ್ಥೆಯಲ್ಲಿ ಏನು ವ್ಯತ್ಯಾಸ?
ಭಾರತೀಯ ಸಂಖ್ಯಾ ವ್ಯವಸ್ಥೆಯಲ್ಲಿ ನೂರು, ಸಾವಿರ, ಲಕ್ಷ ಹಾಗೂ ಕೋಟಿ ಇರುತ್ತೆ. ಆದರೆ ಅಂತರರಾಷ್ಟ್ರೀಯ ಅಂಕಿಗಳಲ್ಲಿ ನೂರು, ಸಾವಿರ, ಮಿಲಿಯನ್ ಹಾಗೂ ಬಿಲಿಯನ್ ಇರುತ್ತೆ. ಇಲ್ಲಿ 1 ಮಿಲಿಯನ್ ಅಂದ್ರೆ 10 ಲಕ್ಷ ಹಾಗೂ 1 ಬಿಲಿಯನ್ ಅಂದ್ರೆ 100 ಕೋಟಿ. ಅಲ್ಪವಿರಾಮ ಹಾಕುವ ವಿಧಾನದಲ್ಲೂ ವ್ಯತ್ಯಾಸ ಇದೆ.
ಸಂಖ್ಯೆ: 1234567890
ಭಾರತೀಯ ರೂಪ: 123,45,67,890 (123.45 ಕೋಟಿ)
ಅಂತರರಾಷ್ಟ್ರೀಯ ವಿಧಾನ: 1,234,567,890 (1.23 ಬಿಲಿಯನ್)
ಒಟ್ಟಿನಲ್ಲಿ, ಅಂತರರಾಷ್ಟ್ರೀಯ ಸಂಖ್ಯಾ ವ್ಯವಸ್ಥೆಯಲ್ಲಿರೋ ಸಾಮಾಜಿಕ ಮಾಧ್ಯಮಗಳು, ಭಾರತೀಯ ಬಳಕೆದಾರರಿಗೆ ಭಾರತೀಯ ಸಂಖ್ಯಾ ವ್ಯವಸ್ಥೆಯಲ್ಲಿಯೇ ಅಂಕಿಗಳನ್ನು ತೋರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.