ರಾಜ್ಯದಲ್ಲೀಗ ಅನ್ನಭಾಗ್ಯ ರಾಜಕೀಯ ಜೋರಾಗಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಕೂಡ ಒಂದು .ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡಲು ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧಾರ ಮಾಡಿದ್ದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಸಿದ್ದರಾಮಯ್ಯ ಕನಸಿನ ಯೋಜನೆಯಾಗಿದ್ದ ಅನ್ನಭಾಗ್ಯಕ್ಕೆ ಆಹಾರ ಧಾನ್ಯದ ಕೊರತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಕೇಂದ್ರದತ್ತ ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ. ಅನ್ನಭಾಗ್ಯ ಯೋಜನೆಗೆ ಕಲ್ಲು ಹಾಕುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ರೀತಿಯಲ್ಲಿ ವರ್ತಿಸುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಪರಿಣಾಮ ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ.
ಜುಲೈ 1 ರಂದು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆ.ಟನ್ ಅಗತ್ಯವಿದೆ ಎಂದು ಕೋರಿ ಜೂನ್ 9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂನ್ 12 ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್ ಗೆ 3400 ರೂ. ದರದಲ್ಲಿ ಅಕ್ಕಿ ಪೂರೈಕೆ ಮಾಡವುದಾಗಿ ಪತ್ರ ಬರೆದಿತ್ತು. ಆದರೆ ಇದೀಗ ದಿಢೀರ್ ಆಗಿ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಸ್ಥಗಿತಗೊಳಿಸಿದೆ. ಇದಕ್ಕೆ ಮುಂಗಾರು ವಿಳಂಬ ಎಂಬ ಕಾರಣವನ್ನು ನೀಡಿದೆ ಎಂದು ಸರ್ಕಾರ ಹೇಳುತ್ತಿದೆ.
ತೆಲಂಗಾಣದತ್ತ ಕೆ.ಎಚ್ ಮುನಿಯಪ್ಪ :
ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಅವರು ತೆಲಂಗಾಣಕ್ಕೆ ತೆರಳಿದ್ದಾರೆ. ಅಕ್ಕಿ ಬೆಳೆಯುವ ಕೆಲವು ರಾಜ್ಯಗಳ ಪೈಕಿ ತೆಲಂಗಾಣವೂ ಒಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣಕ್ಕೆ ತೆರಳಿ ಕೆ.ಎಚ್ ಮುನಿಯಪ್ಪ ಮಾತುಕತೆ ನಡೆಸಿದ್ದಾರೆ. ಜೊತೆಗೆ ಛತ್ತೀಸ್ಗಡ, ಹರಿಯಾಣದ ಸರ್ಕಾರದ ಜೊತೆಗೂ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.
ಸಿಎಂ ಕೇಂದ್ರದ ವಿರುದ್ದ ಕಿಡಿ:
ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲನ್ನು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎಂದರೆ ಇವರನ್ನು ಬಡವರ ವಿರೋಧಿಗಳು ಎಂದು ಕರೆಯದೆ ಬೇರೇನು ಹೇಳಬೇಕು. ಕೇಂದ್ರ ಸರ್ಕಾರ ಉಚಿತವಾಗಿಯೇನೂ ಅಕ್ಕಿ ನೀಡುವುದಿಲ್ಲ ನಾವು ಹಣ ನೀಡಿ ಪಡೆಯುವುದು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಿದ್ದ 5 ಕೆ.ಜಿ. ಅಕ್ಕಿಯ ಸರಬರಾಜನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಈ ಧೋರಣೆಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಅಕ್ಕಿಯ ಕೊರತೆಯನ್ನು ತೆಲಂಗಾಣ, ಪಂಜಾಬ್ ರಾಜ್ಯಗಳಿಂದ ಒದಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಾಲೆಳೆದ ಬಿಜೆಪಿ ನಾಯಕರು:
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಅಕ್ಕಿ ಸರಬರಾಜು ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಗೊಬೆ ಕೂರಿಸುವ ಹುನ್ನಾರು ಮಾಡುತ್ತಿದೆ. ಎಂದು ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡುವ ವಿಚಾರದಲ್ಲಿ ರಾಜಕಾರಣ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ದಪಡಿಸುವಾಗ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದಿರಾ? ಈ ಹಿಂದೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಕೊಟ್ಟ ಅಕ್ಕಿಯನ್ನೇ ನಾನು ಉಚಿತವಾಗಿ ಕೊಟ್ಟೆ ಎಂದು ಡೋಂಗಿ ಹೊಡೆದವರು ನೀವಲ್ಲವೇ ? ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಇನ್ನು ಮೇಲೆ ಇವರ ಹತ್ತಿರ ಏನೇ ಮಾಡಲು ಆಗದಿದ್ದರೂ, ಅದನ್ನು ಕೇಂದ್ರ ಸರ್ಕಾರದ ಮೇಲೆ ತೋರಿಸುತ್ತಾರೆ. ಇನ್ನು ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗಲಿದೆ. ದೀವಾಳಿ ಎದ್ದ ಮೇಲೆ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಸ್ಟೇಟ್ಮೆಂಟ್ ಏನೆಂದರೆ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಲಿಲ್ಲ. ಬರಬೇಕಾದ ದುಡ್ಡು ಬರಲಿಲ್ಲ. ಅದಕ್ಕಾಗಿ ನಮ್ಮ ಬಳಿ ಏನೂ ಮಾಡಲು ಆಗಲಿಲ್ಲ ಎಂದು ದೂರುತ್ತಾರೆ ಎಂದು ಮಾಜಿ ಸಚಿವ ಆರ್ ಆಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಾವು 10 ಕೆಜಿ ಅಕ್ಕಿ ಕೊಡುತ್ತೀವಿ ಅಂತಾ ಜನಕ್ಕೆ ಮಾತು ಕೊಟ್ಟು ಅದು ಸಾಧ್ಯವಾಗದಿದ್ದಾಗ ಮೋದಿ ಸರ್ಕಾರದ ಮೇಲೆ ಗೊಬೆ ಕೂರಿಸುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದ್ದಾರೆ.