ಶಾಲೆ ಅಂದರೆ ಸಮಾನತೆಯನ್ನು ಕಲಿಸುವಂತಹ ಒಂದು ಸಂಸ್ಥೆ. ಆದರೆ ಇಂದು ಬೇಕಾದಂತ ವ್ಯವಸ್ಥೆಗಳನ್ನು ಪಡೆದುಕೊಳ್ಳುವ ಸೌಲಭ್ಯ ಎಲ್ಲರಿಗೂ ಸುಲಭವಾಗಿ ಸಿಗುವುದರಿಂದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳು ನಮ್ಮ ಕಣ್ಣು ಮುಂದೆ ಇರುವುದನ್ನು ಗಮನಿಸಬಹುದಾಗಿದೆ.
ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಹುಡುಗರಿಗೆ ಮಾತ್ರ ಶಾಲೆಗಳಿಗೆ ಕಳಿಸಲಾಗಿತ್ತು. ಹುಡುಗಿಯರಿಗೆ ಮನೆಯಲ್ಲಿ ಯಾರಾದರೂ ಗುರುಗಳನ್ನು ಗುರುತಿಸಿ ಅವಳಿಗೆ ಸಾಮಾನ್ಯ ಜ್ಞಾನ ಸಿಗುವಂತೆ ಮಾಡಲಾಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಸಮಾನತೆ ಎನ್ನುವುದೆಲ್ಲ ಕಡೆ ಪಸರಿಸಿಕೊಂಡಿದ್ದರಿಂದ ಹೆಣ್ಣು ಗಂಡು ಸಮಾನರಾಗಿ ಶಿಕ್ಷಣ ಪಡೆದುಕೊಂಡು ಇಬ್ಬರು ಕೂಡ ಉತ್ತಮ ಸ್ಥಾನಮಾನವನ್ನು ಪಡೆಯುತ್ತಿರುವುದನ್ನು ಕಾಣಬಹುದಾಗಿದೆ. ತಾಲೂಕಿನಲ್ಲಿ 1, 2 ಈ ತರ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳ ಶಾಲೆ ಕಾಣಿಸಿಕೊಳ್ಳುತ್ತದೆ ಉಳಿದೆಲ್ಲ ಶಾಲೆಗಳು ಗಂಡು ಹೆಣ್ಣು ಮಕ್ಕಳು ಒಟ್ಟಾಗಿ ಇರುವಂತ ಶಾಲೆಯನ್ನು ನಾವು ನೋಡುತ್ತೇವೆ.
ಹೆಣ್ಣು ಮಕ್ಕಳಿಗಷ್ಟೇ ಪ್ರವೇಶವಿರುವ ಶಾಲೆಗಳನ್ನು ನಾವು ಗಮನಿಸುವುದಾದರೆ ಅಲ್ಲಿ ಗಂಡು ಮಕ್ಕಳಿಗೆ ಪ್ರವೇಶ ಇರುವುದಿಲ್ಲ. ಶಿಕ್ಷಕರನ್ನು ಕೂಡ ಮಹಿಳೆಯರೇ ಹೆಚ್ಚಾಗಿ ಇರುತ್ತಾರೆ ಹಾಗಂತ ಪುರುಷ ಶಿಕ್ಷಕರು ಇರೋದಿಲ್ಲ ಅಂತೇನಿಲ್ಲ.
ಏಕಲಿಂಗ ಶಾಲೆಗಳಲ್ಲಿ ಗೊಂದಲಗಳು ಕಡಿಮೆ ಇರುತ್ತದೆ. ಅಂದರೆ ಎರಡು ಲಿಂಗಗಳು ಒಂದೇ ಸೂರಿನಡಿ ಕಲಿಯುತ್ತಿದ್ದರೆ ಗೊಂದಲಗಳು ಉಂಟಾಗುತ್ತವೆ. ಹುಡುಗಿಯರು ಇದ್ದ ಶಾಲೆ ಎಂದರೆ ಅಲ್ಲಿ ಕೇವಲ ಅವರಿಗೆ ಯಾವ ರೀತಿ ಅನುಕೂಲಗಳು ಬೇಕೋ ಅದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಆಗ ಹೆಣ್ಣು ಮಕ್ಕಳು ಕೂಡ ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಮಹತ್ವ ಕೊಟ್ಟು ಕಲಿಯುವುದರಲ್ಲಿ ಮಗ್ನರಾಗುತ್ತಾರೆ ಎಂಬ ಕಲ್ಪನೆ ಕೂಡ ಇದೆ.
ಏಕಲಿಂಗದ ಶಾಲೆಯಲ್ಲಿ ಹುಡುಗಿಯರು ಹುಡುಗರೊಂದಿಗೆ ಸ್ಪರ್ಧಿಸದೆ ತಮ್ಮ ಕೌಶಲ್ಯಗಳನ್ನು ತಮ್ಮದೇ ಆದ ವೇಗದಲ್ಲಿ ಅನ್ವೇಷಿಸಿಕೊಂಡು ಶಿಕ್ಷಣ ಪಡೆಯುತ್ತಾರೆ.
ಒಂದೇ ಲಿಂಗವಿರುವ ಶಾಲೆಯಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗದೇ ತಮ್ಮದೇ ಆದ ದೃಷ್ಟಿಕೋನದಲ್ಲಿ ಕೇವಲ ವಿದ್ಯೆಯನ್ನು ಮಾತ್ರ ಕಲಿಯುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಹುಡುಗರು ಹುಡುಗಿಯರು ಇರುವ ಶಾಲೆಗಳಲ್ಲಿ ಸ್ಪೋರ್ಟ್ಸ್ ಸಮಯದಲ್ಲಿ ನಾಚಿಕೆ ಪಟ್ಟಿಕೊಂಡು ತಮ್ಮಲ್ಲಿ ಇರುವ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಲು ಮುಂದಾಗದೆ ಯಾವುದೇ ಪ್ರದರ್ಶನ ನೀಡದೆ ಹಿಂದೆ ಸರಿಯುತ್ತಾರೆ.
ಸಿಂಗಲ್ ಜೆಂಡರ್ ಶಾಲೆಗಳಲ್ಲಿ ಮಕ್ಕಳು ಮಾನಸಿಕವಾಗಿ ಆಕರ್ಷಣೆಗೆ ಒಳಗಾಗದೆ ಜಾಗ್ರತೆಯಿಂದ ಓದಿನ ಕಡೆಗೆ ಜಾಸ್ತಿ ಗಮನ ನೀಡಬಹುದಾಗಿದೆ.
ಗಂಡು ಮತ್ತು ಹೆಣ್ಣು ಮಕ್ಕಳು ಇರುವ ಶಾಲೆಗಳಲ್ಲಿ ಇಬ್ಬರನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಪಾಠಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಏಕಲಿಂಗ ಶಾಲೆಗಳಲ್ಲಿ ಅಂತಹ ಕಷ್ಟ ಇರುವುದಿಲ್ಲ ಎಂಬ ವಾದವೂ ಇದೆ.
ಇಂದಿನ ಕಾಲದ ಮಕ್ಕಳು ಮೊಬೈಲ್, ಟಿವಿ, ಅಂತರ್ಜಾಲ ವೀಕ್ಷಿಸಿಕೊಂಡು ಎಲ್ಲಾ ವಿಷಯದಲ್ಲಿಯೂ ತುಂಬಾ ಬುದ್ಧಿವಂತರಾಗಿರುತ್ತಾರೆ. ಮೊದಲೆಲ್ಲಾ ಪಿಯುಸಿ ಡಿಗ್ರಿಯಲ್ಲಿ ಪ್ರೀತಿ ಪ್ರೇಮ ಶುರುವಾಗುತ್ತಿದ್ದರೆ ಇಂದಿನ ಕಾಲದಲ್ಲಿ ಏಳನೇ ಎಂಟನೇ ಕ್ಲಾಸಿನಲ್ಲಿ ಹೆಣ್ಣು ಗಂಡು ಮಕ್ಕಳ ಆಕರ್ಷಣೆ ಶುರುವಾಗುತ್ತದೆ ಅವರು ವಿದ್ಯಾಭ್ಯಾಸಕ್ಕಿಂತ ಬೇರೆ ಇನ್ನಿತರ ಚಟುವಟಿಕೆಯಲ್ಲಿ ಜಾಸ್ತಿ ಆಗಿರುತ್ತದೆ. ಅದನ್ನು ಗಮನಿಸಿದಾಗ ಏಕಲಿಂಗ ಶಾಲೆಗಳು ಇರುವುದು ಉತ್ತಮ ಅನ್ನಿಸುತ್ತದೆ.
ಆದರೆ ಏಕ ಲಿಂಗ ಶಾಲೆಯಲ್ಲಿ ಮಕ್ಕಳು ಸಮಾನಂತರವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಕೇವಲ ಅವರ ಸಹಪಾಠಿಗಳೊಂದಿಗೆ ಮಾತ್ರ ವ್ಯವಹರಿಸುವುದಕ್ಕೆ ತಿಳಿದಿರುತ್ತದೆ ಅದು ಬಿಟ್ಟು ಪರಲಿಂಗದವರೊಂದಿಗೆ ಹೇಗೆ ವರ್ತಿಸಬೇಕು ಅವರೊಂದಿಗೆ ಹೇಗೆ ಸಾಮಾನ್ಯರಂತೆ ಹೊಂದಿಕೊಂಡು ಹೋಗಬೇಕು ಎನ್ನುವ ಅರಿವು ಕಡಿಮೆ ಇರುತ್ತದೆ.
ಒಟ್ಟಿನಲ್ಲಿ ಓದುವ ಮಕ್ಕಳಿಗೆ ಕೇವಲ ಕಲಿಯುವುದೊಂದೇ ಮನಸ್ಸಿನಲ್ಲಿ ಇದ್ದರೆ ಯಾವ ಶಾಲೆಗೆ ಸೇರಿಸಿದರು ಅವರ ಕಡೆಯಿಂದ ತಪ್ಪು ನಡೆಯದೇ ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಚತುರರಾಗಿರುತ್ತಾರೆ.