ನಮ್ಮ ರಾಜ್ಯದ ಹೆಮ್ಮೆಯ ಮೈಸೂರ್ ಪಾಕ್ ಇದೀಗ ವಿಶ್ವದೆಲ್ಲೆಡೆ ತನ್ನ ರುಚಿಯನ್ನು ಹರಡಿದ್ದು, ವಿದೇಶಿಗರೂ ಮನಸೋಲುವಂತೆ ಮಾಡಿದೆ. ದೇಶ ವಿದೇಶಗಳಲ್ಲೂ ಹೆಸರು ವಾಸಿಯಾಗಿರುವ ಮೈಸೂರುಪಾಕ್ ಇದೀಗ ವಿಶ್ವದ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್ನ ಟಾಪ್ 50 ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮೈಸೂರುಪಾಕ್ಗೆ 4.4 ರೇಟಿಂಗ್ನಿಂದಿಗೆ 14ನೇ ಸ್ಥಾನ ಸಿಕ್ಕಿದೆ. ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರವಾಗಿದೆ. ಸುಮಾರು 90 ವರ್ಷಗಳ ಹಿಂದೆ ಮೈಸೂರಿನ ಒಡೆಯರ್ ಸಾಮ್ರಾಜ್ಯದಲ್ಲಿ ಮುಖ್ಯ ಬಾಣಸಿಗರಾಗಿದ್ದ ಮಾದಪ್ಪ ಆಗಿನ ರಾಜ ಕೃಷ್ಣರಾಜ ಒಡೆಯರ್ ಊಟಕ್ಕೆ ಕೂತಾಗ ತಟ್ಟೆಯಲ್ಲಿ ಸಿಹಿ ತಿಂಡಿ ಇಲ್ಲದನ್ನು ಗಮನಿಸಿ ಅವಸರಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟಿನ ಮಿಶ್ರಣ ತಯಾರಿಸಿಕೊಟ್ಟು ಮಾಹರಾಜರಿಂದ ಪ್ರಶಂಸೆ ಗಿಟ್ಟಿಸಿದ ಆ ತಿಂಡಿ ಇವತ್ತು ಜಾಗತಿಕ ಮನ್ನಣೆಯನ್ನು ಪಡೆದುಕೊಂಡಿದೆ.
ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತದ ಸಿಹಿತಿನಿಸುಗಳಾದ ಕುಲ್ಫಿಗೆ 4.3 ರೇಟಿಂಗ್ ನೊಂದಿಗೆ 18ನೇ ಸ್ಥಾನ ಗಿಟ್ಟಿಸಿಕೊಂಡರೆ, ಫಲೂದಾ 4.0 ರೇಟಿಂಗ್ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.