ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಎಂಬ ಜಾಗೃತಿಯನ್ನು ಮೂಡಿಸಲು ಸರ್ಕಾರ ವಿನೂತವಾಗಿ ಪ್ರಯತ್ನಿಸುತ್ತಿದೆ. ಮತದಾನನ ಅರಿವನ್ನು ಮೂಡಿಸಲು ಸರ್ಕಾರ ಹಲವಾರು ವಿಧಗಳಲ್ಲಿ ಪ್ರಯತ್ನಿಸುತ್ತಿದೆ.
ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲೇ ಮತದಾರರು ಮತದಾನ ದಿಂದ ಹೆಚ್ಚು ವಿಮುಖರಾಗುತ್ತಿದ್ದಾರೆ. ಕೆಲಸದ ಹಿನ್ನಲೆ ಅಥವಾ ಮತದಾನ ಮಾಡಲು ಲೈನಿನಲ್ಲಿ ನಿಂತು ಸಮಯ ವ್ಯರ್ಥವಾಗುತ್ತದೆ ಅನ್ನೋ ಭಾವನೆ ಹೀಗೆ ಹಲವಾರು ಕಾರಣಗಳಿಂದ ನಗರ ಪ್ರದೇಶದ ಮತದಾರರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಮತಜಾಗೃತಿಗೆ ವಿನೂತನ ಯೋಜನೆ ರೂಪಿಸಿದೆ. ಎಲ್ಲಾಸರಕಾರಿ ಕಚೇರಿಗಳ ಪತ್ರ ವ್ಯವಹಾರಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಇನ್ನಿತರ ಕಚೇರಿಗಳ ಪತ್ರ ವ್ಯವಹಾರಗಳಲ್ಲಿ”ಮತದಾನಕ್ಕಿಂತ ಇನ್ನೊಂದಿಲ್ಲ, ತಪ್ಪದೆ ಮತದಾನ ಮಾಡಿ,” ಎಂಬ ಅಡಿ ಟಿಪ್ಪಣಿಯ ಮೂಲಕ ಸಂದೇಶವನ್ನು ಸಾರಲಾಗುತ್ತಿದೆ.
ಚುನಾವಣಾ ಆಯೋಗವೂ ಪ್ರತಿವರ್ಷದಂತೆ ಕೆಎಂಎಫ್ ಹಾಲಿನ ಪ್ಯಾಕೇಟ್, ಕೆಎಸ್ಆರ್ಟಿಸಿ ಬಸ್ ಟಿಕೆಟ್, ಸೆಸ್ಕ್ ವಿದ್ಯುತ್ ಬಿಲ್ಗಳಲ್ಲಿ’ತಪ್ಪದೆ ಮತ ಚಲಾಯಿಸಿ’ ಎಂಬ ಅಡಿಬರಹ ಮುದ್ರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚೀಟಿ ಮೇಲೂ ”ನಾನು ಖಚಿತವಾಗಿ ಮತದಾನ ಮಾಡುವೆ,” ಎಂಬ ಸೀಲ್ ಒತ್ತಲಾಗುತ್ತಿದೆ.
ಈಗಾಗಲೇ ಜಿಲ್ಲಾಡಳಿತ ಸ್ವಿಪ್ ಸಮಿತಿ ರಚನೆ ಮಾಡಿಕೊಂಡು ಪ್ರತಿ ಜಿಲ್ಲೆಯಲ್ಲೂಮತದಾನದ ಬಗ್ಗೆ ಬೀದಿ ನಾಟಕ, ಜಾಥಾ, ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸುತ್ತಿದೆ. ಇನ್ನೂ ಕೆಲವು ಕಡೆ ತಾಲೂಕು ಸ್ಪಿಪ್ ಸಮಿತಿಯ ವತಿಯಿಂದ ಬಸ್ಸು ನಿಲ್ದಾಣದಲ್ಲಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆಲ್ಲ ಕೈಗೆ ಗುಲಾಬಿ ಹೂವು ಕೊಟ್ಟು ಮೇ-10 ಕ್ಕೆ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮತ್ತೊಂದು ಕಡೆ ಮಂಗಳಮುಖಿಯರಿಂದ ಮತದಾನ ಜಾಗೃತಿ ಗೀತೆಗಳಿಗೆ ನೃತ್ಯ ಮಾಡಿಸಿ ಜನರಿಗೆ ಮತದಾನದ ಅರಿವು ಮೂಡಿಸುತ್ತಿದ್ದಾರೆ. ಹೀಗೆ ಹಲವಾರು ವಿಭಿನ್ನ ಪ್ರಯತ್ನಗಳಿಂದ ಮತದಾರರಿಗೆ ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ.