ಮಂಗಳೂರು/ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆ ಇದೇ ಏಪ್ರೀಲ್ 29 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರು ನಗರದಲ್ಲಿ ರೋಡ್ ಷೋ ನಡೆಸಲಿದ್ದಾರೆ.
ಉಡುಪಿಗೆ ಮಧ್ಯಾಹ್ನ 2.20ಕ್ಕೆ ಹೆಲಿ ಕಾಪ್ಟರ್ ಮೂಲಕ ಬಂದಿಳಿದು, ಅಲ್ಲಿಂದ ಕಾಪು ಮತ್ತು ಉಡುಪಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ ಮತ್ತೆ ಆದಿಉಡುಪಿಗೆ ಬಂದು ಹೆಲಿ ಕಾಪ್ಟರ್ ಮೂಲಕ ಬೈಂದೂರಿಗೆ ಹೋಗಲಿದ್ದಾರೆ. ಬೈಂದೂರು ಕ್ಷೇತ್ರದ ಸಿದ್ದಾಪುರದಲ್ಲಿ ಸಂಜೆ 4 ಗಂಟೆಗೆ ರೋಡ್ ಶೋ ನಡೆಸಿ, ಅನಂತರ ಸಿದ್ದಾಪುರ ವೃತ್ತದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು.
ಸಂಜೆಯ ವೇಳೆಗೆ ಮಂಗಳೂರಿಗೆ ತೆರಳಿ ಅಲ್ಲಿ 5.40 ರಿಂದ 6.40 ರವರೆಗೆ ಪುರಭವನದಿಂದ ನವಭಾರತ ವೃತ್ತದವರೆಗೆ ರೋಡ್ ಶೋ ದಲ್ಲಿ ಪಾಲ್ಗೊಳ್ಳುವರು. ತದನಂತರ 7 ರಿಂದ 8 ರವರೆಗೆ ಪಕ್ಷದ ಸಭೆ ನಡೆಸಿ 8.50ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಲ್ಲಿಗೆ ತೆರಳುವರು. ಈ ಎಲ್ಲಾ ಕಾರ್ಯಕ್ರಮಗಳಿಗೂ ಜಿಲ್ಲಾ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ.